ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಮಹೇಂದ್ರನ ಜೊತೆ ಪತ್ನಿ ಜಗತಿ ಹಾಗೂ ರಿಷಿ ಇಬ್ಬರೂ ಮಾತನಾಡುತ್ತಿದ್ದಾರೆ. ಮಹೇಂದ್ರ ತನ್ನ ಪತ್ನಿಗೆ ‘ತುಂಬಾ ಸುಸ್ತಾಗಿದ್ದೀಯಾ ನೀನು ಇಲ್ಲಿಂದ ಹೊರಡು’ ಎಂದು ಹೇಳಿದ. ಆದರೆ ಜಗತಿ ಪತಿಯನ್ನು ಈ ಸ್ಥಿತಿಯಲ್ಲಿ ಬಿಟ್ಟು ಹೋಗಲು ತಯಾರಿಲ್ಲ. ಪತಿಯ ಮಾತಿಗೆ ಜಗತಿ ‘ಈಗಾಗಲೇ ಎಲ್ಲರಿಂದ ದೂರ ಇದ್ದೀನಿ, ಈಗ ಹೋಗಿ ವಿಶ್ರಾಂತಿ ತೆಗೆದುಕೊಳ್ಳಬೇಕಾ’ ಎಂದು ಕೇಳಿದಳು. ‘ಅವತ್ತು ತನ್ನ ಭುಜಕ್ಕೆ ಬುಲೆಟ್ ಏಟು ಬಿದ್ದಾಗ ನಿನ್ನ ಹೃದಯಕ್ಕೆ ತಗುಲಿದ ಹಾಗೆ ನೋವು ತಿಂದೆ, ಎಲ್ಲರನ್ನೂ ಎದುರು ಹಾಕಿಕೊಂಡು ನೀನು ಅವತ್ತು ನನ್ನನ್ನು ಕಾಪಾಡಿದೆ, ನನ್ನ ಜೊತೆಯೇ ಇದ್ದೆ. ಈಗ ನಾನು ಹೇಗೆ ನಿನ್ನ ಬಿಟ್ಟು ಹೋಗಲಿ’ ಎಂದು ಜಗತಿ ಹಳೆಯ ಘಟನೆ ನೆನಪಿಸಿ ಭಾವುಕಳಾದಳು. ಬಳಿಕ ಪತಿಗೆ ‘ತುಂಬಾ ನೋವನ್ನು ಬಚ್ಚಿಟ್ಟುಕೊಂಡು ನಗುತ್ತಾ ಇರ್ತೀಯ. ನನಗೆ ಎಲ್ಲಾ ಗೊತ್ತು ಎಂದು’ ಹೇಳಿದಳು.
ರಿಷಿ ತನ್ನ ತಾಯಿಗೆ ಅಪ್ಪನನ್ನು ಬಿಟ್ಟು ಹೋಗು ಎಂದು ಹಿಂದೆ ಹೇಳಿದ್ದ ಮಾತು ನೆನಪಾಗಿ ಅದರಿಂದನೇ ಅಪ್ಪ ನೋವು, ಸಂಕಟ ಅನುಭವಿಸುತ್ತಿದ್ದಾರಾ ಇದು ನನಗೆ ಯಾಕೆ ಗೊತ್ತಾಗಿಲ್ಲ, ನನಗೋಸ್ಕರ ಅಲ್ಲದಿದ್ದರೂ ಈಗ ಅಪ್ಪನಿಗಾಗಿ ಒಂದು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಮನಸ್ಸಲ್ಲೇ ಅಂದುಕೊಂಡ.
ಅಷ್ಟರಲ್ಲೇ ಮಹೇಂದ್ರನ ಇಡೀ ಕುಟುಂಬ ಆಸ್ಪತ್ರೆಗೆ ಎಂಟ್ರಿ ಕೊಟ್ಟಿತ್ತು. ಮಹೇಂದ್ರನ ಅತ್ತಿಗೆಗೆ ಜಗತಿ ಕಂಡರೆ ಆಗಲ್ಲ. ಜಗತಿ ಪಕ್ಕದಲ್ಲೇ ಕುಳಿತು ಮಾತನಾಡುತ್ತಿದ್ದುದನ್ನು ನೋಡಿ ಶಾಕ್ ಆದಳು. ಕಷ್ಟವೆಲ್ಲಾ ದೂರ ಆಯಿತು ಅಂತ ಅಂದುಕೊಂಡರೆ ಇನ್ನೂ ಹೋಗಿಲ್ಲ ಎಂದು ಜಗತಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಳು. ಅಯ್ಯೋ ದೇವರೇ ಮಹೇಂದ್ರ ಎಂದು ಜೋರಾಗಿ ಅಳುವ ನಾಟಕ ಮಾಡುತ್ತಾ ರಿಷಿನ ಚಿಕ್ಕವನಾಗಿದ್ದಾಗಿಂದ ನಾವೇ ನೋಡಿಕೊಳ್ಳುತ್ತಿರುವುದು, ಮಧ್ಯದಲ್ಲೇ ಬಂದವರು ಮಧ್ಯದಲ್ಲೇ ಬಿಟ್ಟು ಹೋದರು ಎಂದು ಜಗತಿಗೆ ಮಾತಿನಲ್ಲೇ ಚುಚ್ಚಿದಳು. ಜಗತಿ ಅಲ್ಲಿಂದ ಹೊರ ನಡೆದಳು. ವಸೂಧರ ಬಳಿ ತನ್ನ ಅಳಲು ತೋಡಿಕೊಂಡಳು.
ಬಳಿಕ ಮಹೇಂದ್ರ ಪತ್ನಿ ಜಗತಿ ಕೈ ಹಿಡಿದು ನೀನು ನನ್ನ ಬಿಟ್ಟು ಹೊರಟು ಹೋಗುತ್ತೀಯಾ ಎಂದು ಕೇಳಿದ. ಆದರೆ ಜಗತಿ ಅದು ನಿನ್ನ ಮನೆ ಅಂತ ಹೇಳಿದಳು. ಆದರೆ ಮಹೇಂದ್ರ ತನ್ನನ್ನು ಮನೆವರೆಗಾದರೂ ಬಿಟ್ಟು ಹೋಗುವಂತೆ ಕೇಳಿಕೊಂಡ. ಅಪ್ಪ-ಅಮ್ಮನ ಮಾತು ಕೇಳಿಸಿಕೊಂಡ ರಿಷಿ ಅಲ್ಲಿಂದ ಹಾಗೆ ಹೊರಟುಹೋದ. ಬಳಿಕ ಮಹೇಂದ್ರನನ್ನು ಡಿಸ್ಚಾರ್ಜ್ ಮಾಡಿ ರಿಷಿ ಮನೆಗೆ ಕರೆದುಕೊಂಡು ಹೋದ. ಜಗತಿಯೂ ಜೊತೆಯಲ್ಲೇ ಹೊರಟಳು. ಮಹೇಂದ್ರನ ಜೊತೆಯೇ ಬಂದ ಜಗತಿ ನೋಡಿ ದೇವಯಾನಿ ಶಾಕ್ ಆದಳು. ಇತ್ತ ರಿಷಿ ನನ್ನ ಅಪ್ಪನನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಜಗತಿಗೆ ಪರೋಕ್ಷವಾಗಿ ಹೇಳಿ ಅಲ್ಲಿಂದ ಹೊರಡುವಂತೆ ಹೇಳಿದ.
ಬಳಿಕ ಮತ್ತೆ ರಿಷಿ ಜಗತಿ ಬಳಿ ಬಂದು ಕೈ ಮುಗಿದು ನೀವಿಬ್ಬರೂ ಇಲ್ಲದೇ ಹೋಗಿದ್ದರೆ ಇವತ್ತು ನನ್ನ ಅಪ್ಪ ಇರ್ತಿರ್ಲಿಲ್ಲ ಎಂದು ಹೇಳಿ ಹೊರಟು ಹೋದ. ದೇವಯಾನಿ ಕೋಪದಲ್ಲಿ ಜೋರಾಗಿ ಬಾಗಿಲು ಹಾಕಿ ಒಳಹೋದಳು. ಇತ್ತ ಅಳುತ್ತಲೇ ಮನೆಗೆ ಹೊರಟ ಜಗತಿ, ವಸೂಧರ ಬಳಿ ‘ನಾನು ಮತ್ತೆ ಆ ಮನೆ ಹೊಸಿಲು ದಾಟಿ ಒಳಗೆಹೋಗುತ್ತೀನೋ ಇಲ್ಲಾ ಹೀಗೆ ಒಂಟಿಯಾಗಿ ಉಳಿದು ಅನಾಥ ಶವವಾಗಿ ಸ್ಮಶಾನ ಸೇರುತ್ತೀನೋ’ ಎಂದು ನೊಂದುಕೊಂಡಳು. ತಂದೆಗಾಗಿ ರಿಷಿ ಅಮ್ಮನನ್ನು ಮನೆಗೆ ಕರೆದುಕೊಂಡು ಹೋಗುತ್ತಾನಾ? ಎಂದು ಕಾದುನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:29 pm, Fri, 30 September 22