Bigg Boss Kannada: ‘ಈ ಸಲದ ಬಿಗ್​ ಬಾಸ್​ ಬೇಸರ ತಂದಿದೆ’; ಅಸಮಾಧಾನಕ್ಕೆ ಕಾರಣ ತಿಳಿಸಿದ ಮಾಜಿ ಸ್ಪರ್ಧಿ ಕಾವ್ಯಾ ಶಾಸ್ತ್ರಿ

‘ಇದು ನಿಮ್ಮ ಮಗುವಿನ ಮನಸ್ಸಿನ ಮೇಲೆ ಪ್ರತೀಕೂಲ ಪರಿಣಾಮ ಬೀರುತ್ತದೆ ಹಾಗೂ ಅವರು ಈ ಸ್ವಭಾವದ ಅನುಕರಣೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ’ ಎಂದು ಕಾವ್ಯಾ ಶಾಸ್ತ್ರಿ ಹೇಳಿದ್ದಾರೆ. ಬಿಗ್ ಬಾಸ್​ ಕನ್ನಡ 10ನೇ ಸೀಸನ್​ ಬಗ್ಗೆ ಅವರು ಹಂಚಿಕೊಂಡಿರುವ ಅಭಿಪ್ರಾಯಕ್ಕೆ ಅನೇಕರು ಸಹಮತ ಸೂಚಿಸಿದ್ದಾರೆ. ಕಮೆಂಟ್​ಗಳ ಮೂಲಕ ನೆಟ್ಟಿಗರು ತಮ್ಮ ಅನಿಸಿಕೆ ತಿಳಿಸಿದ್ದಾರೆ.

Bigg Boss Kannada: ‘ಈ ಸಲದ ಬಿಗ್​ ಬಾಸ್​ ಬೇಸರ ತಂದಿದೆ’; ಅಸಮಾಧಾನಕ್ಕೆ ಕಾರಣ ತಿಳಿಸಿದ ಮಾಜಿ ಸ್ಪರ್ಧಿ ಕಾವ್ಯಾ ಶಾಸ್ತ್ರಿ
ಕಾವ್ಯಾ ಶಾಸ್ತ್ರಿ

Updated on: Nov 02, 2023 | 4:19 PM

ನಟಿ ಕಾವ್ಯಾ ಶಾಸ್ತ್ರಿ (Kavya Shastry) ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ಶೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಸೀಸನ್​ನಲ್ಲಿ ಕೆಲವು ಸ್ಪರ್ಧಿಗಳು ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಅವರು ತಕರಾರು ಎತ್ತಿದ್ದಾರೆ. ಅಲ್ಲದೇ ಮಕ್ಕಳಿಗೆ ಈ ಶೋ ಸೂಕ್ತ ಅಲ್ಲ ಎಂದು ಕೂಡ ಹೇಳಿದ್ದಾರೆ.

‘ಈ ಸಲದ ಕನ್ನಡದ ಬಿಗ್​ ಬಾಸ್‌ ಸೀಸನ್‌ ನಿಜಕ್ಕೂ ಬೇಸರ ತಂದಿದೆ. ಶೋನಲ್ಲಿ ಉಳಿಯೋ ಭರದಲ್ಲಿ ಅವಾಚ್ಯ ಶಬ್ದಗಳಲ್ಲಿ ನಿಂದನೆ, ಚಾರಿತ್ರ್ಯ ವಧೆ, ಹೆಣ್ಣುಮಕ್ಕಳ ಮೇಲೆ ಏಕವಚನದ ಬಳಕೆ, ಮಾನಸಿಕವಾಗಿ ಇತರರನ್ನು ಕುಗ್ಗಿಸುವ ಪ್ರಯತ್ನ, ಜೋರುಧ್ವನಿಯಲ್ಲಿ ಗದರುವುದು, ಹೆದರಿಸುವುದು, ಇವೆಲ್ಲವೂ ಹೆಚ್ಚಾಗಿದೆ. ಚಿಕ್ಕ ಮಕ್ಕಳಿರುವ ತಂದೆ-ತಾಯಂದಿರು ದಯವಿಟ್ಟು ಇಂತಹ ಕಾರ್ಯಕ್ರಮಗಳನ್ನು ಚಿಕ್ಕ ಮಕ್ಕಳ ಎದುರು ನೋಡದಿರಿ. ಇದು ನಿಮ್ಮ ಮಗುವಿನ ಮನಸ್ಸಿನ ಮೇಲೆ ಪ್ರತೀಕೂಲ ಪರಿಣಾಮ ಬೀರುತ್ತದೆ ಹಾಗೂ ಅವರು ಈ ಸ್ವಭಾವದ ಅನುಕರಣೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ’ ಎಂದು ಕಾವ್ಯಾ ಶಾಸ್ತ್ರಿ ಅವರು ಬರೆದುಕೊಂಡಿದ್ದಾರೆ.

‘ನಾನು ಯಾವುದೇ ಕಾರ್ಯಕ್ರಮದ ವಿರುದ್ಧವಾಗಿಲ್ಲ. ಚಿಕ್ಕ ಮಕ್ಕಳನ್ನು ಹೊಂದಿರುವ ಪೋಷಕರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ. ಯಾವ ವಯೋಮಾನದ ಪ್ರೇಕ್ಷಕರಿಗೆ ಇದು ಸೂಕ್ತ ಎಂಬ ಸೂಚನೆಯನ್ನು ಸೀರಿಯಲ್​ಗಳು ಕೂಡ ನೀಡುತ್ತವೆ. ಆದರೂ ಆ ಸೂಚನೆಯಲ್ಲಿ ನಿರ್ಲಕ್ಷಿಸಿ ನಾವು ಮನೆಯಲ್ಲಿ ಅದನ್ನು ವೀಕ್ಷಿಸುತ್ತೇವೆ. ನಿಮ್ಮ ಮಗು ಉದ್ದೇಶಪೂರ್ವಕವಾಗಿ ಇಂಥ ನೆಗೆಟಿವ್​ ಕಂಟೆಂಟ್​ ನೋಡದೇ ಇರಬಹುದು. ಕೇವಲ ಆಡಿಯೋ ಕೂಡ ಮಗುವಿನ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಎನರ್ಜಿ ಮತ್ತು ಮಕ್ಕಳ ಬಗ್ಗೆ ಕಾಳಜಿ ವಹಿಸಿ’ ಎಂದು ಕಾವ್ಯಾ ಶಾಸ್ತ್ರಿ ಅವರು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ವಿನಯ್​ ಗೌಡ ಕಾಲು ಇಟ್ಟಲ್ಲೆಲ್ಲ ಬರೀ ಜಗಳ

ಕನ್ನಡದ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಕಾವ್ಯಾ ಶಾಸ್ತ್ರಿ ಅವರು ಗುರುತಿಸಿಕೊಂಡಿದ್ದಾರೆ. ನಟಿಯಾಗಿ, ನಿರೂಪಕಿಯಾಗಿ ಅವರು ಹೆಸರು ಗಳಿಸಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 4’ ಶೋನಲ್ಲಿ ಅವರು ಸ್ಪರ್ಧಿ ಆಗಿದ್ದರು. ಬಿಗ್ ಬಾಸ್​ 10ನೇ ಸೀಸನ್​ ಬಗ್ಗೆ ಕಾವ್ಯಾ ಶಾಸ್ತ್ರಿ ಹಂಚಿಕೊಂಡಿರುವ ಅಭಿಪ್ರಾಯಕ್ಕೆ ಅನೇಕರು ಸಹಮತ ಸೂಚಿಸಿದ್ದಾರೆ. ಕಮೆಂಟ್​ಗಳ ಮೂಲಕ ನೆಟ್ಟಿಗರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತ್ರವಾಗಿ ಈ ಶೋ ಪ್ರಸಾರ ಆಗುತ್ತಿದೆ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಪ್ರತಿ ದಿನದ ಸಂಚಿಕೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:05 pm, Thu, 2 November 23