KBC 13: ಕೌನ್ ಬನೇಗಾ ಕರೋಡ್ ಪತಿಯ 13ನೇ ಸೀಸನ್ ಭರ್ಜರಿಯಾಗಿ ಮೂಡಿಬರುತ್ತಿದ್ದು, ಮತ್ತೋರ್ವ ಸ್ಪರ್ಧಿ 1 ಕೋಟಿ ರೂ ಮೊತ್ತದ ಪ್ರಶ್ನೆ ಎದುರಿಸಿದ್ದಾರೆ. ಜೋಧಪುರ ಮೂಲದ ಹಿರಿಯ ನರ್ಸಿಂಗ್ ಸೂಪರಿಂಟೆಂಡೆಂಟ್ ಆದ ಸವಿತಾ ಭಾಟಿ ಒಂದು ಕೋಟಿ ಮೊತ್ತದ ಪ್ರಶ್ನೆ ಎದುರಿಸಿದ ಮಹಿಳೆ. ಆದರೆ ದುರದೃಷ್ಟವಶಾತ್ ಆ ಪ್ರಶ್ನೆಗೆ ಉತ್ತರ ತಿಳಿಯದೆ ಅವರು ಕ್ವಿಟ್ ಮಾಡಿದ್ದಾರೆ. 14 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ 50 ಲಕ್ಷ ಗೆದ್ದಿದ್ದ ಅವರು 15ನೇ ಪ್ರಶ್ನೆಯಲ್ಲಿ ಎಡವಿದರು. ಆ ಪ್ರಶ್ನೆಗೆ ನಿಮಗೆ ಉತ್ತರ ತಿಳಿದಿದೆಯೇ? ಪ್ರಯತ್ನಿಸಿ.
ಕೆಬಿಸಿ ಕಾರ್ಯಕ್ರಮವನ್ನು ನಡೆಸಿಕೊಡುವ ಅಮಿತಾಭ್ ಬಚ್ಚನ್, ಕೇಳಿದ ಒಂದು ಕೋಟಿ ಮೊತ್ತದ ಪ್ರಶ್ನೆ ಇದಾಗಿತ್ತು. ‘1915ರಲ್ಲಿ ನಡೆದ ಮೊದಲನೇ ವರ್ಲ್ಡ್ ವಾರ್ ಸಮಯದಲ್ಲಿ, ಭಾರತದ ಸುಮಾರು 16,000 ಯೋಧರು ಹೋರಾಡಿದ್ದರು. ಅದು ಯಾವ ಯುದ್ಧ?’ – ಇದು ಸವಿತಾ ಅವರಿಗೆ ಇದ್ದ ಪ್ರಶ್ನೆಯಾಗಿತ್ತು. ಆಯ್ಕೆಗಳಾಗಿ, ಗೆಲೀಶಿಯಾ, ಅಂಕರಾ, ಟಾಬ್ಸೋರ್, ಗಲಿಪೊಲಿ ಇದ್ದವು. ಆದರೆ ಅವರಿಗೆ ಉತ್ತರ ತೋಚದ ಕಾರಣ ಸ್ಪರ್ಧೆಯನ್ನು ಮುಕ್ತಾಯಗೊಳಿಸಿದರು. ಸರಿಯಾದ ಉತ್ತರ ಗಲಿಪೊಲಿ.
ಸವಿತಾ ಅವರು 25 ಲಕ್ಷದ ಪ್ರಶ್ನೆಗೆ ಉತ್ತರಿಸುವಾಗ ತಮ್ಮ ಎಲ್ಲಾ ಲೈಫ್ ಲೈನ್ ಬಳಸಿದ್ದರು. ಆದ್ದರಿಂದಲೇ ಅವರು 1 ಕೋಟಿ ಮೊತ್ತದ ಪ್ರಶ್ನೆಗೆ ಊಹಿಸಿ ಉತ್ತರ ನೀಡುವುದು ಸರಿಯಾಗುವುದಿಲ್ಲ ಎಂದು ಕ್ವಿಟ್ ಮಾಡಿದರು. ಕೊನೆಯಲ್ಲಿ ಅಮಿತಾಭ್, ಕ್ವಿಟ್ ಮಾಡಿದ ನಂತರ ಊಹಿಸುವುದಾದರೆ, ನಿಮ್ಮದು ಯಾವ ಉತ್ತರ ಎಂದು ಕೇಳಿದರು. ಆಗ ಸವಿತಾ ಸರಿ ಉತ್ತರವಾದ ಗಲಿಪೊಲಿಯನ್ನೇ ಹೇಳಿದ್ದರು. ಉತ್ತರವನ್ನು ಪರದೆಯಲ್ಲಿ ತೋರಿಸಿದ ಮೇಲೆ ಸವಿತಾ ಅವರಿಗೆ ಕ್ವಿಟ್ ಮಾಡಿದ್ದಕ್ಕೆ ನಿರಾಸೆಯಾಯಿತು.
ಕೆಬಿಸಿ 13ರಲ್ಲಿ ಇದುವರೆಗೆ ಹಲವು ಜನ ಒಂದ ಕೋಟಿ ಮೊತ್ತದ ಪ್ರಶ್ನೆಯ ಹಂತಕ್ಕೆ ತಲುಪಿದ್ದಾರೆ. ಅಮಿತಾಭ್ ನಡೆಸಿಕೊಡುವ ಈ ಕಾರ್ಯಕ್ರಮ ವೀಕ್ಷಕರ ಮನಗೆದ್ದಿದ್ದು, ಉತ್ತಮವಾಗಿ ಮೂಡಿಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಪ್ರತಿ ಶುಕ್ರವಾರ ವಿವಿಧ ರಂಗದ ಖ್ಯಾತ ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ವೀಕ್ಷಕರಿಗೆ ಭರ್ಜರಿ ಮನೋರಂಜನೆ ನೀಡುತ್ತಿದೆ. ಈ ವಾರ ಖ್ಯಾತ ನಟರಾದ ಪಂಕಜ್ ತ್ರಿಪಾಠಿ ಹಾಗೂ ಪ್ರತೀಕ್ ಗಾಂಧಿ ಶುಕ್ರವಾರದ ಸಂಚಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಆ ಸಂಚಿಕೆ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.
ಇದನ್ನೂ ಓದಿ:
3ನೇ ಕ್ಲಾಸ್ ಓದಿದ ಡಾ. ರಾಜ್ಕುಮಾರ್ ಇಂಗ್ಲಿಷ್ ಕಲಿತಿದ್ದು ಹೇಗೆ? ಇಲ್ಲಿದೆ ಅದರ ಸೀಕ್ರೆಟ್
ಜಾಗಿಂಗ್ ನೆಪದಲ್ಲಿ ಗರ್ಲ್ ಫ್ರೆಂಡ್ ಮೀಟ್ ಮಾಡೋಕೆ ಬಂದ ಗಂಡನನ್ನ ರೆಡ್ ಹ್ಯಾಂಡ್ಆಗಿ ಹಿಡಿದ ಪತ್ನಿ! ವಿಡಿಯೋ ನೋಡಿ
Published On - 1:51 pm, Thu, 30 September 21