ಕನ್ನಡತಿ ಧಾರಾವಾಹಿ: ಸಾನಿಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ಮಾಸ್ಟರ್ಪ್ಲ್ಯಾನ್ ಮಾಡಿದ ಹರ್ಷ
ಸಾನಿಯಾ ಖುಷಿಯಲ್ಲಿದ್ದಾಗ ತನಗೆ ಗೊತ್ತಿಲ್ಲದೆ ಏನೇನನ್ನೋ ಮಾಡುತ್ತಾಳೆ. ಈಗಲೂ ಅದೇ ರೀತಿ ಮಾಡಿದ್ದಾಳೆ. ಉದ್ದೇಶಪೂರ್ವಕವಾಗಿ ಹರ್ಷನ ವಿರುದ್ಧ ಸೇಡಿಗೆ ಇಳಿದಿದ್ದಾಳೆ.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು
ಶೈಲಿ: ಫ್ಯಾಮಿಲಿ ಡ್ರಾಮಾ. ರತ್ನಮಾಲಾ ಮಾಲಾ ಸಂಸ್ಥೆಯ ಒಡತಿ. ಆಕೆಯ ಆಸ್ತಿ ಹೊಡೆಯಬೇಕು ಎಂದು ಹಿರಿ ಸೊಸೆ ಸಾನಿಯಾ ಕಣ್ಣು ಹಾಕಿದ್ದಾಳೆ. ಆದರೆ, ಈ ಆಸ್ತಿಯನ್ನು ಆಕೆ ಬರೆದಿದ್ದು ಭುವಿಗೆ. ಮಗ ಹರ್ಷ ಹಾಗೂ ಸೊಸೆ ಎಂದರೆ ರತ್ನಮಾಲಾಗೆ ಅಚ್ಚುಮೆಚ್ಚು.
ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?: ಕೊಲೆ ಪ್ರಯತ್ನದ ಆರೋಪದ ಮೇಲೆ ಹರ್ಷನನ್ನು ಸಾನಿಯಾ ಜೈಲಿಗೆ ಹಾಕಿಸಿದ್ದಳು. ಅಷ್ಟೇ ಅಲ್ಲ, ಎಂಡಿ ಎಂದು ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಳು. ‘ಕನ್ನಡತಿ’ (Kannadathi) ಧಾರಾವಾಹಿಯಲ್ಲಿ ಹರ್ಷ ಹಾಗೂ ಸಾನಿಯಾ ಮಧ್ಯೆ ಶೀತಲ ಸಮರ ನಡೆಯುತ್ತಲೇ ಇದೆ. ಅನೇಕ ಬಾರಿ ಇಬ್ಬರೂ ಓಪನ್ ಆಗಿ ಕಿತ್ತಾಡಿಕೊಂಡಿದ್ದೂ ಇದೆ. ಈಗ ಇವರ ನಡುವಿನ ತಿಕ್ಕಾಟ ಓಪನ್ ಆಗಿದೆ. ಸಾನಿಯಾಗೆ ಹರ್ಷ ಗನ್ ತೋರಿಸಿದ್ದಾನೆ. ಇದಕ್ಕೆ ಸೇಡು ತೀರಿಸಿಕೊಂಡ ಆಕೆ ಹರ್ಷನನ್ನು ಜೈಲಿಗೆ ಕಳುಹಿಸಿದ್ದಳು. ಹರ್ಷ ಇದಕ್ಕೆಲ್ಲ ಸುಮ್ಮನೆ ಇರುವ ವ್ಯಕ್ತಿ ಅಲ್ಲವೇ ಅಲ್ಲ. ಈಗ ಆತ ಸಾನಿಯಾ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಮುಂದಾಗಿದ್ದಾನೆ. ಇದಕ್ಕಾಗಿ ಆತ ಮಾಸ್ಟರ್ಪ್ಲ್ಯಾನ್ ಮಾಡಿದ್ದಾನೆ. ಶೀಘ್ರದಲ್ಲೇ ಸಾನಿಯಾಳ ಎಂಡಿ ಪಟ್ಟ ಹೋದರೂ ಅಚ್ಚರಿ ಏನಿಲ್ಲ.
ಸಾನಿಯಾ ಮಾಲಾ ಸಂಸ್ಥೆಗೆ ಎಂಡಿ. ಈ ಕಾರಣಕ್ಕೆ ಆಕೆಗೆ ಅಹಂ ನೆತ್ತಿಗೇರಿದೆ. ಈ ಮಧ್ಯೆ ರತ್ನಮಾಲಾ ಹೇಳಿದ ಒಂದು ಮಾತಿನಿಂದ ಆಕೆ ನೆಲದಮೇಲೆ ಇಲ್ಲ. ರತ್ನಮಾಲಾಗೆ ಮರೆವಿನ ಕಾಯಿಲೆ ಶುರುವಾಗಿದೆ. ಇತ್ತೀಚೆಗೆ ಹಾಗೆಯೇ ಆಗಿತ್ತು. ಭುವಿ ಎಂದುಕೊಂಡು ಸಾನಿಯಾ ಬಳಿ ಎಲ್ಲವನ್ನೂ ಹೇಳಿದ್ದಳು ರತ್ನಮಾಲಾ. ‘ಕಂಪನಿಯನ್ನು ನಡೆಸಿಕೊಂಡು ಹೋಗ್ತೀಯಾ’ ಎಂಬ ಪ್ರಶ್ನೆಯನ್ನು ಕೇಳಿದ್ದಳು. ಇದನ್ನು ಕೇಳಿ ಸಾನಿಯಾ ಹಿರಿಹಿರಿ ಹಿಗ್ಗಿದ್ದಳು.
ಸಾನಿಯಾ ಖುಷಿಯಲ್ಲಿದ್ದಾಗ ತನಗೆ ಗೊತ್ತಿಲ್ಲದೆ ಏನೇನನ್ನೋ ಮಾಡುತ್ತಾಳೆ. ಈಗಲೂ ಅದೇ ರೀತಿ ಮಾಡಿದ್ದಾಳೆ. ಉದ್ದೇಶಪೂರ್ವಕವಾಗಿ ಹರ್ಷನ ವಿರುದ್ಧ ಸೇಡಿಗೆ ಇಳಿದಿದ್ದಾಳೆ. ಆತನನ್ನು ಅರೆಸ್ಟ್ ಮಾಡಿಸಿದ್ದಾಳೆ. ಹರ್ಷನಿಗೆ ಕೋಳ ಹಾಕಿಸಿ ಜೈಲಿಗೆ ಕಳುಹಿಸಿದ್ದಾಳೆ. ಆ ಬಳಿಕ ದೂರನ್ನು ಸುಟ್ಟು ಹಾಕಿದ್ದಾಳೆ. ಹೀಗಾಗಿ, ಹರ್ಷನನ್ನ ಬಿಡುಗಡೆ ಮಾಡಲಾಯ್ತು. ಈಗ ಹರ್ಷ ಸೇಡು ತೀರಿಸಿಕೊಳ್ಳಲು ಇಳಿದಿದ್ದಾನೆ. ಆತ, ಸಾನಿಯಾ ವಿರುದ್ಧ ಸೇಡು ತೀರಿಸಿಕೊಳ್ಳಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾನೆ.
ಲಾಯರ್ಗಳ ಜತೆ ಹರ್ಷ ಮಾತುಕತೆಗೆ ಇಳಿದಿದ್ದಾನೆ. ನಂತರ ಭುವಿಗೆ ಕರೆ ಮಾಡಿ, ‘ನಾನು ಅಮ್ಮಮ್ಮನಿಗೆ ಖುಷಿ ಆಗುವಂತಹ ಕೆಲಸ ಮಾಡುತ್ತಿದ್ದೇನೆ’ ಎಂಬ ಮಾತನ್ನು ಹೇಳಿದ್ದಾನೆ. ಇತ್ತೀಚೆಗೆ ರತ್ನಮಾಲಾ ಜತೆ ಮಾತನಾಡುವಾಗ ಸಾನಿಯಾ ಬಗ್ಗೆ ಹರ್ಷ ಪ್ರಶ್ನೆ ಮಾಡಿದ್ದ. ಇದಕ್ಕೆ ಉತ್ತರಿಸಿದ್ದ ರತ್ನಮಾಲಾ, ‘ಅವಳು ಹೇಗೆ ಅನ್ನೋದು ನನಗೂ ಗೊತ್ತು. ಸಮಯ ಬಂದಾಗ ಎಲ್ಲವೂ ತನ್ನಿಂದ ತಾನೇ ಆಗುತ್ತದೆ’ ಎಂದು ಹೇಳಿದ್ದಳು. ಈ ಮೂಲಕ ಸಾನಿಯಾ ಕೆಲಸದಿಂದ ತೆಗೆಸುವ ಆಲೋಚನೆಯಲ್ಲಿ ಅವಳು ಇದ್ದಳು. ಈಗ ಹರ್ಷ ಅದನ್ನು ಮಾಡುತ್ತಿದ್ದಾನೆ.
ಮತ್ತೆ ಶುರುವಾದ ವರುಧಿನಿ ತಲೆನೋವು
ಭುವಿಗೆ ಗೊತ್ತಿಲ್ಲದೆ ವರುಧಿನಿ ತಲೆನೋವಾಗಿದ್ದಾಳೆ. ಆಕೆ ನಡೆದುಕೊಳ್ಳುವ ರೀತಿ, ಆಡುವ ಮೈಂಡ್ ಗೇಮ್ಗಳು ವೀಕ್ಷಕರಿಗೆ ಇಷ್ಟ ಆಗುತ್ತಿಲ್ಲ. ಈಗ ಆಕೆ ಲಡಾಖ್ ಟ್ರಿಪ್ಗೆ ತೆರಳಿ ಮರಳಿ ಬಂದಿದ್ದಾಳೆ. ಹೇಳದೆ ಕೇಳದೆ ಆಕೆ ಟ್ರಿಪ್ಗೆ ತೆರಳಿದ್ದಳು. ಹೀಗಾಗಿ ರತ್ನಮಾಲಾಗೆ ಕೊಂಚ ಬೇಸರ ಆಗಿದೆ. ಆದರೆ, ಅದನ್ನು ರತ್ನಮಾಲಾ ತೋರಿಸಿಕೊಂಡಿಲ್ಲ.
ಈ ಮಧ್ಯೆ ಹರ್ಷ ಹಾಗೂ ಭುವಿಗೆ ವಿಚ್ಛೇದನ ಕೊಡಿಸಬೇಕು ಎನ್ನುವ ಆಲೋಚನೆಯಲ್ಲಿ ವರುಧಿನಿ ಇದ್ದಾಳೆ. ಮದುವೆ ರಿಜಿಸ್ಟ್ರೇಷನ್ ಕಾರ್ಯ ನಡೆಯಬೇಕಿದೆ. ಇದೇ ಸಂದರ್ಭದಲ್ಲಿ ವಿಚ್ಛೇದನ ಪತ್ರವನ್ನು ಇಟ್ಟು ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎಂಬ ಆಲೋಚನೆ ವರುಧಿನಿಯದ್ದು. ಪಾಲಿಶ್ ಮಾತುಗಳನ್ನು ಆಡಿ ಭುವಿಯು ಹರ್ಷನನ್ನು ಮದುವೆ ಆಗಿದ್ದಾಳೆ ಎಂಬ ಊಹೆ ವರುಧಿನಿಯದ್ದು. ಈ ಕಾರಣಕ್ಕೆ ಬೇರೆಯದೇ ಪ್ಲ್ಯಾನ್ ಮೂಲಕ ಇಬ್ಬರನ್ನೂ ಬೇರೆ ಮಾಡುವ ಆಲೋಚನೆಯಲ್ಲಿ ವರುಧಿನಿ ಇದ್ದಾಳೆ.
ಶ್ರೀಲಕ್ಷ್ಮಿ ಎಚ್.
Published On - 7:03 am, Fri, 21 October 22