ಜಗದೀಶ್ ಅವರು ಸದ್ಯ ಚರ್ಚೆಯಲ್ಲಿ ಇದ್ದಾರೆ. ಶುಕ್ರವಾರ (ಜನವರಿ 25) ನಡೆದ ಗಲಾಟೆಯಲ್ಲಿ ಅವರ ಗನ್‌ಮ್ಯಾನ್ ಕಾನೂನು ಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಜಗದೀಶ್ ಹಾಗೂ ಅವರ ಗನ್ಮ್ಯಾನ್ನ ಪೊಲೀಸರು ಬಂಧಿಸಿದ್ದಾರೆ. ಇದು ಅವರ ಮುಂದಿನ ರಿಯಾಲಿಟಿ ಶೋ ‘ಬಾಯ್ಸ್ vs ಗರ್ಲ್ಸ್’ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಜಗದೀಶ್ ಅವರು ಎಂಟ್ರಿ ಕೊಟ್ಟರು. ಮೊದಲ ದಿನದಿಂದಲೂ ಅವರು ಸಾಕಷ್ಟು ಗಮನ ಸೆಳೆದರು. ಅವರು ದೊಡ್ಮನೆಯಲ್ಲಿ ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ಅವರ ಪ್ರತಿ ನಡೆಯೂ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕುವಂತೆ ಮಾಡಿತ್ತು. ಅವರು ಅವಾಚ್ಯ ಶಬ್ದ ಬಳಕೆ ಮಾಡಿ ಸಾಕಷ್ಟು ಟೀಕೆಗೆ ಒಳಗಾಗಬೇಕಾಯಿತು. ಅವರು ದೊಡ್ಮನೆಯಿಂದ ಹೊರ ಹೋಗಲು ಇದುವೇ ಕಾರಣ ಆಯಿತು.
ಸದ್ಯ ಕಲರ್ಸ್ ಕನ್ನಡದವರು ‘ಬಾಯ್ಸ್ vs ಗರ್ಲ್ಸ್’ ಹೆಸರಿನ ಹೊಸ ರಿಯಾಲಿಟಿ ಶೋ ಮಾಡುತ್ತಿದ್ದಾರೆ. ಇದರಲ್ಲಿ ಜಗದೀಶ್ ಅವರು ಕೂಡ ಇದ್ದಾರೆ. ಇದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಒಂದೊಮ್ಮೆ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿ ಅವರು ಪೊಲೀಸ್ ಕಸ್ಟಡಿಗೆ ಹೋದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಫೆಬ್ರವರಿ 1ರಿಂದ ಹೊಸ ರಿಯಾಲಿಟಿ ಶೋ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿದೆ. ಬಿಗ್ ಬಾಸ್ನ ಮಾಜಿ ಸ್ಪರ್ಧಿಗಳು ಇದರಲ್ಲಿ ಇದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 11ರ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಬಂಧನ
ಎಲ್ಲಕ್ಕಿಂತ ಮುಖ್ಯವಾಗಿ ಜಗದೀಶ್ ಅವರು ವಿವಾದದ ಮೇಲೆ ವಿವಾದ ಮಾಡಿಕೊಳ್ಳುತ್ತಿದ್ದಾರೆ. ಈ ವಿವಾದಗಳಿಂದ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅವರ ಮೇಲೆ ಹಲ್ಲೆ ಪ್ರಯತ್ನ ಕೂಡ ನಡೆದಿದೆ. ಇಷ್ಟೊಂದು ವಿವಾದ ಮಾಡಿಕೊಂಡ ವ್ಯಕ್ತಿಯನ್ನು ರಿಯಾಲಿಟಿ ಶೋನಲ್ಲಿ ಮುಂದುವರಿಸುವುದರಿಂದ ತೊಂದರೆ ಎದುರಾಗಬಹುದು. ಹೀಗಾಗಿ, ಅವರನ್ನು ಶೋನಿಂದ ಹೊರಕ್ಕೆ ಇಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.