ರಿಯಲ್ ಲೈಫ್ ಜೋಡಿಗಳು ಭಾಗವಹಿಸಿದ್ದ ‘ರಾಜಾ ರಾಣಿ’ ಶೋ ಜನಪ್ರಿಯತೆ ಪಡೆದುಕೊಂಡಿತ್ತು. ಈಗ ಆ ಕಾರ್ಯಕ್ರಮದ ಎರಡನೇ ಸೀಸನ್ ಆರಂಭ ಆಗಿದೆ. ‘ರಾಜಾ ರಾಣಿ 2’ (Raja Rani 2) ಬಗ್ಗೆ ಕಿರುತೆರೆ ಪ್ರೇಕ್ಷಕರಿಗೆ ತುಂಬ ನಿರೀಕ್ಷೆ ಇದೆ. ಮೊದಲ ಸೀಸನ್ ಹಿಟ್ ಆಗಿದ್ದರಿಂದ ಎರಡನೇ ಸೀಸನ್ ಅನ್ನು ಇನ್ನಷ್ಟು ಚೆನ್ನಾಗಿ ಪ್ರಸ್ತುತಪಡಿಸಬೇಕಾದ ಚಾಲೆಂಜ್ ಇದೆ. ‘ಕಲರ್ಸ್ ಕನ್ನಡ’ (Anupama Gowda) ವಾಹಿನಿಯಲ್ಲಿ ಈ ರಿಯಾಲಿಟಿ ಶೋ ಮೂಡಿಬರುತ್ತಿದೆ. ಜೂನ್ 11ರಿಂದ ಕಾರ್ಯಕ್ರಮ ಆರಂಭ ಆಗಿದೆ. ಕಳೆದ ಬಾರಿ ಅನುಪಮಾ ಗೌಡ ಅವರು ನಿರೂಪಕಿ ಆಗಿದ್ದರು. ಕಾರಣಾಂತರಗಳಿಂದ ಈ ಬಾರಿ ಅವರು ನಿರೂಪಣೆ ಮಾಡುತ್ತಿಲ್ಲ. ಅವರ ಬದಲು ನಟಿ ಜಾನ್ವಿ ರಾಯಲ (Janvi Rayala) ಅವರು ಎಂಟ್ರಿ ನೀಡಿದ್ದಾರೆ. ‘ರಾಜಾ ರಾಣಿ 2’ ಶೋ ನಡೆಸಿಕೊಡುವ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದಾರೆ. ವಿಶೇಷ ಏನೆಂದರೆ, ಜಾನ್ವಿ ರಾಯಲ ಅವರು ರಿಯಲ್ ಲೈಫ್ನಲ್ಲಿ ಡಾಕ್ಟರ್ ಕೂಡ ಹೌದು!
ದಂತ ವೈದ್ಯೆ ಆಗಿರುವ ಜಾನ್ವಿ ರಾಯಲ ಅವರಿಗೆ ನಟನೆ ಮೇಲೆ ಹೆಚ್ಚು ಆಸಕ್ತಿ. ಬಣ್ಣದ ಲೋಕದ ವಿವಿಧ ವಿಭಾಗಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಸಿನಿಮಾ ಮತ್ತು ಕಿರುಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅವರು ನಟಿಸಿದ ‘ಫೋರ್ ವಾಲ್ಸ್’ ಸಿನಿಮಾ ಈ ವರ್ಷ ತೆರೆಕಂಡಿತು. ಅದರಲ್ಲಿ ಖ್ಯಾತ ನಟ ಅಚ್ಯುತ್ ಕುಮಾರ್ ಜೊತೆ ಮಗಳ ಪಾತ್ರದಲ್ಲಿ ಅಭಿನಯಿಸುವ ಮೂಲಕ ಅವರು ಮೆಚ್ಚುಗೆ ಪಡೆದುಕೊಂಡರು. ಈ ಹಿಂದೆ ‘ಕಲರ್ಸ್ ಕನ್ನಡ ಸಿನಿಮಾ’ ವಾಹಿನಿಯಲ್ಲಿ ಕೆಲವು ಸಂದರ್ಶನಗಳನ್ನು ಮಾಡಿದ ಅನುಭವ ಅವರಿಗೆ ಇದೆ. ಈಗ ‘ರಾಜಾ ರಾಣಿ 2’ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಜನರನ್ನು ರಂಜಿಸಲು ಬಂದಿದ್ದಾರೆ.
ಜೂನ್ 11ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ರಾಜಾ ರಾಣಿ 2’ ಕಾರ್ಯಕ್ರಮದ ಗ್ರ್ಯಾಂಡ್ ಓಪನಿಂಗ್ ಆಗಿದೆ. ಈ ಬಾರಿ ಕೂಡ ಜಡ್ಜ್ ಸ್ಥಾನದಲ್ಲಿ ನಟಿ ತಾರಾ ಅನುರಾಧಾ ಮತ್ತು ಸೃಜನ್ ಲೋಕೇಶ್ ಮುಂದುವರಿದಿದ್ದಾರೆ. ಸೆಲೆಬ್ರಿಟಿ ಜೋಡಿಗಳಾದ ಶಾಲಿನಿ-ಧನರಾಜ್, ವೀಣಾ-ಸುಂದರ್, ಅರುಣ್ ಮಾಧುರ್ಯಾ, ಸಂದೇಶ್-ಮನೀಷಾ, ಕಾವ್ಯಾ-ಕುಮಾರ್, ಸುಜಾತಾ-ಅಕ್ಷಯ್, ರಾಜೀವ್ ರೇಷ್ಮಾ, ಅಕ್ಷಿತಾ-ರಜತ್, ನಿಷಿತಾ ಗೌಡ-ಪ್ರಸನ್ನ ಮುಂತಾದವರು ಭಾಗವಹಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.