ಕನ್ನಡ ಕಿರುತೆರೆಯಲ್ಲಿ ಅನುಪಮಾ ಗೌಡ (Anupama Gowda) ದೊಡ್ಡ ಹೆಸರು. ಚಿತ್ರರಂಗದಲ್ಲೂ ಅವರು ಸಕ್ರಿಯರಾಗಿದ್ದಾರೆ. ಸದ್ಯ ನಿರೂಪಕಿಯಾಗಿ ಜನಮನ ಗೆದ್ದಿರುವ ಅನುಪಮಾ, ಇದೀಗ ಹೊಸ ಕಾರ್ಯದ ಮೂಲಕ ಸುದ್ದಿಯಾಗಿದ್ದಾರೆ. ಬಿಗ್ ಬಾಸ್ 5ರಲ್ಲಿ ತಾರಾ ಸ್ಪರ್ಧಿಯೂ ಆಗಿದ್ದ ಅನುಪಮಾ ಗೌಡ, ಇದೀಗ ತಮ್ಮ ಗೆಟಪ್ ಬದಲಾಯಿಸಿದ್ದಾರೆ. ಉದ್ದ ಕೂದಲಿನ ಮೂಲಕ ಗುರುತಿಸಿಕೊಂಡಿದ್ದ ನಟಿ ಈಗ ಕೂದಲನ್ನು ಕತ್ತರಿಸಿದ್ದಾರೆ. ಅನುಪಮಾ ಅವರ ಈ ನಿರ್ಧಾರಕ್ಕೊಂದು ಮಹತ್ತರ ಉದ್ದೇಶವಿದೆ. ಕ್ಯಾನ್ಸರ್ ನಿಂದ ಕೂದಲು ಕಳೆದುಕೊಂಡಿರುವವರಿಗಾಗಿ ಕೂದಲು ದಾನ ಮಾಡುವುದಕ್ಕಾಗಿ ತಮ್ಮ ನೀಳ ತಲೆಗೂದಲನ್ನು ಕತ್ತರಿಸಿದ್ದಾರೆ ನಟಿ. ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅನುಪಮಾ, ಹೊಸ ಲುಕ್ನೊಂದಿಗೆ ಕೂದಲು ದಾನದ ಹಿಂದಿನ ಉದ್ದೇಶವನ್ನು ತೆರೆದಿಟ್ಟಿದ್ದಾರೆ.
‘‘ನನ್ನ ನೀಳ ತಲೆಗೂದಲು ಇದುವರೆಗಿನ ಪಯಣದಲ್ಲಿ ಜತೆಯಿದ್ದು ದೊಡ್ಡ ಮಟ್ಟದಲ್ಲಿ ಆತ್ಮವಿಶ್ವಾಸ ತುಂಬಿತ್ತು’’ ಎಂದು ಬರಹ ಆರಂಭಿಸಿದ್ದಾರೆ ಅನುಪಮಾ ಗೌಡ. ‘‘ಈಗ ಈ ತಲೆಗೂದಲು ಆತ್ಮವಿಶ್ವಾಸದ ಅಗತ್ಯವಿರುವವರಿಗೆ ನೆರವಾಗಲಿದೆ ಎನ್ನುವುದುನ್ನು ಹೇಳಲು ಖುಷಿಯಾಗುತ್ತಿದೆ. ಬಹಳ ಕಾಲದಿಂದ ಕೂದಲು ಕತ್ತರಿಸುವುದನ್ನು ತಡೆದಿದ್ದೆ. ಈಗ ಅಗತ್ಯವಿರುವ ಕ್ಯಾನ್ಸರ್ ಪೀಡಿತ ಹೋರಾಟಗಾರರಿಗೆ ನನ್ನ ಕಡೆಯ ಸಣ್ಣ ಬೆಂಬಲ ನೀಡಲು ಸಮಯ ಬಂದಿದೆ’’
‘‘ಎಲ್ಲಾ ಮನುಷ್ಯರೂ ಕೂದಲಿದ್ದರೂ- ಇಲ್ಲದಿದ್ದರೂ ಅವರವರ ರೀತಿಯಲ್ಲಿ ಸುಂದರವಾಗಿಯೇ ಇರುತ್ತಾರೆ ಎಂಬುದಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇನೆ. ಅವರೂ ಕೂಡ ನಗುತ್ತಿರಬೇಕು, ಅವರೂ ಕೂಡ ಉತ್ತಮ ಕೂದಲನ್ನು ಹೊಂದಲು ಅರ್ಹರು’’ ಎಂದು ಬರೆದಿದ್ದಾರೆ ಅನುಪಮಾ ಗೌಡ.
ತಮ್ಮ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ವಿಗ್ ತಯಾರಿಸುವ ಸಂಸ್ಥೆಗೆ ದಾನ ಮಾಡಿರುವದಾಗಿ ಅನುಪಮಾ ತಿಳಿಸಿದ್ದಾರೆ. ‘‘ಜನರಿಗೆ ಈ ಬಗ್ಗೆ ಅರಿವು ಮೂಡಿಸಲು ಹಾಗೂ ಜನರು ಇದರಿಂದ ಪ್ರೇರಣೆಗೊಂಡು ಮುಂದೆ ಬಂದು ಕೂದಲು ದಾನ ಮಾಡಲು ಪೋಸ್ಟ್ ಹಂಚಿಕೊಂಡಿದ್ದೇನೆ’’ ಎಂದು ಬರಹ ಮುಕ್ತಾಯ ಮಾಡಿದ್ದಾರೆ ಅನುಪಮಾ.
ನೆಚ್ಚಿನ ನಟಿಯ ಹೊಸ ಗೆಟಪ್ಅನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ಅದಕ್ಕೂ ಮೇಲಾಗಿ ಅದರ ಹಿಂದಿರುವ ಮಹತ್ತರ ಕಾರಣವನ್ನು ತಿಳಿದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಾಮೆಂಟ್ಗಳ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಅನುಪಮಾ ಗೌಡ ಹಂಚಿಕೊಂಡಿರುವ ಪೋಸ್ಟ್:
ಹೊಸ ಲುಕ್ನಲ್ಲಿ ಅನುಪಮಾ ಗೌಡ:
ಅನುಪಮಾ ಗೌಡ ಇತ್ತೀಚೆಗೆ ಮುಕ್ತಾಯವಾಗ ‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮದ ನಿರೂಪಕಿಯಾಗಿದ್ದರು.
Published On - 9:15 am, Tue, 12 April 22