ನಟಿ ದಿವ್ಯಾ ಉರುಡುಗ ಅವರು ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ಮೂಲಕ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದರು. ಈಗ ಅವರು ಕಿರುತೆರೆ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರ ಆಗಲಿದ್ದಾರೆ. ‘ಕಲರ್ಸ್ ಕನ್ನಡ’ (Colors Kannada) ವಾಹಿನಿಯ ಹೊಸ ಧಾರಾವಾಹಿಯಲ್ಲಿ ದಿವ್ಯಾ ಉರುಡುಗ (Divya Uruduga) ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ‘ನಿನಗಾಗಿ’ (Ninagagi) ಎಂಬುದು ಈ ಹೊಸ ಸೀರಿಯಲ್ನ ಶೀರ್ಷಿಕೆ. ಇದರಲ್ಲಿ ಅವರ ಜೊತೆ ‘ಗಿಣಿರಾಮ’ ಸೀರಿಯಲ್ ಖ್ಯಾತಿಯ ನಟ ರಿತ್ವಿಕ್ ಮಠದ್ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಈ ಹೊಸ ಧಾರಾವಾಹಿ ಬಗ್ಗೆ ಇಲ್ಲಿದೆ ಮಾಹಿತಿ..
ಇತ್ತೀಚೆಗೆ ‘ನಿನಗಾಗಿ’ ತಂಡದವರು ಸುದ್ದಿಗೋಷ್ಠಿ ನಡೆಸಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬೇರೆ ಬೇರೆ ವ್ಯಕ್ತಿತ್ವದ ಇಬ್ಬರು ಜೊತೆಯಾಗಿ ಸಾಗುವ ಕಥೆಯನ್ನು ‘ನಿನಗಾಗಿ’ ಸೀರಿಯಲ್ ಹೊಂದಿರಲಿದೆ. ಮೇ 27ರಿಂದ ಈ ಧಾರಾವಾಹಿ ಪ್ರಸಾರ ಆರಂಭ ಆಗಲಿದೆ. ಸೋಮವಾರದಿಂದ ಶುಕ್ರವಾರ ರಾತ್ರಿ 8 ಗಂಟೆಗೆ ‘ನಿನಗಾಗಿ’ ಧಾರಾವಾಹಿ ಪ್ರಸಾರ ಆಗಲಿದೆ.
‘ಈ ಹಿಂದೆ ನನ್ನನ್ನು ಶಿವರಾಮ್ ಪಾತ್ರದಲ್ಲಿ ಮಾಸ್ ಆಗಿ ನೋಡಿದ್ದೀರಿ. ಆದರೆ ಈಗ ಆ ರೀತಿಯ ಮಾಸ್ ಗುಣಗಳು ಹೊಸ ಧಾರಾವಾಹಿಯ ಪಾತ್ರದಲ್ಲಿ ಇರುವುದಿಲ್ಲ. ಬಹಳ ಸರಳ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತೇನೆ. ಒಂದು ಮಗುವಿನ ತಂದೆ ಪಾತ್ರ. ದುಡ್ಡಿನ ಹಿಂದೆ ಹೋಗುವ ಮನುಷ್ಯ ಇವನಲ್ಲ. ಅಂಥ ಪಾತ್ರವನ್ನು ಮಾಡುತ್ತಿದ್ದೇನೆ’ ಎಂದಿದ್ದಾರೆ ರಿತ್ವಿಕ್ ಮಠದ್.
ಈ ಧಾರಾವಾಹಿಗೆ ಸಂಪಥ್ವಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಒಂದು ಒಳ್ಳೆಯ ಪ್ರಾಜೆಕ್ಟ್ ತೆಗೆದುಕೊಂಡು ಬಂದಿದ್ದೇನೆ ಅಂತ ಹೆಮ್ಮೆಯಿಂದ ಹೇಳುತ್ತೇನೆ. ಈ ಧಾರಾವಾಹಿ ಬಹಳ ಸ್ಕೋರ್ ಮಾಡುತ್ತದೆ. ಜೈ ಮಾತಾ ಕಂಬೈನ್ಸ್ ಅಶ್ವಿನಿ ಅವರು ನಮಗೆ ಬೆಂಬಲವಾಗಿ ನಿಂತಿದ್ದಾರೆ. ಇಡೀ ಕಲರ್ಸ್ ಕನ್ನಡದ ತಂಡ ನಮ್ಮ ಬೆಂಬಲಕ್ಕೆ ಇದೆ. ಪ್ರೋವೋ ನೋಡಿ ಜನರು ಇಷ್ಟಪಟ್ಟಿದ್ದಾರೆ. ನಾನು ಈ ಮೊದಲು ‘ನಮ್ಮನೆ ಯುವರಾಣಿ’ ಧಾರಾವಾಹಿ ಮಾಡಿದ್ದೆ. ಈಗ ಹೊಸ ಕಥೆ ಹೇಳಲಿದ್ದೇನೆ’ ಎಂದಿದ್ದಾರೆ ನಿರ್ದೇಶಕರು.
ಇದನ್ನೂ ಓದಿ: ಟ್ರೆಡಿಷನಲ್ ಲುಕ್ನಲ್ಲಿ ಕಣ್ಣು ಕುಕ್ಕಿದ ದಿವ್ಯಾ ಉರುಡುಗ
‘ನಿನಗಾಗಿ’ ಧಾರಾವಾಹಿಯಲ್ಲಿ ನಟಿಸುತ್ತಿರುವುದಕ್ಕೆ ದಿವ್ಯಾ ಉರುಡುಗ ಖುಷಿ ವ್ಯಕ್ತಪಡಿಸಿದ್ದಾರೆ. ‘ರಚ್ಚು ಎಂಬ ಮುದ್ದಾದ ಹುಡುಗಿ ಪಾತ್ರ ನನ್ನದು. ಆಕೆ ಸೂಪರ್ ಸ್ಟಾರ್. ಆದರೂ ಸರಳವಾಗಿ ಜೀವನ ಮಾಡುವ ಕನಸು ಕಾಣುತ್ತಾಳೆ. ಅಮ್ಮನ ಮಾತೇ ಆಕೆಗೆ ವೇದ ವಾಕ್ಯ. ಅಂತಹ ಪಾತ್ರ ನನಗೆ ಸಿಕ್ಕಿದೆ. ಸಿನಿಮಾದ ರೀತಿಯಲ್ಲೇ ಈ ಧಾರಾವಾಹಿ ಚಿತ್ರೀಕರಣ ನಡೆಯುತ್ತಿದೆ’ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ.
‘ಭಾಗ್ಯಲಕ್ಷ್ಮಿ’, ‘ಕನ್ನಡತಿ’, ‘ನಮ್ಮನೆ ಯುವರಾಣಿ’ ರೀತಿಯ ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ ‘ಜೈ ಮಾತಾ ಕಂಬೈನ್ಸ್’ ಸಂಸ್ಥೆಯು ‘ನಿನಗಾಗಿʼ ಸೀರಿಯಲ್ ನಿರ್ಮಿಸುತ್ತಿದೆ. ರಿತ್ವಿಕ್ ಮಠದ್, ದಿವ್ಯಾ ಉರುಡುಗ ಜೊತೆ ಪ್ರಿಯಾಂಕಾ ಕಾಮತ್, ವಿಜಯ್ ಕೌಂಡಿನ್ಯ, ಕಿಶನ್ ಬಿಳಗಲಿ, ಸಿರಿ ಸಿಂಚನಾ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.