‘ನೀನು ಯಾರಿಗೂ ನಿಯತ್ತಾಗಿಲ್ಲ’: ಎಲ್ಲರ ಎದುರು ಹಂಸಾಗೆ ಚುಚ್ಚು ಮಾತುಗಳಿಂದ ನಿಂದಿಸಿದ ಜಗದೀಶ್​

ಕ್ಯಾಪ್ಟನ್​ ಹಂಸಾ ಮೇಲೆ ಹಲವು ಜವಾಬ್ದಾರಿಗಳಿವೆ. ಆದರೆ ಅವರ ಕೆಲಸವನ್ನು ಕೆಡಿಸಲು ಜಗದೀಶ್​ ಪ್ರಯತ್ನಿಸುತ್ತಿದ್ದಾರೆ. ಬೇಕೆಂತಲೇ ಕೆಣಕುತ್ತಿದ್ದಾರೆ. ‘ಮಾತ್ರೆ ಬೇಕು, ಔಷದಿ ಬೇಕು, ಬೇರೆ ನೀರು ಬೇಕು. ಬಿಗ್ ಬಾಸ್​ಗೆ ಹೇಳಿ ತರಿಸಿಕೊಡಿ’ ಎಂದು ಇಲ್ಲಸಲ್ಲದ ಬೇಡಿಕೆಗಳನ್ನು ಇಡುತ್ತಿದ್ದಾರೆ. ಇದರಿಂದಾಗಿ ಹಂಸಾ ಅವರಿಗೆ ಬಿಗ್​ ಬಾಸ್​ನಲ್ಲಿ ಆಟವಾಡಲು ಅಡ್ಡಿ ಆಗುತ್ತಿದೆ.

‘ನೀನು ಯಾರಿಗೂ ನಿಯತ್ತಾಗಿಲ್ಲ’: ಎಲ್ಲರ ಎದುರು ಹಂಸಾಗೆ ಚುಚ್ಚು ಮಾತುಗಳಿಂದ ನಿಂದಿಸಿದ ಜಗದೀಶ್​
ಜಗದೀಶ್​, ಹಂಸಾ

Updated on: Oct 08, 2024 | 3:42 PM

ಹಂಸಾ ಮತ್ತು ಜಗದೀಶ್​ ನಡುವೆ ದ್ವೇಷ ಹೆಚ್ಚಾಗುತ್ತಿದೆ. ಹಂಸಾ ಕ್ಯಾಪ್ಟನ್​ ಆಗಿದ್ದನ್ನು ಜಗದೀಶ್​ ಸಹಿಸುತ್ತಿಲ್ಲ. ಹಾಗಾಗಿ ಪ್ರತಿ ಹಂತದಲ್ಲೂ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಚುಚ್ಚು ಮಾತುಗಳಿಂದ ಹಂಸಾ ಅವರನ್ನು ಜಗದೀಶ್​ ನಿಂದಿಸುತ್ತಿದ್ದಾರೆ. ತಂತ್ರಗಾರಿಕೆ ಮಾಡಿ ಕ್ಯಾಪ್ಟನ್​ ಆಗಿದ್ದರಿಂದ ಹಂಸಾ ಕೂಡ ಯಾವುದೇ ತಿರುಗೇಟು ನೀಡಲಾಗದೇ ಸುಮ್ಮನಾಗಿದ್ದಾರೆ. ಬೇರೆ ಎಲ್ಲರಿಗಿಂತಲೂ ಹೆಚ್ಚಾಗಿ ಜಗದೀಶ್​ ಅವರು ಹಂಸಾ ಮೇಲೆ ಮಾತಿನ ದಾಳಿ ಮಾಡುತ್ತಿದ್ದಾರೆ. ಇತ್ತೀಚಿನ ಎಪಿಸೋಡ್​ನಲ್ಲಿ ಕಟು ಮಾತುಗಳಿಂದ ಅವರು ನಿಂದಿಸಿದ್ದಾರೆ.

‘ತಂತ್ರಗಾರಿಕೆ ಮಾಡಿಕೊಂಡು ಕ್ಯಾಪ್ಟನ್​ ಆಗಿದ್ದು ನನಗೂ ಶೋಭೆ ತಂದಿಲ್ಲ. ಆದರೆ ನಾನು ಅದನ್ನು ಈಗ ಬದಲಾಯಿಸುವ ಸಾಧ್ಯವಿಲ್ಲ’ ಎಂದು ಹೇಳುತ್ತಾ ಹಂಸಾ ಅವರು ಅಳಲು ಆರಂಭಿಸಿದರು. ಆಗ ಜಗದೀಶ್​ ಮಧ್ಯ ಬಂದು ಮಾತಿನ ದಾಳಿ ಮಾಡಿದರು. ‘ಡ್ರಾಮಾ ಮಾಡುವುದು ನಿಮ್ಮ ಗುಣ. ಕಣ್ಣೀರು ಯಾಕೆ ಹಾಕುತ್ತೀರಿ? ನೇರವಾಗಿ ನಡೆದುಕೊಳ್ಳಿ. ಯಾರಿಗೂ ನೀವು ನಿಯತ್ತಾಗಿಲ್ಲ. ನಿಮಗೆ ಸಹಾಯ ಮಾಡಿದವರಿಗೂ ನೀವು ನಿಯತ್ತಾಗಿಲ್ಲ. ನಮ್ಮ ಜೊತೆ ಅದನ್ನು ನೀವು ಸಾಬೀತು ಮಾಡಿದ್ದೀರಿ’ ಎಂದು ಜಗದೀಶ್​ ಹೀಯಾಳಿಸಿದರು.

‘ನಿಮ್ಮ ಸುಳ್ಳಿನ ಕಣ್ಣೀರು ಯಾರಿಗೆ ಬೇಕಾಗಿದೆ? ಬೆನ್ನಿಗೆ ಚೂರಿ ಹಾಕುವುದಕ್ಕೆ ಇನ್ನೊಂದು ಹೆಸರು ನೀವು. ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಕ್ಯಾಪ್ಟನ್​ ಆದವಳು. ನಿಮ್ಮನೇ ನೀವು ನಂಬುವುದಿಲ್ಲ. ನಿಮ್ಮ ಯೋಗ್ಯತೆಗೆ ಯಾರೂ ಬೆಂಬಲ ನೀಡುವುದಿಲ್ಲ. ನಾನು ಬೆಂಬಲಿಸಿದೆ. ಆ ಯೋಗ್ಯತೆಯನ್ನು ನೀವು ಉಳಿಸಿಕೊಳ್ಳಬೇಕಿತ್ತು’ ಎಂದಿದ್ದಾರೆ ಜಗದೀಶ್​.

ಇದನ್ನೂ ಓದಿ: ‘ನೀನು ಯಾವನೋ’ ಎಂದು ಕೂಗಿದ ಹಂಸಾ; ಇರುವ ಗೌರವವನ್ನೂ ಕಳೆದುಕೊಂಡ ಜಗದೀಶ್

‘ನೀವು ಭವ್ಯ ಬಳಿ ಸಲಹೆ ಪಡೆಯುತ್ತಿದ್ದೀರಿ. ಸಾಮರ್ಥ್ಯವೇ ಇಲ್ಲದೇ ನೀವು ಕ್ಯಾಪ್ಟನ್​ ಆಗಿದ್ದೀರಿ. ಬೇರೆಯವರ ಮಾತು ಕೇಳಿಬೇಡಿ. ನಿಮ್ಮ ಬುದ್ಧಿ ಎಷ್ಟಿದೆಯೋ ಅಷ್ಟು ಮಾತನಾಡಿ. ಬೇರೆಯವರ ವಿಚಾರ ನಮಗೆ ಬೇಕಾಗಿಲ್ಲ’ ಎಂದು ಜಗದೀಶ್​ ಕೂಗಾಡಿದ್ದಾರೆ. ತಮ್ಮನ್ನು ಸ್ವರ್ಗಕ್ಕೆ ಕರೆದುಕೊಂಡಿಲ್ಲ ಎಂದು ಗೋಲ್ಡ್​ ಸುರೇಶ್ ಕೂಡ ಹಂಸಾ ವಿರುದ್ಧ ತಿರುಗಿಬಿದ್ದಿದ್ದಾರೆ. ‘ಕ್ಯಾಪ್ಟನ್ ಆಗಲು ಅರ್ಹತೆ ಇಲ್ಲ. ಅವರು ಗೋಮುಖ ವ್ಯಾಘ್ರ’ ಎಂದು ಸುರೇಶ್​ ಹೇಳಿದ್ದಾರೆ. ಜಗದೀಶ್​ ಅವರನ್ನು ಹಂಸಾ ವಿರುದ್ಧ ಎತ್ತಿಕಟ್ಟುವ ಕೆಲಸವನ್ನೂ ಸುರೇಶ್​ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us