
ಕಾಮಿಡಿ ಕಲಾವಿದ ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋ ಮೂಲಕ ಮನೆಮಾತಾಗಿದ್ದಾರೆ. ಅವರು ಎಲ್ಲರನ್ನೂ ನಗಿಸಿ ಪಳಾರ್ ಗಿಲ್ಲಿ ಎಂದು ಟೈಟಲ್ ಪಡೆದಿದ್ದಾರೆ. ಸಕಲ ಕಲಾ ವಲ್ಲಭ ಎಲ್ಲ ಆಟ ಬಲ್ಲವ ಎಂದು ಸಹ ಅವರನ್ನು ಫ್ಯಾನ್ಸ್ ಕರೆಯುತ್ತಿದ್ದಾರೆ. ಬಿಗ್ ಬಾಸ್ ಮನೆಯ ಒಳಗೆ ಗಿಲ್ಲಿ ಹೇಳಿದ ಒಂದೊಂದು ಡೈಲಾಗ್ಗಳು ಕೂಡ ಟ್ರೆಂಡ್ ಆಗಿವೆ. ಅಲ್ಲದೇ, ಗಿಲ್ಲಿ ನಟ (Gilli Nata) ಅವರ ಭಾವಚಿತ್ರವನ್ನು ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಗಿಲ್ಲಿ ನಟ ಸೇರಿದಂತೆ ಎಲ್ಲ ಆರು ಫಿನಾಲೆ (BBK 12 Finale) ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದರೆ ಕ್ರೇಜ್ ಹೇಗಿರುತ್ತದೆ ಎಂಬುದನ್ನು ಕಿಚ್ಚ ಸುದೀಪ್ ಅವರು ಪ್ರೀ-ಫಿನಾಲೆ ಸಂಚಿಕೆಯಲ್ಲಿ ಹೇಳಿದರು.
‘ನೀವು ಹೊರಗಡೆ ಬಂದಾಗ ಎಲ್ಲಿಲ್ಲದ ಪ್ರೀತಿ, ಎಲ್ಲಿಲ್ಲದ ಪ್ರಶಂಸೆ, ಆ ಜನಬೀಡು ನಿಮಗೋಸ್ಕರ ಬಂದಾಗ ನಿಮ್ಮ ತಲೆಯಲ್ಲಿ ಏನು ಓಡಬೇಕು? ನಿಮ್ಮ ಜೀವನದಲ್ಲಿ ಏನು ಬದಲಾವಣೆ ಆಯಿತು ಅಂತ ನಿಮಗೆ ಅನಿಸುತ್ತದೆ’ ಎಂದು ಕಿಚ್ಚ ಸುದೀಪ್ ಅವರು ಹೇಳಿದರು. ‘ಬಿಗ್ ಬಾಸ್ ಮನೆಗೆ ಬಂದ ಅತಿಥಿಗಳು ನನಗೆ ಒಂದು ಮಾತು ಹೇಳಿದರು. ನೀವು ಸಖತ್ತಾಗಿ ಆಡುತ್ತಿದ್ದೀರಿ, ಹೊರಗೆ ಬಂದು ನೋಡಿ ಅಂದರು. ಆ ಕ್ಷಣದಲ್ಲಿ ನನಗೆ ರಿಯಲ್ ಎನಿಸಿತು’ ಎಂದು ಗಿಲ್ಲಿ ನಟ ಉತ್ತರಿಸಿದರು.
‘ತಕ್ಷಣಕ್ಕೆ ಅಷ್ಟೊಂದು ಪ್ರೀತಿ ಬಂದರೆ ನಿಜವೋ ಸುಳ್ಳೋ ಅಂತ ನಂಬೋಕೆ ಆಗಲ್ಲ. ಈ ಬದಲಾವಣೆ ಆಗಿದ್ದು ಬಿಗ್ ಬಾಸ್ ಶೋನಿಂದ. ಸಿನಿಮಾದಲ್ಲಿನ ಡೈಲಾಗ್ಗಳನ್ನು ಹೇಳಿ ಅಂತ ಜನರು ವೇದಿಕೆಯಲ್ಲಿ ಕೇಳುತ್ತಾರೆ. ಆದರೆ ಇಲ್ಲಿಗೆ ಬಂದ ಅಭಿಮಾನಿಗಳು ಬಿಗ್ ಬಾಸ್ ಮನೆಯಲ್ಲಿ ನನ್ನ ಡೈಲಾಗ್ ಹೇಳಿ ಅಂತ ಡಿಮ್ಯಾಂಡ್ ಮಾಡಿದರು. ಅದು ನನಗೆ ಖುಷಿ ಆಯಿತು’ ಎಂದು ಗಿಲ್ಲಿ ನಟ ಅವರು ಹೇಳಿದರು.
‘ನೀವು ಜನರನ್ನು ಸಂಪಾದಿಸಿರುವುದು, ಜನರು ನಿಮ್ಮನ್ನು ಇಷ್ಟಪಡುತ್ತಿರುವುದು ಬಿಗ್ ಬಾಸ್ ವೇದಿಕೆಯ ಕಾರಣಕ್ಕೆ. ವೇದಿಕೆಯೇ ಇಲ್ಲ ಎಂದರೆ ಏನೂ ಇಲ್ಲ. ಬಿಗ್ ಬಾಸ್ ಇಲ್ಲದೇ ನಿಮ್ಮ ಜೀವನವನ್ನು ಊಹಿಸಿಕೊಂಡರೆ ಒಂದು ಖಾಲಿತನ ಕಾಣಿಸುತ್ತದೆ. ಹೊರಗಡೆ ಬಂದಾಗ ಪ್ರಪಂಚ ಏನೆಲ್ಲ ಆಗಿದೆ ಅನ್ನೋದನ್ನು ನೋಡಿ. ಆದರೆ ಇಂದು ನೀವು ಮಾತನಾಡಿದ್ದನ್ನು ಮರೆಯಬೇಡಿ’ ಎಂದು ಕಿಚ್ಚ ಸುದೀಪ್ ಅವರು ಹೇಳಿದರು.
ಇದನ್ನೂ ಓದಿ: Bigg Boss Kannada Winner: ಗಿಲ್ಲಿ ನಟ ಗೆದ್ದಾಯಿತು; ತೀರ್ಪು ನೀಡಿದ ‘ಬಿಗ್ ಬಾಸ್ ಕನ್ನಡ 12’ ವೀಕ್ಷಕರು
ಕಾವ್ಯಾ ಶೈವ, ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಮ್ಯೂಟೆಂಟ್ ರಘು, ಧನುಷ್ ಗೌಡ ಹಾಗೂ ಅಶ್ವಿನಿ ಗೌಡ ಅವರು ಬಿಗ್ ಬಾಸ್ ಶೋನ ಫಿನಾಲೆ ತಲುಪಿದ್ದಾರೆ. ಜನವರಿ 18ರಂದು ಫಿನಾಲೆ ಸಂಚಿಕೆ ಪ್ರಸಾರ ಆಗಲಿದೆ. ಗಿಲ್ಲಿ ನಟ ಅವರೇ ಬಿಗ್ ಬಾಸ್ ವಿನ್ ಆಗೋದು ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.