ಡ್ರೋನ್ ಪ್ರತಾಪ್ (Drone Prathap) ಹಾಗೂ ನಮ್ರತಾಗೆ ಮೊದಲಿನಿಂದಲೂ ಒಂದು ಶೀತಲ ಸಮರ ಇದೆ. ನಮ್ರತಾ ಅವರನ್ನು ಅನೇಕ ಬಾರಿ ಪ್ರತಾಪ್ ಬೆಂಬಲಿಸಿದ್ದರು. ಆದಾಗ್ಯೂ ಸಣ್ಣ ಸಣ್ಣ ವಿಚಾರಕ್ಕೆ ಇಬ್ಬರ ಮಧ್ಯೆ ಅನೇಕ ಬಾರಿ ಕಿತ್ತಾಟ ಆಗಿದೆ. ಈಗ ನಮ್ರತಾ ಅವರು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ವಿಶೇಷ ಎಂದರೆ ನಮ್ರತಾ ಅವರು ಉತ್ತಮ, ಕಿಚ್ಚನ ಚಪ್ಪಾಳೆ ಹಾಗೂ ಕ್ಯಾಪ್ಟನ್ ಆಗಲು ಪ್ರತಾಪ್ ಪರೋಕ್ಷ ಕಾರಣರಾಗಿದ್ದಾರೆ. ಈ ವಿಚಾರವನ್ನು ಅನೇಕರು ಒಪ್ಪಿಕೊಂಡಿದ್ದಾರೆ.
ಪ್ರತಾಪ್ ಟೀಂ ಲೀಡರ್ ಆದಾಗ ಅವರ ತಂಡ ಸೇರಲು ನಮ್ರತಾ ನಿರ್ಧರಿಸಿದರು. ತಮ್ಮ ಟೀಂಗೆ ಬಂದರೆ ಉತ್ತಮ ಹಾಗೂ ಕಿಚ್ಚನ ಚಪ್ಪಾಳೆ ನೀಡುವುದಾಗಿ ಪ್ರತಾಪ್ ಹೇಳಿದ್ದರಂತೆ. ಇದು ನಮ್ರತಾ ಮನಸ್ಸಿನಲ್ಲಿ ಇತ್ತು. ‘ನನ್ನಲ್ಲಿರುವ ಹೊಸ ನಮ್ರತಾನ ಹೊರಗೆ ತೆಗೆಯುವುದಾಗಿ ಪ್ರತಾಪ್ ಪ್ರಾಮಿಸ್ ಮಾಡಿದ್ದಾರೆ. ಹೀಗಾಗಿ ಅವರ ತಂಡ ಸೇರಿದ್ದೇನೆ’ ಎಂದು ಹೇಳಿದ್ದರು ನಮ್ರತಾ. ಆದರೆ ಅಲ್ಲಾಗಿದ್ದೇ ಬೇರೆ. ನಮ್ರತಾ ಅವರನ್ನು ಮೊದಲಿಗೆ ಕ್ಯಾಪ್ಟನ್ಸಿ ಓಟದಿಂದ ಹೊರಗೆ ಇಟ್ಟರು ಪ್ರತಾಪ್. ಇದು ನಮ್ರತಾಗೆ ಸಾಕಷ್ಟು ಬೇಸರ ಮೂಡಿಸಿತು. ಅವರು ಕಣ್ಣೀರು ಹಾಕಿದ್ದರು.
ಆ ವಾರ ತನಿಷಾ ಗಾಯಗೊಂಡಿದ್ದರು. ಹೀಗಾಗಿ ಅವರ ಪರವಾಗಿ ಒಬ್ಬರು ಕ್ಯಾಪ್ಟನ್ಸಿ ಆಡಬೇಕಿತ್ತು. ಆಗ ನಮ್ರತಾ ಅವರು ತನಿಷಾ ಅವರನ್ನು ಪ್ರತಿನಿಧಿಸಿದ್ದರು. ಐದಾರು ಸುತ್ತುಗಳಲ್ಲಿ ನಡೆದ ಟಾಸ್ಕ್ನಲ್ಲಿ ನಮ್ರತಾ ಕೊನೆಯವರೆಗೂ ಹೋಗಿದ್ದರು. ಆ ವಾರ ನಮ್ರತಾ ಉತ್ತಮ ಹಾಗೂ ಕಿಚ್ಚನ ಚಪ್ಪಾಳೆ ಪಡೆದರು. ಇದಕ್ಕೆ ಪರೋಕ್ಷವಾಗಿ ಕಾರಣರಾದ ಪ್ರತಾಪ್ಗೆ ಧನ್ಯವಾದ ಹೇಳಿದ್ದರು.
ಈ ವಾರ ನಮ್ರತಾ ಕ್ಯಾಪ್ಟನ್ ಆಗಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದರು. ಈ ಹಠಕ್ಕೆ ಪ್ರತಾಪ್ ಸಾಥ್ ನೀಡಿದ್ದರು. ನಮ್ರತಾಗೋಸ್ಕರ ಪಾಯಿಂಟ್ಸ್ ತ್ಯಾಗ ಮಾಡಿದರು ಪ್ರತಾಪ್. ಹೀಗಾಗಿ ಕ್ಯಾಪ್ಟನ್ಸಿ ರೇಸ್ಗೆ ಎಂಟ್ರಿ ಆಗೋಕೆ ನಮ್ರತಾಗೆ ಸಹಕಾರಿ ಆಯಿತು. ಅವರು ಕೊನೆಗೂ ಕ್ಯಾಪ್ಟನ್ ಆದರು. ಈ ಮೂಲಕ ಫಿನಾಲೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅವರು ಕ್ಯಾಪ್ಟನ್ ಆಗಿ ಬೀಗಿದ್ದಾರೆ.
ಇದನ್ನೂ ಓದಿ: ‘ಸಂಗೀತಾ ಮಾನಸಿಕವಾಗಿ ತುಂಬಾ ಹಿಂಸೆ ಕೊಡುತ್ತಿದ್ದಾಳೆ’; ಕಣ್ಣೀರು ಹಾಕಿದ ನಮ್ರತಾ
ನಮ್ರತಾ ಅವರು ಕ್ಯಾಪ್ಟನ್ ಆಗೋಕೆ, ಉತ್ತಮ ಹಾಗೂ ಕಿಚ್ಚನ ಚಪ್ಪಾಳೆ ಪಡೆಯೋಕೆ ಸಾಕಷ್ಟು ಶ್ರಮ ಹಾಕಿದ್ದಾರೆ. ಈ ಶ್ರಮದ ಜೊತೆಗೆ ಪ್ರತಾಪ್ ಬೆಂಬಲವೂ ಸಹಕಾರಿ ಆಗಿದೆ ಅನ್ನೋದು ಅನೇಕರ ಅಭಿಪ್ರಾಯ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ