
ಭಾರತೀಯ ಟಿವಿ ಜಗತ್ತಿನ ತಾರೆ ಕಪಿಲ್ ಶರ್ಮಾ (Kapil Sharma) ಅವರಿಗೆ ಸೇರಿದ ಕೆಫೆ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದಾರೆ. ಕಪಿಲ್ ಶರ್ಮಾ ಅವರು ಕೆನಡಾನಲ್ಲಿ ಕೆಫೆಯೊಂದನ್ನು ಹೊಂದಿದ್ದು, ಕೆಫೆಯ ಮೇಲೆ ಖಲಿಸ್ತಾನಿ ಉಗ್ರರು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಕಾರಿನಲ್ಲಿ ಬಂದ ಖಲಿಸ್ತಾನಿ ಉಗ್ರರು ಕೆಫೆ ಮೇಲೆ ದಾಳಿ ನಡೆಸಿ ಪರಾರಿ ಆಗಿದ್ದಾರೆ. ಬುಧವಾರ ರಾತ್ರಿ (ಕೆನಡಾ ಸಮಯದ ಪ್ರಕಾರ) ಘಟನೆ ನಡೆದಿದೆ.
ಕಪಿಲ್ ಶರ್ಮಾ ಅವರು ತಮ್ಮ ಪತ್ನಿ ಗಿನ್ನಿ ಅವರೊಟ್ಟಿಗೆ ಸೇರಿ, ಕೆನಡಾದ ಬ್ರಿಟೀಷ್ ಕೊಲಂಬಿಯಾನಲ್ಲಿ ಕೆಫೆಯೊಂದನ್ನು ತೆರೆದಿದ್ದರು. ಕೆಫೆಗೆ ‘ಕ್ಯಾಪ್’ಸ್ ಕೆಫೆ’ ಎಂದು ಹೆಸರಿಡಲಾಗಿತ್ತು. ಕೆಲವು ದಿನಗಳ ಹಿಂದೆಯಷ್ಟೆ ಈ ಕೆಫೆಯನ್ನು ತೆರೆಯಲಾಗಿತ್ತು. ಇದೀಗ ಖಲಿಸ್ತಾನಿ ಉಗ್ರರು ಕೆಫೆಯ ಮೇಲೆ ದಾಳಿ ಮಾಡಿದ್ದಾರೆ. ಖಲಿಸ್ತಾನಿ ಉಗ್ರರ ದಾಳಿಯ ವಿಡಿಯೋ ಒಂದು ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಕಾರಿನಲ್ಲಿ ಕೂತು ತಮ್ಮ ಬಂದೂಕಿನಿಂದ ಕೆಫೆ ಕಡೆ ಸತತವಾಗಿ ಗುಂಡು ಹಾರಿಸುತ್ತಿರುವ ವಿಡಿಯೋ ಸೆರೆ ಆಗಿದೆ.
ಕಪಿಲ್ ಶರ್ಮಾ ಕೆಫೆ ಮೇಲೆ ನಡೆದ ದಾಳಿಯ ಹೊಣೆಯನ್ನು ಖಲಿಸ್ತಾನಿ ಉಗ್ರ ಹರಿಜಿತ್ ಸಿಂಗ್ ಲಡ್ಡಿ ವಹಿಸಿಕೊಂಡಿದ್ದಾನೆ. ಕೆನಡಾನಲ್ಲಿ ಖಲಿಸ್ತಾನಿ ಉಗ್ರರು ಆಗಾಗ್ಗೆ ಈ ರೀತಿಯ ಅಟ್ಟಹಾಸ ಮೆರೆಯುತ್ತಲೇ ಇರುತ್ತಾರೆ. ಕೆನಡಾ ಪೊಲೀಸರಿಗೆ ಈ ಖಲಿಸ್ತಾನಿ ಉಗ್ರರು ತಲೆನೋವಾಗಿದ್ದಾರೆ. ಖಲಿಸ್ತಾನಿ ಉಗ್ರರು ಅಲ್ಲಿದ್ದುಕೊಂಡು ಭಾರತದಲ್ಲಿಯೂ ಸಹ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇಲ್ಲಿಯೂ ಕೆಲವಾರು ಮಂದಿಯ ಸಾವಿಗೆ ಕಾರಣರಾಗಿದ್ದಾರೆ.
ಇದನ್ನೂ ಓದಿ:ಕಪಿಲ್ ಶರ್ಮಾ ಆಸ್ತಿ ಇಷ್ಟೊಂದಾ; ವರ್ಷದ ಗಳಿಕೆ ಕೇಳಿದ್ರೆ ದಂಗಾಗ್ತೀರಾ..
ಭಾರತೀಯ ಬೇಹುಗಾರಿಕಾ ಸಂಸ್ಥೆಯ ಪಟ್ಟಿಯಲ್ಲಿ ಮೋಸ್ಟ್ ವಾಂಟೆಡ್ ಉಗ್ರನಾಗಿರುವ ಹರಿಜಿತ್ ಸಿಂಗ್ ಲಡ್ಡಿ, ನಿಷೇಧಿತ ಬಬ್ಬರ್ ಖಲಾಸಾ ಇಂಟರ್ನ್ಯಾಷನ್ ಹೆಸರಿನ ಸಂಘಟನೆಗೆ ಸೇರಿದವನಾಗಿದ್ದು ವಿಎಚ್ಪಿ ಮುಖಂಡ ವಿಕಾಸ್ ಪ್ರಭಾಕರ್ ಹತ್ಯೆಯ ಹಿಂದೆಯೂ ಈತನೇ ಇದ್ದಾನೆ ಎನ್ನಲಾಗಿದೆ. ಖಲಿಸ್ತಾನಿ ಉಗ್ರರು ಕೆನಡಾ ಅನ್ನು ತಮ್ಮ ನೆಲೆಯನ್ನಾಗಿ ಬಳಸಿಕೊಂಡು ಭಾರತೀಯರ ಮೇಲೆ ದಾಳಿ ಮಾಡುತ್ತಿದ್ದಾರೆ. ಈ ಬಗ್ಗೆ ಭಾರತ ಸರ್ಕಾರ ವರ್ಷಗಳಿಂದಲೂ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದೆ.
ಕಪಿಲ್ ಶರ್ಮಾ ನೀಡಿದ್ದಾರೆ ಎನ್ನಲಾದ ಯಾವುದೋ ಹೇಳಿಕೆಯನ್ನು ವಿರೋಧಿಸಿ ಈ ದಾಳಿ ನಡೆಸಲಾಗಿದೆಯಂತೆ. ಖಳಿಸ್ತಾನಿ ಉಗ್ರರು ಉದ್ಯಮಿಗಳಿಗೆ, ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವುದು, ಹಣ ಕೊಡಲು ನಿರಾಕರಿಸಿದರೆ ಹೀಗೆ ಗುಂಡು ಹಾರಿಸುವುದು ಮಾಡುತ್ತಲೇ ಬರುತ್ತಿದ್ದಾರೆ. ಪಂಜಾಬಿ ಗಾಯಕರಾದ ಹನಿಸಿಂಗ್, ಬಾದ್ಶಾ, ದಿಲ್ಜಿತ್ ದುಸ್ಸಾಂಜ್ ಇನ್ನೂ ಕೆಲವರಿಗೆ ಬೆದರಿಕೆಗಳನ್ನು ಈ ಖಲಿಸ್ತಾನಿ ಉಗ್ರರು ಹಾಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ