
‘ನಮ್ಮ ಮೇಲೆ ಹಲ್ಲೆ ನಡೆದಿದೆ’ ಎಂದು ಕಿರುತೆರೆ ನಟಿ ಕಾವ್ಯಾ ಗೌಡ ಹಾಗೂ ಅವರ ಪತಿ ಸೋಮಶೇಖರ್ ಆರೋಪಿಸಿದ್ದರು. ಸೋಮಶೇಖರ್ ಅರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ಆಗಿತ್ತು. ಸಹೋದರ ಸಂಬಂಧಿ ಕಡೆಯಿಂದಲೇ ಈ ಹಲ್ಲೆ ಆಗಿದೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಸೋಮಶೇಖರ್ ಸಹೋದರ ನಂದೀಶ್ ಪತ್ನಿ ಪ್ರೇಮಾ ತಮ್ಮ ಭಾಗದ ಕಥೆ ತೆರೆದಿಟ್ಟಿದ್ದಾರೆ. ಕಾವ್ಯಾ ಈ ನಾಟಕವಾಡಲು ಕಾರಣ ತಿಳಿಸಿದ್ದಾರೆ.
‘ನಮ್ಮ ಮಾವನ ಮನೆಯಲ್ಲಿ ನಾವೆಲ್ಲರೂ ಇದ್ದೇವೆ. ಕೆಳ ಮಹಡಿಯಲ್ಲಿ ನಮ್ಮ ಮಾವ ವಾಸವಿದ್ದಾರೆ. ಮೊದಲ ಮಹಡಿಯಲ್ಲಿ ನಾವು, ಎರಡನೇ ಮಹಡಿಯಲ್ಲಿ ಕಾವ್ಯ ಕುಟುಂಬ ವಾಸವಿದೆ. ಅವರವರ ಮನೆಯಲ್ಲಿ ಅವರವರು ಇರಿ ಎಂದು ಮಾವ ಎಲ್ಲರಿಗೂ ತಿಳಿಸಿದ್ದಾರೆ. ಈಗ ನಮ್ಮ ಮನೆ ಕಬಳಿಸಲು ಕಾವ್ಯ ಗೌಡ ಈ ರೀತಿ ಕಿರಿಕ್ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ ಪ್ರೇಮಾ.
‘ಸದ್ಯ ನಡೆದಿರುವ ವಿಷಯವನ್ನು ಮಾವನ ಗಮನಕ್ಕೆ ತಂದಿದ್ದೆವು. ಅವರು ಬುದ್ಧಿ ಮಾತು ಹೇಳಿ ಕಳಿಸಿದ್ದರು. ಸಂಬಂಧದಲ್ಲೇ ನಾನು ಮದುವೆ ಆಗಿರೋದು. ಹಾಗಾಗಿ ನನ್ನ ಮಾವನ ಮಾತಿಗೆ ತಲೆ ಬಾಗಿದ್ದೇನೆ. ಇಷ್ಟು ದಿನ ತಾಳ್ಮೆಯಿಂದಲೇ ಇದ್ದೆ.ಆದರೆ ಇವತ್ತು ತಾಳ್ಮೆ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ’ ಎಂದು ಪ್ರೇಮಾ ಹೇಳಿದ್ದಾರೆ.
‘ಕಾವ್ಯಾ ಮನೆಯ ಕುಕ್ ನಮ್ಮ ಅಡುಗೆ ಮನೆಗೆ ಬಂದಿದ್ದರು. ಯಾಕಮ್ಮ ಇಲ್ಲಿ ಬಂದಿದ್ದೀಯಾ ಎಂದು ಕೇಳಿದೆ. ಆದರೆ, ಆಕೆ ಏನೂ ಹೇಳದೆ ಹೋದಳು. ನಂತರ ಕಾವ್ಯಾ ಬಂದು ಇದು ನಮ್ಮ ಮನೆ ಹೊರಗೆ ಹೋಗಿ ಎಂದು ಹೇಳಿ ಗಲಾಟೆ ಮಾಡಿದ್ದಾಳೆ’ ಎಂದು ಕಾವ್ಯಾ ಮೇಲೆಯೇ ಪ್ರೇಮಾ ಗಂಭೀರ ಆರೋಪ ಮಾಡಿದ್ದಾರೆ.
‘ಅದು ನಮ್ಮ ಮಾವ ಕಟ್ಟಿರುವ ಮನೆ. ಅವಳಷ್ಟೇ ಹಕ್ಕು ನನಗೂ ಇದೆ. ಭಾವ ಎಂದು ನೋಡದೆ ನಂದೀಶ್ ಅವರನ್ನು ಕಾವ್ಯಾ ಟ್ರಿಗರ್ ಮಾಡಿದ್ದಾರೆ. ಸೋಮಶೇಖರ್ ಕೂಡ ಬಂದು ಗಲಾಟೆ ಮಾಡಿದ್ದಾರೆ. ಆ ಮನೆ ನಮ್ಮದಲ್ಲ ನಿಜ, ಆದರೆ,ನಮ್ಮ ಮಾವನ ಮನೆ. ಪ್ರೀತಿಯಿಂದ ನಮ್ಮ ಮನೆ ಎಂದು ಹೇಳಿಕೊಳ್ಳುತ್ತೇವೆ. ಮನೆ ಗೃಹ ಪ್ರವೇಶವಾಗಿ ಎರಡೂವರೆ ವರ್ಷ ಆಗಿದೆ. ನಮ್ಮನ್ನು ಮನೆಯಿಂದ ಹೊರಹಾಕಲು ಕಾವ್ಯಾ ಸಣ್ಣ ವಿಚಾರಕ್ಕೂ ಗಲಾಟೆ ಮಾಡ್ತಾಳೆ’ ಎಂಬುದು ಪ್ರೇಮಾ ಆರೋಪ.
ಇದನ್ನೂ ಓದಿ: ಸಂಬಂಧಿಯಿಂದಲೇ ನಟಿ ಕಾವ್ಯಾ ಗೌಡಗೆ ಬಂತು ರೇಪ್ ಬೆದರಿಕೆ; ಪತಿಯ ಮೇಲೆ ಹಲ್ಲೆ
‘ನಾನು ಇಲ್ಲದಿದ್ದಾಗ ನಮ್ಮ ಮನೆಗೆಲ್ಲ ಬಂದು ಕಾವ್ಯಾ ದಂಪತಿ ಬೀಗ ಕದ್ದಿದ್ದಾರೆ. ಮನೆಗೆ ಬಂದುಫೋಟೊ ಶೂಟ್ ಮಾಡಿದ್ದಾರೆ. ಕೆಲ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಆಕೆ ಕಲಾವಿದೆ. ಏನೇ ಹೇಳಿದರೂ ಜನರು ನಂಬುತ್ತಾರೆ ಎಂದು ಹೀಗೆಲ್ಲ ಹೇಳಿದ್ದಾಳೆ. ಪ್ಯಾಂಟ್ ಎಲ್ಲಾ ತೆಗೆದು ಸೋಮಶೇಖರ್ ಅಸಹ್ಯವಾಗಿ ವರ್ತಿಸಿದ್ದಾರೆ. ಭವ್ಯಾ ಗೌಡ ನನ್ನ ಪತಿ ಮೇಲೆ ಹಲ್ಲೆ ಮಾಡಿದ್ದಾಳೆ. ನನ್ನ ಕತ್ತಿನ ತಾಳಿಸರ ಕಿತ್ತು ಹಾಕಿದ್ದಾರೆ’ ಎಂದು ಕಾವ್ಯಾ ಸಹೋದರಿಯ ಮೇಲೂ ಪ್ರೇಮಾ ಆರೋಪ ಹೊರಿಸಿದ್ದಾರೆ.
‘ಕಾವ್ಯಾ, ಸೋಮಶೇಖರ್, ಭವ್ಯಾ ಮೇಲೆ ದೂರು ನೀಡಿದ್ದೇನೆ. ಸೋಮವಾರ (ಜನವರಿ 26) ರಾತ್ರಿ ಎಫ್ಐಆರ್ ದಾಖಲಿಸಿದ್ದೇವೆ. ನಮ್ಮ ಮಾವನ ಮರ್ಯಾದೆಗಾಗಿ ಇಷ್ಟು ದಿನ ಸುಮ್ಮನಿದ್ದೆ. ಆದರೆ ಆಕೆ ಆರೋಪ ಮಾಡಿದ್ದರಿಂದ ಮಾತಾಡೋ ಹಾಗೆ ಆಗಿದೆ. ಸೋಮಶೇಖರ್ ನನ್ನ ತಂದೆಗೆ ಕರೆ ಮಾಡಿ ಅವಾಚ್ಯವಾಗಿ ಬೈದಿದ್ದಾರೆ. ಚಾಕುವಿಂದ ಹಲ್ಲೆ ಅನ್ನೋದು ಸುಳ್ಳು ಆರೋಪ. ತಾಳ್ಮೆಯಿಂದ ಇದ್ದಿದ್ದಕ್ಕೆ ಹೀಗೆಲ್ಲ ಮಾಡ್ತಿದ್ದಾರೆ’ ಎಂದು ಪ್ರೇಮಾ ದೂರುಗಳ ಸರಮಾಲೆಯನ್ನೇ ಇಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.