ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ತಪ್ಪು ಒಪ್ಪಿಕೊಂಡ ಹಾಸ್ಯ ನಟ ಚಂದ್ರಪ್ರಭ; ಸಿಕ್ತು ಟ್ವಿಸ್ಟ್
‘ಬೈಕ್ ಸವಾರ ಕುಡಿದಿದ್ದ ಎಂದು ಹೇಳಿದ್ದೆ. ನನ್ನನ್ನು ಕ್ಷಮಿಸಿ. ಆತ ಕುಡಿದಿರಲಿಲ್ಲ. ನಾನು ಮಾಡಿದ್ದು ತಪ್ಪಾಯ್ತು. ಎಲ್ಲರಿಗೂ ಕ್ಷಮೆ ಕೇಳುತ್ತೇನೆ. ನಾನು ಮತ್ತು ನನ್ನ ಸ್ನೇಹಿತ ಆಸ್ಪತ್ರೆಯವರೆಗೆ ಹೋಗಿದ್ದೆವು. ಆದರೆ ಆಸ್ಪತ್ರೆಗೆ ಸೇರಿಸಲಿಲ್ಲ. ನನಗೆ ಭಯವಾಯಿತು’ ಎಂದು ಚಂದ್ರಪ್ರಭ ಹೇಳಿದ್ದಾರೆ. ಪೊಲೀಸ್ ಠಾಣೆ ಎದುರು ಅವರು ಕಣ್ಣೀರು ಹಾಕಿದ್ದಾರೆ.
ಕನ್ನಡ ಕಿರುತೆರೆಯ ‘ಗಿಚ್ಚಿ ಗಿಲಿಗಿಲಿ’ ಶೋ ಮೂಲಕ ಜನಪ್ರಿಯತೆ ಪಡೆದ ಹಾಸ್ಯ ನಟ (Comedy Actor) ಚಂದ್ರಪ್ರಭ ಅವರು ವಿವಾದಕ್ಕೆ ಸಿಲುಕಿದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆದ ಅಪಘಾತ (Road Accident) ಪ್ರಕರಣದಲ್ಲಿ ಅವರು ಸಂಕಷ್ಟ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಅವರು ಚಲಿಸುತ್ತಿದ್ದ ಕಾರು ಮಾಲತೇಶ್ ಎಂಬ ಬೈಕ್ ಸವಾರನಿಗೆ ಡಿಕ್ಕಿ ಹೊಡಿದಿತ್ತು. ಈ ಘಟನೆಯಲ್ಲಿ ತಮ್ಮದು ಯಾವುದೇ ತಪ್ಪು ಇಲ್ಲ ಎಂದು ಚಂದ್ರಪ್ರಭ (Chandraprabha) ಹೇಳಿಕೆ ನೀಡಿದ್ದರು. ಅಲ್ಲದೇ, ಆ ಬೈಕ್ ಸವಾರ ಮದ್ಯಪಾನ ಮಾಡಿದ್ದರು ಎಂದು ಕೂಡ ಚಂದ್ರಪ್ರಭ ಆರೋಪಿಸಿದ್ದರು. ಆದರೆ ಈಗ ತಮ್ಮ ಹೇಳಿಕೆ ಬದಲಾಯಿಸಿದ್ದಾರೆ. ಅಂದು ನಡೆದ ಅಪಘಾತದಲ್ಲಿ ತಮ್ಮದೇ ತಪ್ಪು ಎಂದು ಚಂದ್ರಪ್ರಭ ಒಪ್ಪಿಕೊಂಡಿದ್ದಾರೆ. ಚಿಕ್ಕಮಗಳೂರು ಸಂಚಾರ ಪೊಲೀಸ್ ಠಾಣೆ ಬಳಿ ಟಿವಿ9ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ತಪ್ಪು ಒಪ್ಪಿಕೊಂಡ ಚಂದ್ರಪ್ರಭ:
ಚಿಕ್ಕಮಗಳೂರಿನ ಸಂಚಾರಿ ಠಾಣೆ ಮುಂಭಾಗ ಚಂದ್ರಪ್ರಭ ಅವರು ಕಣ್ಣೀರು ಹಾಕಿದ್ದಾರೆ. ಸೋಮವಾರ (ಸೆಪ್ಟೆಂಬರ್ 4) ಅವರು ಅಪಘಾತ ಮಾಡಿ ಎಸ್ಕೇಪ್ ಆಗಿದ್ದರು. ಪೊಲೀಸರ ಸೂಚನೆ ಮೇರೆಗೆ ಇಂದು (ಸೆಪ್ಟೆಂಬರ್ 8) ಚಿಕ್ಕಮಗಳೂರು ಠಾಣೆಗೆ ಅವರು ಹಾಜರಾಗಿದ್ದಾರೆ. ಈ ವೇಳೆ ಅವರು ತಪ್ಪು ಒಪ್ಪಿಕೊಂಡು ಕಣ್ಣೀರು ಹಾಕಿದ್ದೂ ಅಲ್ಲದೇ, ಅಪಘಾತಕ್ಕೆ ಒಳಗಾದ ಯುವಕನ ಯೋಗಕ್ಷೇಮ ವಿಚಾರಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ರಸ್ತೆ ಅಪಘಾತ: ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ಮಾಲ್ತೇಶ್ನ ಅಮ್ಮ ಕಮೇಡಿಯನ್ ಚಂದ್ರಪ್ರಭಾನನ್ನು ಶಪಿಸಿದರು!
ಅಪಘಾತದ ಬಗ್ಗೆ ಚಂದ್ರಪ್ರಭ ಹೇಳಿಕೆ:
‘ನಾನು ಮಾಡಿದ ಕೆಲಸ ತಪ್ಪಾಯ್ತು. ಎಲ್ಲರಿಗೂ ಕ್ಷಮೆ ಕೇಳುತ್ತೇನೆ. ಆತ ಕುಡಿದಿದ್ದ ಎಂದು ಹೇಳಿದ್ದೆ. ತಪ್ಪಾಯ್ತು. ನನ್ನನ್ನು ಕ್ಷಮಿಸಿ. ಆತ ಕುಡಿದಿರಲಿಲ್ಲ. ನಾನು ಮತ್ತು ನನ್ನ ಸ್ನೇಹಿತ ಆಸ್ಪತ್ರೆಯವರೆಗೆ ಹೋಗಿದ್ದೆವು. ಆದರೆ ಆಸ್ಪತ್ರೆಗೆ ಸೇರಿಸಲಿಲ್ಲ. ನನಗೆ ಭಯವಾಯಿತು. ಅಪಘಾತವಾದ ಯುವಕನ ಯೋಗಕ್ಷೇಮದ ಬಗ್ಗೆ ನಾನು ವಿಚಾರಿಸಬೇಕಿತ್ತು. ಆದರೆ, ವಿಚಾರಿಸಲಿಲ್ಲ. ನಾನು ಬಡವ, ತಂದೆ ಸತ್ತು 11 ವರ್ಷವಾಯ್ತು. ಆಸ್ಪತ್ರೆಗೆ ಹೋಗಿ ಯೋಗಕ್ಷೇಮ ವಿಚಾರಿಸುತ್ತೇನೆ. ಮಾಲತೇಶ್ ಅವರ ಆಸ್ಪತ್ರೆ ಖರ್ಚಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ’ ಎಂದು ಹಾಸ್ಯನಟ ಚಂದ್ರಪ್ರಭ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಗಾಯಾಳು ಆಸ್ಪತ್ರೆಗೆ ಸೇರಿಸಿದ್ದು ನಾನು, ಚಂದ್ರಪ್ರಭ ಅಲ್ಲ; ಹಾಸ್ಯಕಲಾವಿದನ ವಿರುದ್ಧ ಆಟೋ ಚಾಲಕ ಆಕ್ರೋಶ
ಅಂದು ಚಂದ್ರಪ್ರಭ ಹೇಳಿದ್ದೇನು?
‘ನನ್ನ ಕಾರಿನ ಎಡಭಾಗಕ್ಕೆ ಸ್ಕೂಟಿ ಟಚ್ ಆಯಿತು. ಅದರಲ್ಲಿ ಇದ್ದ ವ್ಯಕ್ತಿ ಕುಡಿದಿದ್ದರು. ನಾನು ಮತ್ತು ನನ್ನ ಸ್ನೇಹಿತರೊಬ್ಬರು ಆಟೋ ಕರೆಸಿ, ಗಾಯಾಳವನ್ನು ಆಸ್ಪತ್ರೆಗೆ ಸೇರಿಸಿದೆವು. ನನಗೆ ಬೇರೆ ಕಾರ್ಯಕ್ರಮ ಇದ್ದಿದ್ದರಿಂದ ಅಲ್ಲಿಂದ ತೆರಳಿದೆ. ನಂತರ ಪೊಲೀಸರು ಫೋನ್ ಮಾಡಿ ಕರೆದರು. ನಾನು ಶೂಟಿಂಗ್ನಲ್ಲಿ ಬ್ಯುಸಿ ಆದೆ. ಕಾನೂನಿನ ಪ್ರಕಾರವಾಗಿ ನಾನು ಪೊಲೀಸರು ಹೇಳಿದಂತೆ ಕೇಳುತ್ತೇನೆ. ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಆಗುತ್ತಿದೆ. ಘಟನೆಯ ಸಿಸಿಟಿವಿ ಇದೆ. ಅದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ’ ಎಂದು ಚಂದ್ರಪ್ರಭ ಅವರು ಈ ಮೊದಲು ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.