
ಬಿಗ್ ಬಾಸ್ ಮನೆಯಲ್ಲಿ ಈ ವಾರದ ಕ್ಯಾಪ್ಟನ್ ಆಗಿರುವ ಮಾಳು ನಿಪನಾಳ (Malu Nipanal) ಅವರಿಗೆ ಒಂದು ವಿಶೇಷ ಅಧಿಕಾರ ನೀಡಲಾಯಿತು. ಈ ವಾರ ಯಾರನ್ನು ನಾಮಿನೇಟ್ ಮಾಡಬೇಕು ಎಂಬ ಪೂರ್ತಿ ಅಧಿಕಾರ ಮಾಳು ಅವರಿಗೆ ಇತ್ತು. ಅಶ್ವಿನಿ ಗೌಡ, ಜಾಹ್ನವಿ, ಕಾಕ್ರೋಚ್ ಸುಧಿ, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ, ಧ್ರುವಂತ್ ಅವರನ್ನು ಮಾಳು ನಿಪನಾಳ ಅವರು ನಾಮಿನೇಟ್ ಮಾಡಿದರು. ಬಿಗ್ ಬಾಸ್ ಮನೆಯ ಮೂಲ ನಿಯಮ ಉಲ್ಲಂಘನೆ ಮಾಡಿದ್ದರಿಂದ ರಿಷಾ ಅವರನ್ನು ಕಿಚ್ಚ ಸುದೀಪ್ ಅವರು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಈ ವಾರ ಒಟ್ಟು 7 ಜನರ ಮೇಲೆ ನಾಮಿನೇಷನ್ (Bigg Boss Nomination) ಕತ್ತಿ ತೂಗುತ್ತಿದೆ.
ಒಬ್ಬೊಬ್ಬರಿಗೆ ಒಂದೊಂದು ಕಾರಣ ನೀಡಿ ಮಾಳು ನಿಪನಾಳ ಅವರು 6 ಜನರನ್ನು ನಾಮಿನೇಟ್ ಮಾಡಬೇಕಿತ್ತು. ಧ್ರುವಂತ್ ಅವರನ್ನು ಸಗಣಿಗೆ ಹೋಲಿಸಿ ಅವರ ಮೇಲೆ ಸಗಣಿ ನೀರು ಸುರಿಯಲಾಯಿತು. ಬಿಗ್ ಬಾಸ್ ಮನೆಯ ಹೆಣ್ಮಕ್ಕಳ ಬಗ್ಗೆ ಧ್ರುವಂತ್ ಮಾತನಾಡಿದ್ದ ಸರಿಯಲ್ಲ ಎಂಬ ಕಾರಣವನ್ನು ನೀಡಿ ಮಾಳು ನಾಮಿನೇಟ್ ಮಾಡಿದರು.
ಕಾಕ್ರೋಜ್ ಸುಧಿ ಅವರನ್ನು ಕೆಸರಿಗೆ ಹೋಲಿಸಿ ಅವರ ಮೇಲೆ ಕೆಸರು ಸುರಿಯಲಾಯಿತು. ‘ಮಾಡಿದ ತಪ್ಪನ್ನು ಒಪ್ಪಿಕೊಳ್ಳಲ್ಲ. 4 ಡೈಲಾಗ್ ಇಟ್ಟುಕೊಂಡು ಜನರ ಮನವೊಲಿಸಲು ಪ್ರಯತ್ನಿಸುತ್ತಾರೆ. ವಿಷಕಾರಿ ಯಾರು ಎಂಬುದನ್ನು ವಿವರಿಸುವಾಗ ಸರಿಯಾಗಿ ನೀವು ಕಾರಣ ನೀಡಿಲ್ಲ. ಬೇರೆಯವರ ಮೇಲೆ ಕೆಸರು ಎರಚುತ್ತಾರೆ’ ಎಂದು ಕಾರಣ ನೀಡಿ ಮಾಳು ನಿಪನಾಳ ಅವರು ಸುಧಿಯನ್ನು ನಾಮಿನೇಟ್ ಮಾಡಿದರು.
ರಕ್ಷಿತಾ ಶೆಟ್ಟಿ ಮೇಲೆ ತಣ್ಣೀರು ಸುರಿಯಲಾಯಿತು. ‘ಯಾವಾಗಲೂ ಮಲಗಿಕೊಂಡು ಇರುತ್ತಾಳೆ. ನಿದ್ದೆ ಹೋಗಲಿ ಎಂಬ ಕಾರಣಕ್ಕೆ ಅವಳಿಗೆ ತಣ್ಣೀರು ಹಾಕುತ್ತೇನೆ’ ಎಂದು ಮಾಳು ನಿಪನಾಳ ಹೇಳಿದರು. ಅಶ್ವಿನಿ ಗೌಡ ಮೇಲೆ ಕಪ್ಪು ನೀರು ಎರೆಚಲಾಯಿತು. ‘ಕಲ್ಮಶ ಎಂಬುದು ಅವರಲ್ಲಿ ಬಹಳ ಇದೆ. ಒಬ್ಬರನ್ನೂ ಸರಿಯಾದ ರೀತಿ ನೋಡಲ್ಲ. ಒಂದಿನ ಚೆನ್ನಾಗಿ ಇದ್ದರೆ ಮರುದಿನ ಅವರ ಜೊತೆ ಚೆನ್ನಾಗಿ ಇರಲ್ಲ’ ಎಂಬ ಕಾರಣ ನೀಡಿ ಅಶ್ವಿನಿ ಗೌಡ ಅವರನ್ನು ಕೂಡ ನಾಮಿನೇಟ್ ಮಾಡಿದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಸಂಪೂರ್ಣ ಬದಲಾಗಿದೆ ಮಾಳು ನಿಪನಾಳ ಆಟ
ರಾಶಿಕಾ ಶೆಟ್ಟಿ ಅವರನ್ನು ಕಸಕ್ಕೆ ಹೋಲಿಸಲಾಯಿತು. ‘ಯಾರ ಜೊತೆಗೂ ಅವರು ಬೆರೆಯಲ್ಲ. ನನ್ನ ಜೊತೆ ಮಾತನಾಡಿಲ್ಲ. 4 ಜನರ ಜೊತೆ ಕುಳಿತು 2 ಗಂಟೆ ಮಾತನಾಡಿದ್ದನ್ನು ನಾನು ನೋಡಿಲ್ಲ. ಬೇಕಾದವರ ಜೊತೆ ಮಾತ್ರ ಮಾತನಾಡುತ್ತಾರೆ’ ಎಂಬ ಕಾರಣವನ್ನು ನೀಡಿ ರಾಶಿಕಾ ಶೆಟ್ಟಿಯನ್ನು ಮಾಳು ನಿಪನಾಳ ನಾಮಿನೇಟ್ ಮಾಡಿದರು. ಮಾಳು ವಿರುದ್ಧ ರಾಶಿಕಾ ಕೂಗಾಡಿದರು.
ಜಾಹ್ನವಿಗೆ ಚಿಣಿಮಿಣಿ ಎನ್ನಲಾಯಿತು. ‘ತಮ್ಮ ಬಗ್ಗೆಯೇ ಎಲ್ಲರೂ ಗಮನ ನೀಡಬೇಕು ಎಂಬ ಉದ್ದೇಶದಿಂದ ಜಾಹ್ನವಿ ಮಾತನಾಡುತ್ತಾರೆ. ಹೈಲೈಟ್ ಆಗಲಿ ಅಂತ ಅವರು ಈ ರೀತಿ ಮಾಡುತ್ತಾರೆ’ ಎಂದು ಮಾಳು ಕಾರಣ ನೀಡಿದರು. ಆ ಆರು ಮಂದಿಯ ಜೊತೆಗೆ ರಿಷಾ ಕೂಡ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.