ಬಿಗ್ಬಾಸ್ (Bigg Boss) ಕನ್ನಡ ಸೀಸನ್ 10ರ ಮೂರನೇ ವಾರಾಂತ್ಯದ ಪಂಚಾಯಿತಿಗೆ ಎಂದಿನಂತೆ ಸಖತ್ ಸ್ಟೈಲ್ ಆಗಿ ಬಂದಿದ್ದ ಸುದೀಪ್, ಈ ಹಿಂದಿನ ಶನಿವಾರಗಳಂತೆ ಇರದೆ, ಆರಂಭದಿಂದಲೇ ಬಹಳ ಗಂಭೀರವಾಗಿ ಬಿಗ್ಬಾಸ್ ಸ್ಪರ್ಧಿಗಳನ್ನು ಎದುರುಗೊಂಡರು. ಈ ವಾರ ನಡೆದ ಟಾಸ್ಕ್, ಉತ್ತಮ ಯಾರು? ಕಳಪೆ ಯಾರು? ಯಾವುದರ ಬಗ್ಗೆಯೂ ಮಾತನಾಡದ ಸುದೀಪ್, ನೇರವಾಗಿ ಬಿಗ್ಬಾಸ್ ಮನೆ ಸದಸ್ಯರು ಮನೆಯಲ್ಲಿ ತೋರುತ್ತಿರುವ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು.
ವೀಕ್ಷಕರು ಮನೆಯ ಸದಸ್ಯರಿಗೆ ಕಳಿಸಿರುವ ಉಡುಗೊರೆಗಳನ್ನು ಮನೆಯ ಸದಸ್ಯರಿಗೆ ನೀಡಿದ ಸುದೀಪ್, ಆ ಉಡುಗೊರೆಗಳಲ್ಲಿಯೇ ಅವರ ಹಾಲಿ ವರ್ತನೆ ಹಾಗೂ ಹೇಗೆ ತಮ್ಮನ್ನು ಮುಂದಕ್ಕೆ ಬದಲಾಯಿಸಿಕೊಳ್ಳಬೇಕು ಎಂಬ ಸಂದೇಶವನ್ನು ತುಂಬಿದ್ದರು. ಎಲ್ಲ ಸ್ಪರ್ಧಿಗಳು ಖುಷಿಯಿಂದ ಉಡುಗೊರೆಯನ್ನು ತೆರೆದರಾದರೂ ಅದರ ಅರ್ಥ, ಅದರೊಟ್ಟಿಗಿದ್ದ ಪತ್ರ ನೋಡಿ ಚಿಂತನೆಗೆ ತೊಡಗಿಕೊಂಡರು.
ಕಾರ್ತಿಕ್ಗೆ ಕತ್ತಿ ಯ ಜೊತೆಗೆ ತರಕಾರಿ ಉಡುಗೊರೆಯಾಗಿ ಬಂದಿತ್ತು. ಯೋಧನಾದವನು ಕತ್ತಿಯನ್ನು ಯುದ್ಧ ಭೂಮಿಯನ್ನು ಸರಿಯಾದ ವಿರೋಧಿಯ ಎದುರು ಬಳಸಬೇಕು, ಅದನ್ನು ತಕಾರಿ ಹೆಚ್ಚಲು ಬಳಸಬಾರದು ಎಂದು ಪತ್ರದಲ್ಲಿ ಬರೆಯಲಾಗಿತ್ತು. ಇನ್ನು ಇಶಾನಿಗೆ ಉಪ್ಪಿನಕಾಯಿಯನ್ನು ಉಡುಗೊರೆಯಾಗಿ ಕಳಿಸಿ, ಊಟಕ್ಕೆ ಉಪ್ಪಿನಕಾಯಿ ಚೆನ್ನಾಗಿರುತ್ತದೆ, ಆದರೆ ಅದು ಇರಲೇ ಬೇಕೆಂದೇನೂ ಇಲ್ಲ. ಸುಮ್ಮನೆ ಉಪ್ಪಿನಕಾಯಿ ಆಗದೆ, ಮುಖ್ಯ ಊಟವೇ ನೀವಾಗಲು ಪ್ರಯತ್ನಿಸಿ ಎಂಬ ಸಂದೇಶವನ್ನು ಅವರಿಗೆ ಕಳಿಸಲಾಗಿತ್ತು.
ಇದನ್ನೂ ಓದಿ:ಮತ್ತೆ ಬಿಗ್ಬಾಸ್ ಮನೆಗೆ ಹೋಗ್ತಾರಾ ವರ್ತೂರು ಸಂತೋಷ್: ವಕೀಲರು ಹೇಳಿದ್ದೇನು?
ಇನ್ನು ವಿನಯ್ಗೆ, ಆನೆಯ ಸಣ್ಣ ವಿಗ್ರಹ ಕಳಿಸಿ, ನಾನು ಆನೆ, ನನ್ನ ಸಮಕ್ಕೆ ಯಾರಿಲ್ಲ ಎಂದುಕೊಂಡು ಸಿಕ್ಕ-ಸಿಕ್ಕ ಹಾದಿ ಹಿಡಿದು ದಾರಿತಪ್ಪುವುದು ಬೇಡ ಎಂಬ ಸಂದೇಶವನ್ನು ಅವರಿಗೆ ನೀಡಲಾಯ್ತು. ಇನ್ನು ಸಂಗೀತಾ ಶೇಂಗೇರಿಗೆ, ಮೊದಲ ವಾರ ಕರ್ನಾಟಕದ ಕ್ರಶ್ ಆಗಿದ್ದಿರಿ, ಆದರೆ ನಂತರದ ವಾರಗಳಲ್ಲಿ ನಮ್ಮ ಹೃದಯವನ್ನೇ ಕ್ರಶ್ ಮಾಡಿ ಮುರಿದುಬಿಟ್ಟಿರಿ ಎಂದು ಬರೆಯಲಾಗಿತ್ತು.
ತುಕಾಲಿ ಸಂತುಗೆ ಮೈಖ್ ಒಂದನ್ನು ನೀಡಿ, ಅಭಿಪ್ರಾಯಗಳನ್ನು ಕೆಲವರೆದುರು ಗುಸು-ಗುಸು, ಪಿಸು-ಪಿಸು ಮಾಡುವುದು ಬೇಡ. ಹೇಳುವುದಿದ್ದರೆ ಜೋರಾಗಿ, ಸ್ಪಷ್ಟವಾಗಿ ಧೈರ್ಯವಾಗಿ ಹೇಳಿ ಎಂಬ ಸಂದೇಶ ನೀಡಲಾಯ್ತು. ಸಿರಿ ಅವರಿಗೆ ಆಮೆಯ ಬೊಂಬೆ ಕಳಿಸಿ, ಜಿಂಕೆ, ಚಿರತೆಗಳೊಟ್ಟಿಗೆ ರೇಸ್ನಲ್ಲಿದ್ದೀರಿ,ಜೋರಾಗಿ ಓಡಿ, ಮೊಲ ಮಲುಗುತ್ತದೆ ನಾನೇ ಗೆಲ್ಲುತ್ತೇನೆ ಎಂಬ ಭ್ರಮೆ ಬೇಡ ಎಂಬ ಸಂದೇಶವಿತ್ತು. ಹೀಗೆ ಎಲ್ಲರಿಗೂ ಮನೆಯಲ್ಲಿ ಅವರು ತೋರಿಸುತ್ತಿರುವ ವ್ಯಕ್ತಿತ್ವದ ಆಧಾರದ ಅನುಸಾರ ಅವರಿಗೆ ಭಿನ್ನ-ಭಿನ್ನ ಉಡುಗೊರೆ ಹಾಗೂ ಸಂದೇಶಗಳು ಬಂದಿದ್ದವು. ನಮ್ರತಾಗೆ ಸ್ಪೂನ್ ಉಡುಗೊರೆಯಾಗಿ ಬಂದು, ಬೇರೆಯವರ ಚಮಚ ಆಗಬೇಡ ಎಂಬ ಸಂದೇಶ ಬಂದಿತ್ತು.
ಎಲ್ಲರಿಗೂ ಉಡುಗೊರೆ ಹಾಗೂ ಸಂದೇಶಗಳನ್ನು ತಲುಪಿಸಿದ ನಟ ಸುದೀಪ್ ತಮ್ಮ ವಾಕ್ಚಾತುರ್ಯದಿಂದ ಆ ಸಂದೇಶದ ಸ್ಪಷ್ಟ ಅರ್ಥವೇನು? ಇನ್ನು ಮುಂದೆ ಹೇಗಿರಬೇಕೆಂದು ನೋಡುಗರು ನಿರೀಕ್ಷೆ ಮಾಡುತ್ತಿದ್ದಾರೆ ಎಂಬುದನ್ನು ಸೂಚ್ಯವಾಗಿ ತಿಳಿಸಿ ಹೇಳಿದರು. ಬಿಗ್ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:21 pm, Sat, 28 October 23