ಕಿಚ್ಚ ಸುದೀಪ್ (Kichcha Sudeep) ಅವರು ಕಳೆದ ಎಂಟು ಸೀಸನ್ಗಳಿಂದ ಬಿಗ್ ಬಾಸ್ ಅನ್ನು ಯಶಸ್ವಿ ಆಗಿ ನಡೆಸಿಕೊಡುತ್ತಿದ್ದಾರೆ. ಹೊಸ ಸೀಸನ್ ಕೂಡ ಸುದೀಪ್ ನೇತೃತ್ವದಲ್ಲೇ ಉತ್ತಮವಾಗಿ ಸಾಗುತ್ತಿದೆ. ಸುದೀಪ್ ಅವರ ನಿರೂಪಣೆ, ಅವರು ಸ್ಪರ್ಧಿಗಳಿಗೆ ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ಳೋದು, ಅವರ ಉಡುಗೆ, ಸ್ಪರ್ಧಿಗಳ ಕಾಲೆಳೆಯೋದು ಎಲ್ಲರಿಗೂ ಇಷ್ಟವಾಗುತ್ತದೆ. ಸುದೀಪ್ ಅವರು ವೀಕೆಂಡ್ ಎಪಿಸೋಡ್ ತಪ್ಪಿಸೋದು ತುಂಬಾನೇ ಕಡಿಮೆ. ಈ ವೀಕೆಂಡ್ ಸುದೀಪ್ ಅವರು ‘ಬಿಗ್ ಬಾಸ್’ (Bigg Boss) ನಿರೂಪಣೆಗೆ ಗೈರಾಗಲಿದ್ದಾರೆ ಎಂದು ವರದಿ ಆಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಕೊವಿಡ್ ಕಾಟ ಕೊಟ್ಟಿತ್ತು. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ಗೆ ಅನಾರೋಗ್ಯ ಕಾಡಿತ್ತು. ಅವರು ಕೊವಿಡ್ಗೆ ತುತ್ತಾದ ಕಾರಣ ಕೆಲ ವಾರ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ಗೆ ಬಂದಿರಲಿಲ್ಲ. ಸೀಸನ್ 9ರ ನಾಲ್ಕನೇ ವಾರದ ಎಲಿಮಿನೇಷನ್ಗೆ ಸುದೀಪ್ ಇರಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸೋಶಿಯಲ್ ಮೀಡಿಯಾದಲ್ಲೂ ಈ ಕುರಿತು ಚರ್ಚೆ ಆಗುತ್ತಿದೆ.
ಸುದೀಪ್ ಹಾಗೂ ಪ್ರಿಯಾ ಅವರು ಅಕ್ಟೋಬರ್ 18ರಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇದಕ್ಕಾಗಿ ಈ ದಂಪತಿ ವಿದೇಶಕ್ಕೆ ಹಾರಿದ್ದಾರೆ. ಅಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ಶುಕ್ರವಾರ (ಸೆಪ್ಟೆಂಬರ್ 21) ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ಅದಕ್ಕೂ ಸುದೀಪ್ ಭಾಗವಹಿಸುವ ಸಾಧ್ಯತೆ ಇದೆ. ಈ ಎಲ್ಲಾ ಕಾರಣಕ್ಕೆ ವೀಕೆಂಡ್ ಎಪಿಸೋಡ್ನಲ್ಲಿ ಅವರು ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಈ ಬಗ್ಗೆ ವಾಹಿನಿಯವರಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ 15 ಸ್ಪರ್ಧಿಗಳಿದ್ದಾರೆ. ಈ ವಾರ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಅದು ಯಾರು ಎಂಬ ಕುತೂಹಲ ಮೂಡಿದೆ. ಕಳೆದ ಬಾರಿ ಸುದೀಪ್ ಬರದೇ ಇದ್ದಾಗ ಕಣ್ಮಣಿ (ಕ್ಯಾಮೆರಾ) ಬಳಿ ಸ್ಪರ್ಧಿಗಳ ಜತೆ ಮಾತನಾಡಿಸಿದ್ದರು. ಈ ಬಾರಿಯೂ ಅದೇ ತಂತ್ರ ಮುಂದುವರಿಯುವ ಸಾಧ್ಯತೆ ಇದೆ.
ಈ ವಾರ ನಾಮಿನೇಟ್ ಆದ ಸ್ಪರ್ಧಿಗಳು :
ಮಯೂರಿ, ಆರ್ಯವರ್ಧನ್ ಗುರೂಜಿ, ಪ್ರಶಾಂತ್ ಸಂಬರ್ಗಿ, ಕಾವ್ಯಶ್ರೀ ಗೌಡ, ನೇಹಾ ಗೌಡ, ಸಾನ್ಯಾ ಐಯ್ಯರ್, ರೂಪೇಶ್ ಶೆಟ್ಟಿ ಹಾಗೂ ದಿವ್ಯಾ ಉರುಡುಗ.
Published On - 8:02 pm, Wed, 19 October 22