ಬಿಗ್ ಬಾಸ್ಗೆ ಬರುವುದಕ್ಕೆ ಮುಂಚೆ ಡ್ರೋನ್ ಪ್ರತಾಪ್ (Drone Prathap) ಅವರನ್ನು ಜನರು ನೋಡುತ್ತಿದ್ದ ರೀತಿಗೂ, ಈಗ ಅವರನ್ನು ನೋಡುವ ರೀತಿಗೂ ಸಾಕಷ್ಟು ವ್ಯತ್ಯಾಸ ಇದೆ. ಈ ರಿಯಾಲಿಟಿ ಶೋನಿಂದ ಡ್ರೋನ್ ಪ್ರತಾಪ್ ಅವರ ಇಮೇಜ್ ಸಂಪೂರ್ಣ ಬದಲಾಗಿದೆ. ಅವರ ನಿಜವಾದ ವ್ಯಕ್ತಿತ್ವ ಏನು ಎಂಬುದನ್ನು ಜನರಿಗೆ ತಿಳಿಸಲು ಬಿಗ್ ಬಾಸ್ (Bigg Boss Kannada) ಒಂದು ಉತ್ತಮ ವೇದಿಕೆ ಆಯಿತು. ಈಗ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಗಿಚ್ಚಿ ಗಿಲಿಗಿಲಿ ಸೀಸನ್ 3’ (Gicchi Giligili) ಶೋನಲ್ಲಿ ಡ್ರೋನ್ ಪ್ರತಾಪ್ ಭಾಗಿ ಆಗುತ್ತಿದ್ದಾರೆ. ಇದರಿಂದ ಅವರ ಅಭಿಮಾನಿ ಬಳಗ ಇನ್ನಷ್ಟು ದೊಡ್ಡದಾಗುವ ಸೂಚನೆ ಸಿಕ್ಕಿದೆ.
ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ‘ಗಿಚ್ಚಿ ಗಿಲಿಗಿಲಿ 3’ ಶೋ ಪ್ರಸಾರ ಆಗಲಿದೆ. ಇದರಲ್ಲಿ ಡ್ರೋನ್ ಪ್ರತಾಪ್ ಅವರು ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದರೆ, ಬಣ್ಣ ಹಚ್ಚಿಕೊಂಡು ಅವರು ಡ್ರಾಮಾ, ಡ್ಯಾನ್ಸ್ ಮಾಡುತ್ತಾ ಜನರನ್ನು ರಂಜಿಸುತ್ತಿದ್ದಾರೆ. ಅದರ ಝಲಕ್ ಹೇಗಿರಲಿದೆ ಎಂಬುದನ್ನು ತೋರಿಸುವಂತಹ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಇದನ್ನೂ ಓದಿ: ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಡ್ರೋನ್ ಪ್ರತಾಪ್; ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಈ ವಾರಾಂತ್ಯದ ಹೊಸ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್ ಅವರು ಸ್ಕಿಟ್ ಮಾಡಲಿದ್ದಾರೆ. ಅವರು ಡೈಲಾಗ್ ಹೇಳುವ ಪರಿ ಕಂಡು ಪ್ರೇಕ್ಷಕರು ಸಖತ್ ನಗಲಿದ್ದಾರೆ. ಇನ್ನು, ಡ್ಯಾನ್ ಬಗ್ಗೆಯಂತೂ ಹೇಳೋದೇ ಬೇಡ. ಇದೆಲ್ಲದರ ಝಲಕ್ ಈ ಪ್ರೋಮೋದಲ್ಲಿ ಕಾಣಿಸಿದೆ. ಇದಕ್ಕೆ ಕಮೆಂಟ್ ಮಾಡಿರುವ ಅನೇಕರು ಪ್ರತಾಪ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ‘ಡ್ರೋನ್ ಪ್ರತಾಪ್ಗೋಸ್ಕರವೇ ಈ ಕಾರ್ಯಕ್ರಮ ನೋಡ್ತೀವಿ’ ಎಂದು ಕಮೆಂಟ್ ಮಾಡುವ ಮೂಲಕ ಹಲವರು ಅಭಿಮಾನ ವ್ಯಕ್ತಪಡಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಾಗ ಆರಂಭದಲ್ಲಿ ಡ್ರೋನ್ ಪ್ರತಾಪ್ ಅವರಿಗೆ ಕಷ್ಟ ಆಗಿತ್ತು. ಎಲ್ಲರ ಚುಚ್ಚುಮಾತುಗಳನ್ನು ಕೇಳಿ ಅವರು ಕಣ್ಣೀರು ಹಾಕಿದ್ದರು. ಬಳಿಕ ಅವರನ್ನು ಕಿಚ್ಚ ಸುದೀಪ್ ಹುರಿದುಂಬಿಸಿದರು. ಅದರ ಪರಿಣಾಮವಾಗಿ ಬಿಗ್ ಬಾಸ್ನಲ್ಲಿ ಡ್ರೋನ್ ಪ್ರತಾಪ್ ಡ್ಯಾನ್ಸ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಬಿಗ್ ಬಾಸ್ ಮುಗಿಯುತ್ತಿದ್ದಂತೆಯೇ ಅವರಿಗೆ ಹೊಸ ಅವಕಾಶ ಸಿಕ್ಕಿದೆ. ‘ಗಿಚ್ಚಿ ಗಿಲಿಗಿಲಿ ಸೀಸನ್ 3’ ಕಾರ್ಯಕ್ರಮದ ವೇದಿಕೆಗೆ ಡ್ರೋನ್ ಪ್ರತಾಪ್ ಹೊಸ ಮೆರುಗು ತುಂಬುತ್ತಿದ್ದಾರೆ. ತುಕಾಲಿ ಸಂತೋಷ್ ಕೂಡ ಇದೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರಂಜನ್ ಅವರು ಈ ಶೋ ನಿರೂಪಣೆ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ