ಬಂದ ಅತಿಥಿಗಳು ಹೊರಗೆ ಹೋಗಲಿ ಎಂದ ನಮ್ರತಾ: ಕಾರಣ?
Bigg Boss: ಈ ಸೀಸನ್ನಲ್ಲಿ ಆಡಿ ಎಲಿಮಿನೇಟ್ ಆಗಿ ಹೊರ ಹೋದವರು ಅತಿಥಿಗಳಾಗಿ ಮನೆಗೆ ಬಂದಿದ್ದಾರೆ. ನಮ್ರತಾಗೆ ಗೆಳೆಯರು ಮರಳಿ ಬಂದಿದ್ದು ಖುಷಿಯಾಗಿಲ್ಲ ಬದಲಿಗೆ ದುಃಖವಾಗಿದೆ.
ಬಿಗ್ಬಾಸ್ (BiggBoss) ಮನೆಗೆ ಹೊಸ ಅತಿಥಿಗಳು ಬಂದಿದ್ದಾರೆ. ಇದೇ ಸೀಸನ್ನಲ್ಲಿ ಆಡಿ ಎಲಿಮಿನೇಟ್ ಆಗಿ ಹೊರಗೆ ಹೋಗಿರುವ ಸ್ಪರ್ಧಿಗಳನ್ನು ಅತಿಥಿಗಳಾಗಿ ಮತ್ತೆ ಕರೆತಂದಿದ್ದಾರೆ ಬಿಗ್ಬಾಸ್. ಗೆಳೆಯರು ಮತ್ತೆ ಮನೆಗೆ ಬಂದಿರುವುದು ಮನೆಯ ಸದಸ್ಯರಿಗೆಲ್ಲ ಖುಷಿಯಾಗಿದೆ. ಆದರೆ ನಮ್ರತಾ ಮಾತ್ರ, ಮನೆಗೆ ಬಂದಿರುವ ಎಲ್ಲರೂ ವಾಪಸ್ ಹೋಗಿಬಿಡಲಿ ಎಂದಿದ್ದಾರೆ. ಗೆಳೆಯರು ಮನೆಗೆ ಬಂದಿದ್ದರಿಂದ ನಮ್ರತಾಗೆ ಖುಷಿಗಿಂತಲೂ ಹೆಚ್ಚಾಗಿ ದುಃಖವಾಗಿದೆ.
ಮನೆಗೆ ಬಂದ ಸದಸ್ಯರು ಹೊರಗೆ ಏನು ನಡೆದಿದೆ, ನಡೆಯುತ್ತಿದೆ ಎಂಬುದನ್ನು ಸೂಚ್ಯವಾಗಿ ಮನೆಯ ಸದಸ್ಯರಿಗೆ ತಿಳಿಸಿದ್ದಾರೆ. ಆದರೆ ಬಂದ ಬಹುತೇಕರು ನಮ್ರತಾ ಬಗ್ಗೆ ಹೊರಗೆ ಋಣಾತ್ಮಕ ಅಭಿಪ್ರಾಯವಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಅದರಲ್ಲೂ ನಮ್ರತಾ ಹಾಗೂ ಕಾರ್ತಿಕ್ರ ಬಂಧದ ಬಗ್ಗೆ ನೆಗೆಟಿವ್ ಅಭಿಪ್ರಾಯವಿದೆ ಎಂದು ಹೇಳಿದ್ದಾರೆ.
ಇದು ನಮ್ರತಾಗೆ ತೀವ್ರ ಬೇಸರ ಮೂಡಿಸಿದೆ. ನಮ್ರತಾ ಜೊತೆ ಆತ್ಮೀಯವಾಗಿದ್ದ ಸ್ನೇಹಿತ್, ಮನೆಗೆ ಬಂದಾಗ ಮೊದಲಿನಂತೆ ನಮ್ರತಾ ಜೊತೆ ಮಾತನಾಡಲಿಲ್ಲ. ಇದು ನಮ್ರತಾಗೆ ಆಶ್ಚರ್ಯ ತಂದಿದೆ. ಆ ಬಳಿಕ ಸ್ನೇಹಿತ್, ವಿನಯ್ ಗೆಲ್ಲಲಿ ಎಂದಾಗ ನಮ್ರತಾ ಸ್ನೇಹಿತ್ಗೆ ಟಾಂಟ್ ನೀಡುವಂತೆ, ವಿನಯ್ ಮಾತ್ರ ಗೆದ್ದು ಬಿಟ್ಟರೆ ಬೇರೆಯವರೆಲ್ಲ ಏನು ಮಾಡಬೇಕು ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:‘ಸಖತ್ ಹರ್ಟ್ ಮಾಡಿದ್ದೇನೆ’; ಸ್ನೇಹಿತ್ನ ನೆನೆದು ಕಣ್ಣೀರು ಹಾಕಿದ ನಮ್ರತಾ ಗೌಡ
ಅದಾದ ಬಳಿಕ ನಮ್ರತಾ ಜೊತೆ ಕೆಲ ಕಾಲ ಮಾತನಾಡಿದ ಸ್ನೇಹಿತ್, ಹೊರಗೆ ನಮ್ರತಾ ಬಗ್ಗೆ ಋಣಾತ್ಮಕ ಅಭಿಪ್ರಾಯವಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಸ್ನೇಹಿತ್ ಮಾತುಗಳನ್ನು ಸೂಚ್ಯವಾಗಿ ಅರ್ಥ ಮಾಡಿಕೊಂಡ ನಮ್ರತಾ, ನನ್ನ ಹಾಗೂ ಕಾರ್ತಿಕ್ ನಡುವೆ ಅಂಥಹದ್ದೇನೂ ಇಲ್ಲ ಎಂದು ಕಣ್ಣೀರು ಹಾಕಿ, ನನ್ನನ್ನು ಇಲ್ಲಿಂದ ಹೊರಗೆ ಕಳಿಸಿಬಿಡಿ, ಆಟಕ್ಕಾಗಿ ನನ್ನ ಕ್ಯಾರೆಕ್ಟರ್ ಅನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ ಎಂದಿದ್ದಾರೆ.
ಅದಾದ ಬಳಿಕ ನಡೆದ ಚಟುವಟಿಕೆ ಒಂದರಲ್ಲಿ ಸಿರಿ ಮಾತನಾಡಿ, ನಮ್ರತಾ ಹಾಗೂ ವಿನಯ್ ನನ್ನ ಬಗ್ಗೆ ಹೀಗೆ ಮಾತನಾಡುತ್ತಾರೆ ಎಂದು ತಿಳಿದುಕೊಂಡಿಲ್ಲ ಎಂದು ಹೇಳಿ ಆ ಬಳಿಕ ನಮ್ರತಾ ಬಳಿ ಹೋಗಿ ಆ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದಾಗಲೂ ಸಹ ನಮ್ರತಾ ಮತ್ತೆ ಅಳಲು ಆರಂಭಿಸಿದರು. ಮನೆಗೆ ಬಂದಿರುವ ಎಲ್ಲ ಸದಸ್ಯರು ಹೊರಗೆ ಹೋಗಲಿ ಎಂದಿದ್ದಾರೆ.
ಬಳಿಕ ನಮ್ರತಾಗೆ ಸಂಗೀತಾ ಸಮಾಧಾನ ಹೇಳಿದ್ದು, ಈಗ ಆಗಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲ. ನೀನು ಅವರ ಮಾತು ಕಟ್ಟಿಕೊಂಡು ಆಟ ತ್ಯಜಿಸುತ್ತೀನೆಂದರೆ ಸುದೀಪ್ ಸರ್ಗೆ ನಿಮ್ಮ ಪೋಷಕರಿಗೆ ನೀಡಿದ ಮಾತಿನಿಂದ ಹಿಂದೆ ಸರಿದಂತೆ ಆಗುತ್ತದೆ. ನೀನು ನಿನ್ನ ಆಟವನ್ನು ಮುಂದುವರೆಸು ಎಂದು ಧೈರ್ಯ ತುಂಬಿದ್ದಾರೆ. ಆ ಬಳಿಕವಷ್ಟೆ ಅವರು ತುಸು ಸರಿ ಹೋಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:26 pm, Wed, 17 January 24