
ನಮ್ರತಾ ಗೌಡ ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಫಿನಾಲೆ ತಲುಪೋ ಸ್ಪರ್ಧಿಗಳ ಪೈಕಿ ಅವರು ಒಬ್ಬರಾಗಬಹುದು ಎಂಬುದು ಅನೇಕರ ಊಹೆ. ಇದಕ್ಕಾಗಿ ನಮ್ರತಾ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ಬಗ್ಗೆ ಏನೇ ಆರೋಪ ಬಂದರೂ ಅದನ್ನು ಪ್ರಶ್ನೆ ಮಾಡುತ್ತಾರೆ. ಫಿನಾಲೆಗೆ ತಮ್ಮ ಹೆಸರು ಆಯ್ಕೆ ಆಗಿಲ್ಲ ಎಂದರೆ ಅವರು ಪ್ರಶ್ನೆ ಮಾಡುತ್ತಾರೆ. ಆದರೆ, ಮೊದಲು ನಮ್ರತಾ ಹೀಗಿರಲಿಲ್ಲ. ಇದಕ್ಕೆ ಅಂದು ನಡೆದ ಹಾಗೂ ಇಂದು ನಡೆದ ಘಟನೆಗಳೇ ಸಾಕ್ಷಿ.
ನಮ್ರತಾ ಗೌಡ ಅವರು ಮೊದಲು ವಿನಯ್ ಅವರ ಚಮಚಾ ರೀತಿ ಕಾಣಿಸಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಆದರೆ, ಇದನ್ನು ನಮ್ರತಾ ಒಪ್ಪಿಕೊಳ್ಳಲಿಲ್ಲ. ವಿನಯ್ ಅವರನ್ನು ಬೆಂಬಲಿಸುತ್ತಾ ತಮ್ಮ ಆಟವನ್ನೇ ಮರೆಯುತ್ತಿದ್ದರು. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗಿರಲಿಲ್ಲ. ವಿನಯ್ ಅವರನ್ನು ಅತಿಯಾಗಿ ನಮ್ರತಾ ಬೆಂಬಲಿಸುತ್ತಿದ್ದ ಸಂದರ್ಭದಲ್ಲಿ ಒಂದು ಘಟನೆ ನಡೆದಿತ್ತು.
ವಿನಯ್ ಗೌಡ ಅವರು ಗ್ಯಾಂಗ್ ಕಟ್ಟುತ್ತಿದ್ದ ಸಮಯವದು. ‘ನಮ್ಮ ವಿರೋಧಿ ಗುಂಪಿನವರನ್ನು ನಾಮಿನೇಟ್ ಮಾಡಿ ಅವರನ್ನು ಹೊರಕ್ಕೆ ಕಳಿಸುತ್ತಾ ಬರೋಣ. ನಾವು ಟಾಪ್ ಐದರಲ್ಲಿ ಇರೋಣ. ಒಂದು ಮುಖ್ಯ ವಿಚಾರ ಎಂದರೆ ಕಪ್ ನನ್ನ ಬಳಿ ಇರುತ್ತದೆ’ ಎಂದಿದ್ದರು ವಿನಯ್ ಗೌಡ. ಆಗ ಸ್ನೇಹಿತ್ ಅವರು ‘ನೀನು ಗೆದ್ದರೆ ನನಗೆ ಖುಷಿ’ ಎಂದಿದ್ದರು. ಈ ಮಾತನ್ನು ಕೇಳಿ ನಮ್ರತಾಗೆ ಖುಷಿ ಆಗಿತ್ತು. ಆಗ ನಮ್ರತಾನ ಎಲ್ಲರೂ ಟ್ರೋಲ್ ಮಾಡಿದ್ದರು. ‘ನೀನು ಕೂಡ ಕಪ್ ಗೆಲ್ಲೋಕೆ ಆಡುತ್ತಿರುವುದು. ಈ ರೀತಿ ನಗುತ್ತೀಯಲ್ಲ’ ಎಂದು ಅನೇಕರು ಟೀಕೆ ಮಾಡಿದ್ದರು. ಈಗ ನಮ್ರತಾ ಬದಲಾಗಿದ್ದಾರೆ.
ಎಲಿಮಿನೇಟ್ ಆದ ಸ್ಪರ್ಧಿಗಳ ರೀಯೂನಿಯನ್ ಬಿಗ್ ಬಾಸ್ ಮನೆಯಲ್ಲಿ ಆಗಿದ್ದು ಸ್ನೇಹಿತ್ ಕೂಡ ಆಗಮಿಸಿದ್ದಾರೆ. ಫಿನಾಲೆ ಯಾರು ಗೆಲ್ಲಬೇಕು ಎಂದಾಗ ಅವರು ಎಂದಿನಂತೆ ವಿನಯ್ ಹೆಸರನ್ನು ತೆಗೆದುಕೊಂಡಿದ್ದಾರೆ. ಆದರೆ, ನಮ್ರತಾ ರಿಯಾಕ್ಷನ್ ಅಂದು ಹೇಗಿತ್ತೋ ಹಾಗಿರಲಿಲ್ಲ. ಅವರು ಸ್ನೇಹಿತ್ನ ಪ್ರಶ್ನೆ ಮಾಡಿದ್ದಾರೆ. ಆಗ ಸ್ನೇಹಿತ್, ‘ನೀವು ಗೆದ್ದರೆ ನನಗೆ ಖುಷಿ ಇದೆ’ ಎಂದರು. ‘ನಾನು, ವಿನಯ್.. ಎಷ್ಟು ಜನರನ್ನು ಗೆಲ್ಲಿಸುತ್ತೀರಾ’ ಎಂದು ಮರು ಪ್ರಶ್ನೆ ಹಾಕಿದರು. ಆಗ ಸ್ನೇಹಿತ್ ಸೈಲೆಂಟ್ ಆದರು.
ಇದನ್ನೂ ಓದಿ: ವಿನಯ್ನ ವಹಿಸಿಕೊಂಡು ಬಂದ ಸ್ನೇಹಿತ್ಗೆ ನಮ್ರತಾ ಖಡಕ್ ಪ್ರಶ್ನೆ; ಮರುಮಾತೇ ಇಲ್ಲ
ನಮ್ರತಾ ಹಾಗೂ ಸ್ನೇಹಿತ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಆದಾಗ್ಯೂ ತಮ್ಮ ಬದಲು ವಿನಯ್ ಹೆಸರನ್ನು ಸ್ನೇಹಿತ್ ತೆಗೆದುಕೊಂಡಿದ್ದಕ್ಕೆ ನಮ್ರತಾ ಸಿಟ್ಟಾಗಿದ್ದಾರೆ. ಅವರು ಪ್ರಶ್ನೆ ಮಾಡಿದ್ದನ್ನು ಅನೇಕರು ಪ್ರಶಂಸಿದ್ದಾರೆ. ‘ನಮ್ರತಾಗೆ ಮೊದಲು ಕಾನ್ಫಿಡೆನ್ಸ್ ಇರಲಿಲ್ಲ. ಈಗ ಅವರಲ್ಲಿ ಆ ಕಾನ್ಫಿಡೆನ್ಸ್ ಬರುತ್ತಿದೆ’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಎಂಟು ಸ್ಪರ್ಧಿಗಳಿದ್ದಾರೆ. ನಮ್ರತಾ ಗೌಡ, ವಿನಯ್ ಗೌಡ, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ಕಾರ್ತಿಕ್ ಮಹೇಶ್, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಮಧ್ಯೆ ಸ್ಪರ್ಧೆ ಇದೆ. ತುಕಾಲಿ ಸಂತೋಷ್ ಹಾಗೂ ಸಂಗೀತಾ ಶೃಂಗೇರಿ ಹೊರತುಪಡಿಸಿ ಉಳಿದ ಎಲ್ಲರೂ ನಾಮಿನೇಟ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ