‘ರಾತ್ರೋ ರಾತ್ರಿ ಬಿಗ್ ಬಾಸ್ ಮನೆ ಓಪನ್ ಮಾಡಿಸಿದೆ’: ಪೂರ್ತಿ ವಿಷಯ ತಿಳಿಸಿದ ಡಿಕೆ ಶಿವಕುಮಾರ್

ಕಿಚ್ಚ ಸುದೀಪ್ ನಡೆಸಿಕೊಡುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಕಾರ್ಯಕ್ರಮಕ್ಕೆ ಬೀಗ ಹಾಕಲಾಗಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಬಿಗ್ ಬಾಸ್ ನಿಲ್ಲಿಸಲಾಗಿತ್ತು. ಆಗ ಡಿಕೆ ಶಿವಕುಮಾರ್ ಅವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಿದರು. ಆ ಬಗ್ಗೆ ಅವರ ಮಾತಾಡಿದ್ದಾರೆ.

‘ರಾತ್ರೋ ರಾತ್ರಿ ಬಿಗ್ ಬಾಸ್ ಮನೆ ಓಪನ್ ಮಾಡಿಸಿದೆ’: ಪೂರ್ತಿ ವಿಷಯ ತಿಳಿಸಿದ ಡಿಕೆ ಶಿವಕುಮಾರ್
Dk Shivakumar, Bigg Boss Kannada

Updated on: Oct 19, 2025 | 7:11 AM

ಕೆಲವು ದಿನಗಳ ಹಿಂದೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋಗೆ ವಿಘ್ನ ಎದುರಾಗಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಸ್ ಸಂಸ್ಥೆಗೆ ಬೀಗ ಜಡಿದರು. ಅದೇ ಜಾಗದಲ್ಲಿ ರಿಯಾಲಿಟಿ ಶೋ ನಡೆಯುತ್ತಿದ್ದರಿಂದ ಬಿಗ್ ಬಾಸ್ ಕೂಡ ಸ್ಥಗಿತಗೊಳ್ಳಬೇಕಾಯಿತು. ಆಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಿದರು. 2 ದಿನಗಳ ಬಳಿಕ ಬಿಗ್ ಬಾಸ್ ಮನೆಯನ್ನು ಓಪನ್ ಮಾಡಿಸಲಾಯಿತು. ಆ ಘಟನೆ ಬಗ್ಗೆ ಡಿಕೆ ಶಿವಕುಮಾರ್ (DK Shivakumar) ಅವರು ಮಾತನಾಡಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಡಿಕೆ ಶಿವಕುಮಾರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಆ ವೇಳೆ ಅವರು ಚಿತ್ರರಂಗ ಹಾಗೂ ಬಿಗ್​ ಬಾಸ್ ಕುರಿತು ಮಾತಾಡಿದರು. ‘ಮೊನ್ನೆ ಯಾರೋ ನಮ್ಮ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೋಟಿಸ್ ನೀಡಿ, ಬಿಗ್ ಬಾಸ್ ಶೋ ನಿಲ್ಲಿಸಿಬಿಟ್ಟಿದ್ದರು. ನಾನು ಟಿವಿಯಲ್ಲಿ ನೋಡಿದೆ. ಅವರು ಯಾಕೆ ಮಾಡಿದರೋ ಗೊತ್ತಿಲ್ಲ. ನಾನು ತಕ್ಷಣಕ್ಕೆ ಮಧ್ಯಸ್ಥಿಕೆ ವಹಿಸಬೇಕಾಯಿತು’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

‘ಆ ಶೋ ಹಿಂದೆ ಎಷ್ಟು ಪ್ರತಿಕ್ರಿಯೆ ಇರುತ್ತದೆ, ಸಾರ್ವಜನಿಕರ ಗಮನ ಇರುತ್ತದೆ ಎಂಬುದರ ಅರಿವು ನನಗೆ ಇದೆ. ಶೂಟಿಂಗ್ ಮಾಡುವಾಗ ಅಂತ ದೊಡ್ಡ ಮಾಲಿನ್ಯ ಏನು ಮಾಡುತ್ತಾರೆ? ಇವೆಲ್ಲ ಬೇಡಪ್ಪ ಅಂತ ಅಧಿಕಾರಿಗಳಿಗೆ ಹೇಳಿ ರಾತ್ರೋ ರಾತ್ರಿ ಬಿಗ್ ಬಾಸ್ ಮನೆ ಓಪನ್ ಮಾಡಿಸಿ ಕೊಟ್ಟೆ’ ಎಂದು ಆ ಘಟನೆಯನ್ನು ಡಿಕೆ ಶಿವಕುಮಾರ್ ಅವರು ವಿವರಿಸಿದ್ದಾರೆ.

‘ಇಂದು ಚಿತ್ರರಂಗ ಬೆಳೆದಿದೆ. ಪೈಪೋಟಿ ಕೂಡ ಜಾಸ್ತಿ ಆಗಿದೆ. ಈಗ ತಂತ್ರಜ್ಞಾನ ಎಷ್ಟೋ ಬದಲಾಗಿದೆ. ಕೃತಕ ಬುದ್ಧಿಮತ್ತೆ ಬಂದಿರುವುದರಿಂದ ನಟನೆ ಮಾಡದೇ ಇದ್ದರೂ ಕೂಡ ಅನಂತ್ ನಾಗ್ ಅವರು ನಟಿಸಿದ ರೀತಿಯಲ್ಲಿ ಹೊಸದಾಗಿ ಸೃಷ್ಟಿ ಮಾಡುವ ಅವಕಾಶ ಇದೆ. ಹಳೇ ಕಾಲವೇ ಬೇರೆ, ಈಗಿನ ಕಾಲವೇ ಬೇರೆ. ಇಡೀ ಪ್ರಪಂಚ ಈ ಚಿತ್ರರಂಗಕ್ಕೆ ಬಹಳ ಗೌರವ ಕೊಟ್ಟುಕೊಂಡು ಬಂದಿದೆ’ ಎಂದಿದ್ದಾರೆ ಡಿಕೆಶಿ.

ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯ ಡ್ರಾಮಾಗಳನ್ನು ಬಿಚ್ಚಿಟ್ಟ ಸತೀಶ್

ಪದ್ಮಭೂಷಣ ಪ್ರಶಸ್ತಿ ಪಡೆದ ಅನಂತ್ ನಾಗ್ ಅವರಿಗೆ ಚಿತ್ರರಂಗದಿಂದ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಅದರಲ್ಲಿ ಡಿಕೆ ಶಿವಕುಮಾರ್ ಅವರು ಭಾಗವಹಿಸಿದ್ದರು. ‘ಅನಂತ್ ನಾಗ್ ಅವರು ರಾಜಕೀಯಕ್ಕೆ ಪ್ರವೇಶಿಸಿ ನನ್ನ ರೀತಿಯೇ ಬೆಂಗಳೂರು ನಗರಾಭಿವೃದ್ಧಿ ಮಂತ್ರಿಯಾಗಿ ಕೆಲಸ ಮಾಡಿದ್ದರು. ಯಾವ ವಿವಾದಕ್ಕೂ ಅವರು ಸಿಕ್ಕಿಕೊಳ್ಳಲಿಲ್ಲ. ಅವರು ಈಗಲೂ ಯುವಕನಂತೆ ಕಾಣುತ್ತಾರೆ’ ಎಂದು ಡಿಕೆಶಿ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.