ಸ್ಟೇಜ್ ಡೆಕೊರೇಷನ್ ಮಾಡುತ್ತಿದ್ದ ವಸುಧರಾ ಮೇಲಿದ್ದ ದಾರವನ್ನು ಕೆಳಗೆ ಎಳೆಯಲು ಪರದಾಡುತ್ತಿದ್ದಳು. ಅದನ್ನು ನೋಡಿದ ರಿಷಿ, ವಸುಧರಾಳನ್ನು ಎತ್ತಿಕೊಂಡ. ರಿಷಿ ಮತ್ತು ವಸು ಇಬ್ಬರನ್ನೂ ನೋಡಿ ಗೌತಮ್ ಶಾಕ್ ಆದ. ವಸುಧರಾಳಿಗೆ ಟೀ ಕೊಡಲು ಬಂದಿದ್ದ ಗೌತಮ್ ಏನು ಮಾತನಾಡದೆ ಸೈಲೆಂಟ್ ಆಗಿ ನಿಂತುಬಿಟ್ಟ. ಬಳಿಕ ರಿಷಿ ಎತ್ತಿಕೊಂಡಿದ್ದ ವಸುಧರಾಳನ್ನು ನಿಧಾನಕ್ಕೆ ಕೆಳಗಿಳಿಸಿದ. ‘ಹೀಗೆಲ್ಲ ಯಾಕೆ ಕಷ್ಟಪಡ್ತೀಯಾ’ ಎಂದು ಕೇಳಿದ. ಇಬ್ಬರೂ ಸ್ಟೇಜ್ ಕೆಲಸ ಮಾಡುತ್ತಿದ್ದಾರೆ ಎಂದು ಗೌತಮ್ ನೆಮ್ಮದಿಯ ನಿಟ್ಟುಸಿರು ಬಿಟ್ಟ. ಕಾಲೇಜು ತಯಾರಿಸಿದ್ದ ಕಿರುಚಿತ್ರವನ್ನು ಮಿನಿಸ್ಟರ್ ಮುಂದೆ ಪ್ರದರ್ಶಿಸಲಾಯಿತು. ಎಲ್ಲರೂ ಕುತೂಹಲದಿಂದ ವೀಕ್ಷಿಸಿದರು. ಖುಷಿಯಿಂದನೇ ನೋಡುತ್ತಿದ್ದ ಗೌತಮ್ ಫುಲ್ ಶಾಕ್ ಆದ. ಕಿರುಚಿತ್ರದಲ್ಲಿ ಗೌತಮ್ ಇರಬೇಕಿದ್ದ ಜಾಗದಲ್ಲಿ ರಿಷಿ ಇದ್ದ.
ಗೌತಮ್‌ಗೆ ಸರಿಯಾಗಿ ಆಕ್ಟಿಂಗ್ ಬರಲ್ಲ ಎಂದು ರಿಷಿನೇ ವಸು ಜೊತೆ ನಟಿಸಿದ್ದ. ರಿಷಿ ಮತ್ತು ವಸು ಇಬ್ಬರೂ ಗಂಡ-ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಗೌತಮ್‌ಗೆ ತನ್ನನ್ನು ಕಿತ್ತೆಸೆದು ರಿಷಿ ನಟಿಸಿರುವ ವಿಚಾರ ಗೊತ್ತಿರಲಿಲ್ಲ. ಹಾಗಾಗಿ ಕುತೂಹಲದಿಂದ ನೋಡುತ್ತಿದ್ದ ಗೌತಮ್ ಶಾಕ್ ಆದ. ತನ್ನನ್ನು ತೆಗೆದು ರಿಷಿ ಆಕ್ಟ್ ಮಾಡಿರುವ ವಿಚಾರ ಹೇಳೇ ಇಲ್ಲ ಎಂದು ಗೌತಮ್ ಕೋಪ ಮಾಡಿಕೊಂಡ. ಕಿರುಚಿತ್ರ ನೋಡಿ ಎಲ್ಲರೂ ಮೆಚ್ಚಿಕೊಂಡರು. ಆದರೆ ರಿಷಿ ಮತ್ತು ವಸು ಇಬ್ಬರೂ ಒಟ್ಟಿಗೆ ನಟಿಸಿದ್ದನ್ನು ನೋಡಿ ದೇವಯಾನಿ ಕೂಡ ಉರಿದುಬಿದ್ದಳು.
ಎಜುಕೇಶನ್ ಮಿನಿಸ್ಟರ್ ಕಿರುಚಿತ್ರದ ಕಾನ್ಸೆಪ್ಟ್ ನೋಡಿ ಹಾಡಿಹೊಗಳಿದರು. ಇದೆಲ್ಲಾ ಯಾರ ಪ್ಲಾನ್ ಎಂದು ಕೇಳಿದರು. ಇದು ಜಗತಿಯ ಕಾನ್ಸೆಪ್ಟ್, ಈ ಎಲ್ಲಾ ಐಡಿಯಾ ಕೂಡ ಅವರದ್ದೇ ಎಂದು ಮಹೇಂದ್ರನ ಅಣ್ಣ ವಿವರಿಸಿದ. ಎಲ್ಲರೂ ಜಗತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಿಷಿ ಕೂಡ ಧನ್ಯವಾದ ತಿಳಿಸಿದ. ಇದನ್ನೆಲ್ಲವನ್ನೂ ನೋಡುತ್ತಿದ್ದ ದೇವಯಾನಿ ಹೊಟ್ಟೆಗೆ ಬೆಂಕಿ ಬಿದ್ದಂತೆ ಆಗಿತ್ತು.
ದೇವಯಾನಿ ಕಾಲೇಜು ಕಾರ್ಯಕ್ರಮಕ್ಕೆ ಸುಮ್ಮನೆ ಬಂದಿರಲಿಲ್ಲ. ಸರಿಯಾದ ಪ್ಲಾನ್ ಮಾಡಿಕೊಂಡೇ ಎಂಟ್ರಿ ಕೊಟ್ಟಿದ್ದಳು. ಜಗತಿಯನ್ನು ಹೇಗಾದರೂ ಮಾಡಿ ದೂರ ಇಡಬೇಕೆಂದು ಸ್ಕೆಚ್ ಹಾಕಿದ್ದ ದೇವಯಾನಿಗೆ ಈ ಕಾರ್ಯಕ್ರಮ ಅಸ್ತ್ರವಾಗಿತ್ತು. ಸರಿಯಾದ ಸಮಯಕ್ಕೆ ಕಾಯುತ್ತಿದ್ದ ದೇವಯಾನಿ, ಕಾಲೇಜು ಕಾರ್ಯಕ್ರಮವನ್ನೇ ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಂಡಳು. ಕಾರ್ಯಕ್ರಮದಲ್ಲಿ ಜಗತಿಗೆ ಸರಿಯಾಗಿ ಅವಮಾನ ಆಗುವಂತೆ ಮಾಡಿದಳು, ಎಲ್ಲರ ಮುಂದೆ ತಲೆ ತಗ್ಗಿಸುವಂತೆ ಮಾಡಿದಳು. ಮಿನಿಸ್ಟರ್ ಕಾರ್ಯಕ್ರಮ ಅಂತ ಪತ್ರಕರ್ತರು ಸಹ ಹಾಜರಿದ್ದರು. ಪತ್ರಕರ್ತರಿಗೆ ಜಗತಿ ಕುಟುಂಬದ ರಹಸ್ಯ ಕೆದಕುವಂತೆ ದೇವಯಾನಿ ಹೇಳಿಕೊಟ್ಟಿದ್ದಳು.
ಪತ್ರಕರ್ತನೊಬ್ಬ ಜಗತಿಯನ್ನು ಹೊಗಳುತ್ತಲೇ ಅವಳ ಕುಟುಂಬದ ಬಗ್ಗೆ ಪ್ರಶ್ನೆ ಕೇಳಿದ. ‘ನಿಮ್ಮಿಂದ ಈ ಕಾಲೇಜು ಮತ್ತಷ್ಟು ಎತ್ತರಕ್ಕೆ ಬೆಳೆದಿದೆ. ನಿಮ್ಮ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ. ನೀವು ಅನೇಕರಿಗೆ ಸ್ಫೂರ್ತಿ’ ಎನ್ನುತ್ತಲೇ ‘ನಿಮ್ಮ ಕುಟುಂಬದ ಬಗ್ಗೆ ಹೇಳಿ’ ಎಂದು ಪ್ರಶ್ನೆ ಕೇಳಿದ. ‘ಗಂಡನನ್ನು ಬಿಟ್ಟಿದ್ದೀರಂತೆ, ಒಬ್ಬರೇ ಇರೋದಂತೆ ಹೌದಾ’ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳಲು ಶುರು ಮಾಡಿದ. ಉತ್ತರಿಸಲಾಗದೆ ಜಗತಿ ಮೌನಿಯಾಗಿದ್ದಳು. ಮಗ ಮತ್ತು ಗಂಡ ಪಕ್ಕದಲ್ಲೇ ಕುಳಿತಿದ್ದರೂ ಜಗತಿ ಅಸಹಾಯಕಳಾಗಿದ್ದಳು. ಜಗತಿ ತನ್ನ ಪತ್ನಿ ಎಂದು ಹೇಳಲು ಮಹೇಂದ್ರ ಮುಂದಾದರೂ ರಿಷಿ ಕೈ ಹಿಡಿದು ತಡೆದ. ಇದನ್ನು ನೋಡಿ ದೇವಯಾನಿ ಎಂಜಾಯ್ ಮಾಡುತ್ತಾ ಕುಳಿತಿದ್ದಳು. ಈಗಲಾದರೂ ಮಹೇಂದ್ರ ಜಗತಿ ತನ್ನ ಪತ್ನಿ, ನಮ್ಮಿಬ್ಬರ ಮಗನೇ ರಿಷಿ ಎಂದು ಒಪ್ಪಿಕೊಳ್ಳುತ್ತಾನಾ? ಎನ್ನುವುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.