ನಟಿ ಗೌತಮಿ ಜಾದವ್ ಅವರು ಅನೇಕರ ಅಸಮಾಧಾನಕ್ಕೆ ಗುರಿ ಆಗುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಗೌತಮಿ ಕೇವಲ ಉಗ್ರಂ ಮಂಜು ಜೊತೆ ಮಾತ್ರ ಆಪ್ತವಾಗಿದ್ದಾರೆ. ಆ ಕಾರಣದಿಂದ ಕೆಲವರು ಟೀಕೆ ಮಾಡುತ್ತಿದ್ದಾರೆ. 65 ದಿನಗಳು ಕಳೆದ ನಂತರ ಬಿಗ್ ಬಾಸ್ ಆಟದಲ್ಲಿ ರೋಚಕತೆ ಜಾಸ್ತಿ ಆಗುತ್ತಿದೆ. ಯಾವುದೇ ಮುಲಾಜು ಇಲ್ಲದೇ ಎಲ್ಲ ಸ್ಪರ್ಧಿಗಳು ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಮಂಗಳವಾರದ (ಡಿಸೆಂಬರ್ 3) ಸಂಚಿಕೆಯಲ್ಲಿ ಗೌತಮಿ ಜಾದವ್ ವಿರುದ್ಧ ಅನೇಕರು ಮುಗಿಬಿದ್ದಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ ಟಿವಿ ಚಾನಲ್ ರೀತಿಯ ಟಾಸ್ಕ್ ನೀಡಲಾಗಿದೆ. ನ್ಯೂಸ್ ಚಾನೆಲ್ ಚರ್ಚೆಯ ಹಾಗೆ ಎರಡು ತಂಡಗಳ ನಡುವೆ ವಾದ-ಪ್ರತಿವಾದ ಆಗಿದೆ. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಇರಲು ಯಾರಿಗೆ ಅರ್ಹತೆ ಇಲ್ಲ ಎಂಬುದರ ಬಗ್ಗೆ ಚರ್ಚೆ ಮಾಡಲಾಗಿದೆ. ಎದುರಾಳಿ ತಂಡದವರು ಗೌತಮಿ ಜಾದವ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಹಾಗಿದ್ದರೂ ಕೂಡ ಅವರನ್ನು ಉಗ್ರಂ ಮಂಜು ಸಮರ್ಥನೆ ಮಾಡಿಕೊಂಡಿದ್ದಾರೆ.
ಗೌತಮಿ ಬಗ್ಗೆ ಶಿಶಿರ್ ವಿರೋಧ ವ್ಯಕ್ತಪಡಿಸಿದ್ದಾರೆ. ‘ಅಡುಗೆ ಮಾಡಬೇಕು ಅಂತ ಅನಿಸಿದರೆ ಮಾತ್ರ ಆಸಕ್ತಿ ಬರುತ್ತೆ ಅಂತಾರೆ. ಇತ್ತೀಚೆಗೆ ಅವರಲ್ಲಿ ಪಾಸಿಟಿವಿಟಿ ಕಾಣಿಸುತ್ತಿಲ್ಲ. ಚಂದವಾಗಿ ಹೇಳಿದರೆ ಕೇವಲ ಶುಗರ್ ಕೋಟೆಡ್ ಆಗುತ್ತದೆ. ಪಾಸಿಟಿವಿಟಿ ಅಂತ ಹೇಳಿಕೊಂಡು ನೆಗೆಟಿವಿಟಿ ಸುತ್ತ ಸುತ್ತುತ್ತಿದ್ದಾರೆ’ ಎಂದು ಶಿಶಿರ್ ಹೇಳಿದರು. ಅನೇಕರಿಗೆ ಇದು ನಿಜ ಎನಿಸಿತು.
‘ಮೋಕ್ಷಿತಾ ಯುವರಾಣಿ ಆದಾಗ ಅವರಿಗೆ ನಮಸ್ಕಾರ ಮಾಡಲ್ಲ ಎಂದು ಗೌತಮಿ ಹಠ ಹಿಡಿದರು. ಆಗ ಯಾಕೆ ಅವರಲ್ಲಿ ಪಾಸಿಟಿವಿಟಿ ಬರಲಿಲ್ಲ’ ಎಂದು ಚೈತ್ರಾ ಕುಂದಾಪುರ ಅವರು ಪ್ರಶ್ನೆ ಎತ್ತಿದ್ದಾರೆ. ‘ಗೌತಮಿ ಕೇವಲ ಬೇರೆಯವರ ತಪ್ಪು ಕಂಡು ಹಿಡಿಯುತ್ತಾರೆ. ತಾವು ಏನು ಮಾಡಿದ್ದಾರೆ ಎಂಬುದು ಅವರಿಗೆ ಗೊತ್ತಾಗಲ್ಲ’ ಎಂದು ಮೋಕ್ಷಿತಾ ಅವರು ಹೇಳಿದ್ದಾರೆ. ‘ಮಂಜು ಇಲ್ಲದೇ ಇದ್ದಿದ್ದರೆ ಇಲ್ಲಿಯವರೆಗೆ ಗೌತಮಿ ಅವರು ಬರಲು ಸಾಧ್ಯವೇ ಇರಲಿಲ್ಲ’ ಎಂದು ಹನುಮಂತ ಹೇಳಿದ್ದಾರೆ.
ಉಗ್ರಂ ಮಂಜು-ಗೌತಮಿಯ ತಪ್ಪುಗಳ ಎತ್ತಿ ತೋರಿಸಿದ ಹನುಮಂತು
ಮಂಜು ಅವರು ಗೌತಮಿಯನ್ನು ಬಿಟ್ಟುಕೊಡಲಿಲ್ಲ. ‘ಗೌತಮಿ ಟಾಸ್ಕ್ ಚೆನ್ನಾಗಿ ಮಾಡಿದ್ದಾರೆ. ಕ್ಯಾಪ್ಟೆನ್ಸಿ ಓಟದಲ್ಲಿ ಕೂಡ ಇದ್ದರು. ಇಷ್ಟು ವಾರಗಳಲ್ಲಿ ಮನರಂಜನೆ ನೀಡಿದ್ದಾರೆ. ಡ್ಯಾನ್ಸ್ ಮಾಡಿದ್ದಾರೆ. ಬೇರೆ ಗೆಸ್ಟ್ ಬಂದಾಗ ಹನುಮಂತು ಜೊತೆ ಡ್ಯಾನ್ಸ್ ಟಾಸ್ಕ್ನಲ್ಲಿ ನಂಬರ್ 1 ಸ್ಥಾನ ಪಡೆದರು’ ಎಂದು ಗೌತಮಿಯ ಪರವಾಗಿ ಮಂಜು ವಾದ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.