ದೇಶದೆಲ್ಲೆಡೆ ಕೊವಿಡ್ ಪ್ರಕರಣ (Covid Cases) ಹೆಚ್ಚುತ್ತಿದೆ. ದೇಶದಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳುವ ಭಯ ಶುರುವಾಗಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಆದಾಗ್ಯೂ, ಈ ವೈರಸ್ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಇನ್ನು, ಚಿತ್ರಮಂದಿರದಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಿ ಹಲವು ರಾಜ್ಯದ ಸರ್ಕಾರಗಳು ಆದೇಶ ಹೊರಡಿಸಿದೆ. ಇದು ಚಿತ್ರರಂಗದ ಮೇಲೆ ಪರಿಣಾಮ ಬೀರಿದೆ. ಈಗ ಕೊವಿಡ್ ಕರಿನೆರಳು ಹಿಂದಿ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ಮೇಲೂ ಬಿದ್ದಿದೆ ಎನ್ನುವ ಸುದ್ದಿ ಜೋರಾಗಿದೆ. ಇದು ಬಿಗ್ ಬಾಸ್ ಪ್ರಿಯರಿಗೆ ಬೇಸರ ಮೂಡಿಸಿದೆ.
ಬಿಗ್ ಬಾಸ್ ಮನೆ ಎಷ್ಟೇ ಸುರಕ್ಷಿತ ಎಂದರೂ, ಅಲ್ಲಿಗೆ ಬರುವ ತರಕಾರಿ, ದಿನಸಿಗಳು ಹೊರಗಿನಿಂದಲೇ ಬರುತ್ತವೆ. ಅಲ್ಲಿ ಆಯೋಜನೆ ಮಾಡುವ ಪ್ರತಿ ಗೇಮ್ಗೆ ಪರಿಕರಗಳು ಹೊರಗಿಂದಲೇ ತರಿಸಲಾಗುತ್ತದೆ. ಹೀಗಾಗಿ, ಬಿಗ್ ಬಾಸ್ ಸ್ಪರ್ಧಿಗಳು ಹೊರ ಜಗತ್ತಿನೊಂದಿಗೆ ಪರೋಕ್ಷವಾಗಿ ಸಂಪರ್ಕಕ್ಕೆ ಒಳಗಾಗುತ್ತಾರೆ. ಒಂದೊಮ್ಮೆ ಈ ವಸ್ತುಗಳಲ್ಲಿ ಕೊರೊನಾ ಇದ್ದರೆ ಅದು ಮನೆಯ ಸದಸ್ಯರಿಗೂ ಅಂಟುತ್ತದೆ. ಈಗ ಇದೇ ಮಾದರಿಯ ಆತಂಕ ಹುಟ್ಟಿಕೊಂಡಿದೆ.
‘ಹಿಂದಿ ಬಿಗ್ ಬಾಸ್ 15’ ಸ್ಪರ್ಧಿ ದೇವೋಲೀನಾ ಭಟ್ಟಾಚಾರ್ಜಿಗೆ ಕಳೆದ ಕೆಲ ದಿನಗಳಿಂದ ಅನಾರೋಗ್ಯ ಕಾಡುತ್ತಿದೆ. ಇವರಿಗೆ ಕಾಣಿಸಿಕೊಂಡ ಅನಾರೋಗ್ಯದ ಲಕ್ಷಣಗಳು ಕೊರೊನಾ ಲಕ್ಷಣಗಳೊಂದಿಗೆ ಹೋಲಿಕೆ ಆಗುತ್ತಿದೆಯಂತೆ. ಈ ಕಾರಣಕ್ಕೆ ಅವರನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ. ಅಲ್ಲದೆ, ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಂದೊಮ್ಮೆ ಅವರಿಗೆ ಇರುವುದು ಕೊವಿಡ್ ಎಂಬುದು ದೃಢವಾದರೆ ಈ ಶೋ ಅರ್ಧಕ್ಕೆ ನಿಂತರೂ ಅಚ್ಚರಿ ಏನಿಲ್ಲ.
ಮಲಯಾಳಂನಲ್ಲೂ ಇದೇ ಮಾದರಿಯ ಪರಿಸ್ಥಿತಿ ಎದುರಾಗಿತ್ತು. ಬಿಗ್ ಬಾಸ್ನ ಕೆಲ ತಂತ್ರಜ್ಞರಿಗೆ ಕೊವಿಡ್ ಕಾಣಿಸಿಕೊಂಡಿತ್ತು. ಈ ಕಾರಣಕ್ಕೆ ಅಧಿಕಾರಿಗಳು ಶೋ ನಡೆಯುತ್ತಿರುವ ಸಂದರ್ಭದಲ್ಲೇ ದೊಡ್ಮನೆಯೊಳಗೆ ನುಗ್ಗಿ ಶೋಅನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಕೊವಿಡ್ ಕರ್ನಾಟಕದಲ್ಲಿ ಹೆಚ್ಚಾದ ಸಂದರ್ಭದಲ್ಲಿ ‘ಕನ್ನಡ ಬಿಗ್ ಬಾಸ್ ಸೀಸನ್ 8’ ಅರ್ಧಕ್ಕೆ ನಿಂತಿತ್ತು. ನಂತರ ಅದನ್ನು ಮರಳಿ ಆರಂಭಿಸಲಾಗಿತ್ತು. ಈಗ ಹಿಂದಿ ಬಿಗ್ ಬಾಸ್ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಈ ರೀತಿ ಆಗಿರುವುದು ವಾಹಿನಿಯವರ ಚಿಂತೆ ಹೆಚ್ಚಿಸಿದೆ. ಶೋ ಅರ್ಧಕ್ಕೆ ನಿಲ್ಲಲಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.
ಇದನ್ನೂ ಓದಿ: ಬಿಗ್ ಬಾಸ್ ವೈಷ್ಣವಿ ಸೊಂಟ ಬಳುಕಿಸಿದ ಪರಿಗೆ ಫಿದಾ ಆದ ಅಭಿಮಾನಿಗಳು
Divya Suresh: ನೈಟ್ ಕರ್ಫ್ಯೂ ವೇಳೆ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕಿರಿಕ್?; ವಿಡಿಯೋ ಇಲ್ಲಿದೆ