‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿಯಲ್ಲಿ ಆರ್ಯವರ್ಧನ್, ಸಂಜು ಆಗಿ ಎಂಟ್ರಿ ಕೊಟ್ಟಿದ್ದಾನೆ. ಆತನೇ ಆರ್ಯವರ್ಧನ್ ಎಂಬುದು ಯಾರಿಗೂ ತಿಳಿದಿಲ್ಲ. ಎಲ್ಲರ ಪಾಲಿಗೆ ಆರ್ಯವರ್ಧನ್ ನಿಧನ ಹೊಂದಿದ್ದಾನೆ. ಆದರೆ, ಆತ ಬದುಕಿದ್ದಾನೆ. ಆತನ ಮುಖಚರ್ಯೆ ಬದಲಾಗಿದೆ. ನೆನಪು ಮಾಸಿದೆ. ಹೀಗಾಗಿ ಆತನೇ ಆರ್ಯವರ್ಧನ್ ಎಂದು ಗುರುತಿಸೋಕೆ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಸಂಜು ನಡೆದುಕೊಳ್ಳುತ್ತಿರುವ ರೀತಿ ಸಾಕಷ್ಟು ಜನರಿಗೆ ಅಚ್ಚರಿ ಮೂಡಿಸಿದೆ. ಅನುಗೆ ಪದೇಪದೇ ಆರ್ಯವರ್ಧನ್ ನೆನಪಾಗುತ್ತಿದ್ದಾನೆ. ಸಂಜು ಆ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾನೆ. ಸಂಜುನೇ ಆರ್ಯವರ್ಧನ್ ಎಂದು ಗೊತ್ತಾದರೆ ಅನು ಶಾಕ್ ಆಗೋದು ಗ್ಯಾರಂಟಿ.
ಅನುನಿಂದ ಸಂಜುಗೆ ಪಾಠ
ಕೆಲ ದಾಖಲೆಗಳನ್ನು ನೀಡೋಕೆ ಅನು ಮನೆಗೆ ಸಂಜು ಹೋಗಿದ್ದ. ಅಷ್ಟೇ ಅಲ್ಲ, ಕಂಪನಿಯಲ್ಲಿ ದೊಡ್ಡ ಮಟ್ಟದಲ್ಲಿ ಫ್ರಾಡ್ಗಳು ಆಗಿವೆ ಎಂಬುದನ್ನು ಆತ ಪತ್ತೆ ಹಚ್ಚಿದ್ದ. ತಾನು ಕಂಡು ಹಿಡಿದ ವಿಚಾರವನ್ನು ಅನು ಎದುರು ಹೇಳಿದ್ದಾನೆ ಸಂಜು. ಇದಕ್ಕೆ ಅನು ಸಿಟ್ಟಾಗಿದ್ದಾಳೆ. ಸಂಜುಗೆ ಬೈದು ಕಚೇರಿಗೆ ಕಳುಹಿಸಿದ್ದಾಳೆ. ಅಷ್ಟೇ ಅಲ್ಲ, ಈ ವಿಚಾರವನ್ನು ಮತ್ತೆ ಪ್ರಸ್ತಾಪ ಮಾಡಬಾರದು, ಮರಳಿ ಇಲ್ಲಿಗೆ ಬರಬಾರದು ಎಂಬ ಆದೇಶ ನೀಡಿದ್ದಾಳೆ ಅನು. ಇದರಿಂದ ಸಂಜುಗೆ ಬೇಸರ ಆಗಿದೆ. ಅದೇ ಬೇಸರದಲ್ಲಿ ಕಚೇರಿಗೆ ತೆರಳಿದ್ದಾನೆ.
ಸಿಬ್ಬಂದಿ ಪ್ರತಿಭಟನೆ
ಆರ್ಯವರ್ಧನ್ ಸಹೋದರ ಹರ್ಷ ಈಗ ಕಂಪನಿ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದಾನೆ. ಆತನ ಪತ್ನಿ ಮಾನ್ಸಿಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಕಂಪನಿಗೆ ಬಂದ ಸಂಜು ಯಾರು? ಆತನಿಗೂ ರಾಜ ನಂದಿನಿ ವಿಲಾಸಕ್ಕೂ ಏನು ಸಂಬಂಧ ಎಂಬಿತ್ಯಾದಿ ಪ್ರಶ್ನೆಗಳು ಆಕೆಗೆ ಮೂಡಿವೆ. ಇದೇ ಟೆನ್ಷನ್ನಲ್ಲಿ ಆಕೆ ದಿನ ದೂಡುತ್ತಿದ್ದಾಳೆ. ಈ ಮಧ್ಯೆ ಒಂದು ಘಟನೆಯಿಂದ ಇಡೀ ಸಿಬ್ಬಂದಿ ವರ್ಗ ಪ್ರತಿಭಟನೆ ಆರಂಭಿಸಿತ್ತು.
ಸಿಬ್ಬಂದಿ ಚಹ ಹಿಡಿದು ಚೇಂಬರ್ ಒಳಗೆ ಬಂದಿದ್ದ. ಈ ಟೀ ಅನ್ನು ತೆಗೆದುಕೊಳ್ಳೋಕೆ ಮುಂದಾದಳು ಮಾನ್ಸಿ. ‘ಇದು ನಿಮಗಲ್ಲ, ಆರ್ಯವರ್ಧನ್ ಸರ್ಗೆ ತಂದಿರೋ ಟೀ’ ಎಂದು ಹೇಳಿದ್ದಾನೆ. ಇದರಿಂದ ಸಿಟ್ಟಾದ ಮಾನ್ಸಿ ಸಿಬ್ಬಂದಿ ಕೆನ್ನೆಗೆ ಬಾರಿಸಿದ್ದಾಳೆ. ಇದು ಆತನಿಗೆ ಸಾಕಷ್ಟು ಸಿಟ್ಟು ತರಿಸಿದೆ. ಎಲ್ಲಾ ಸಿಬ್ಬಂದಿ ಸೇರಿ ಪ್ರತಿ ಭಟನೆ ಆರಂಭಿಸಿದ್ದಾರೆ.
ಎಲ್ಲರನ್ನೂ ಸೈಲೆಂಟ್ ಮಾಡಿದ ಸಂಜು
ಅನು ಮನೆಯಿಂದ ಹೊರಟ ಸಂಜು ನೇರವಾಗಿ ಕಚೇರಿಗೆ ಬಂದಿದ್ದಾನೆ. ಆತ ಇಲ್ಲಿಗೆ ಬರುವುದಕ್ಕೂ ಪ್ರತಿಭಟನೆ ಆರಂಭ ಆಗುವುದಕ್ಕೂ ಸರಿಯಾಗಿದೆ. ಪ್ರತಿಭಟನೆ ಗಂಭೀರ ಸ್ವರೂಪ ಪಡೆದುಕೊಂಡರೆ ಕೆಲಸ ನಿಲ್ಲೋ ಆತಂಕ ಎಲ್ಲರಲ್ಲೂ ಶುರುವಾಗಿತ್ತು. ಆ ಸಂದರ್ಭಕ್ಕೆ ಸರಿಯಾಗಿ ಆಗಮಿಸಿದ್ದಾನೆ ಸಂಜು. ಕಚೇರಿ ಒಳಗೆ ತೆರಳಿ ವಿಶೇಷ ಟೀ ಮಾಡಿಕೊಂಡು ಬಂದಿದ್ದಾನೆ. ‘ಇದು ಮಾನ್ಸಿ ಮೇಡಂ ಮಾಡಿಕೊಟ್ಟ ಟೀ. ಅವರು ಈ ರೀತಿಯಲ್ಲಿ ನಿಮ್ಮ ಬಳಿ ಕ್ಷಮೆ ಕೇಳಿದ್ದಾಳೆ. ದಯವಿಟ್ಟು ಟೀ ಸ್ವೀಕರಿಸಿ ಪ್ರತಿಭಟನೆ ನಿಲ್ಲಿಸಿ’ ಎಂದು ಕೋರಿದ್ದಾನೆ ಸಂಜು.
ಮಾನ್ಸಿ ಟೀ ಮಾಡಿಕೊಟ್ಟಿದ್ದಾಳೆ ಎಂಬ ಖುಷಿಯಲ್ಲಿ ಟೀ ಸ್ವೀಕರಿಸಿ ಪ್ರತಿಭಟನೆ ನಿಲ್ಲಿಸಲಾಗಿದೆ. ಇದೇ ಸಂದರ್ಭಕ್ಕೆ ಕಚೇರಿಗೆ ಅನುನ ಎಂಟ್ರಿ ಆಗಿದೆ. ಸಂಜುನ ಬುದ್ಧಿವಂತಿಕೆ ನೋಡಿ ಆಕೆಗೆ ಶಾಕ್ ಆಗಿದೆ. ಅಲ್ಲೇ ಇದ್ದ ಹರ್ಷ ಹಾಗೂ ಇತರರಿಗೂ ಸಂಜುನ ಬುದ್ಧಿವಂತಿಕೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಶ್ರೀಲಕ್ಷ್ಮಿ ಎಚ್.
Published On - 8:31 am, Fri, 21 October 22