ನಟಿ ದಿವ್ಯಾ ಸುರೇಶ್ ಮತ್ತು ಬಿಗ್ ಬಾಸ್ ಸೀಸನ್ 8ರ ವಿನ್ನರ್ ಮಂಜು ಪಾವಗಡ ನಡುವೆ ತುಂಬ ಆತ್ಮೀಯತೆ ಇದೆ. ಅದು ಬಿಗ್ ಬಾಸ್ ಆಟಕ್ಕೆ ಮಾತ್ರ ಸೀಮಿತ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ಆ ಮಾತು ನಿಜವಾಗಿಲ್ಲ. ಬಿಗ್ ಬಾಸ್ ಮುಗಿದ ಮೇಲೆ ಕೂಡ ಈ ಜೋಡಿ ಆತ್ಮೀಯವಾಗಿಯೇ ನಡೆದುಕೊಳ್ಳುತ್ತಿದೆ. ದಿವ್ಯಾ ಸುರೇಶ್ ಅವರ ಕುಟುಂಬದ ಜೊತೆ ಮಂಜು ಪಾವಗಡ ಹೆಚ್ಚು ಬೆರೆಯುತ್ತಿದ್ದಾರೆ. ಎಲ್ಲ ವಿಶೇಷ ಸಂದರ್ಭಗಳಲ್ಲೂ ಅವರಿಬ್ಬರು ಒಟ್ಟಿಗೆ ಭಾಗಿ ಆಗುತ್ತಿದ್ದಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ಈ ಬಾರಿಯ ಗಣಪತಿ ಹಬ್ಬ.
ಹೌದು, ದಿವ್ಯಾ ಸುರೇಶ್ ಮನೆಯಲ್ಲೇ ಮಂಜು ಪಾವಗಡ ಅವರು ಈ ಬಾರಿ ಗಣೇಶ ಚತುರ್ಥಿ ಆಚರಿಸಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಗಣೇಶನನ್ನು ಕೂರಿಸಿ, ಬಗೆಬಗೆಯ ತಿನಿಸುಗಳನ್ನು ಮಾಡಿ ನೈವೇದ್ಯ ಅರ್ಪಿಸಲಾಗಿದೆ. ಪೂಜೆ ಬಳಿಕ ಇಬ್ಬರೂ ಖುಷಿಖುಷಿಯಾಗಿ ಫೋಟೋಗೆ ಪೋಸ್ ನೀಡಿದ್ದಾರೆ.
ದಿವ್ಯಾ ಸುರೇಶ್ ಅವರ ತಾಯಿ ಹಾಗೂ ಸಹೋದರ ಕೂಡ ಹಬ್ಬದ ಸಂಭ್ರಮದಲ್ಲಿ ಮಂಜುಗೆ ಸಾಥ್ ನೀಡಿದ್ದಾರೆ. ಅಷ್ಟೇ ಅಲ್ಲ, ಬಿಗ್ ಬಾಸ್ ಸ್ನೇಹಿತರಾದ ಶುಭಾ ಪೂಂಜಾ, ರಘು ಗೌಡ ಸಹ ಅವರವರ ಕುಟುಂಬದ ಸಮೇತ ದಿವ್ಯಾ ಸುರೇಶ್ರ ಮನೆಗೆ ಬಂದು ಹಬ್ಬದಲ್ಲಿ ಭಾಗಿ ಆಗಿದ್ದಾರೆ. ಮಂಜು ಮತ್ತು ದಿವ್ಯಾ ಸುರೇಶ್ ಈ ರೀತಿ ಒಟ್ಟೊಟ್ಟಿಗೆ ಇರುವುದು ಕಂಡು ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಕಮೆಂಟ್ಗಳ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದಷ್ಟು ಬೇಗ ನೀವಿಬ್ಬರು ಮದುವೆ ಆಗಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿ ಬಳಗದಿಂದ ಪದೇಪದೇ ಇಂಥ ಮಾತು ಕೇಳಿಬರುತ್ತಲೇ ಇದೆ.
ಇತ್ತೀಚೆಗೆ ಮಂಜು ಮತ್ತು ದಿವ್ಯಾ ಸುರೇಶ್ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿರುವ ಒಂದು ಫೋಟೋ ವೈರಲ್ ಆಗಿತ್ತು. ಕಲರ್ಸ್ ಕನ್ನಡ ವಾಹಿನಿ ಆಯೋಜಿಸಿದ್ದ ‘ಬಿಗ್ ಗಣೇಶೋತ್ಸವ’ ಕಾರ್ಯಕ್ರಮದ ವೇಳೆ ಕ್ಲಿಕ್ಕಿಸಿದ ಫೋಟೋ ಅದಾಗಿತ್ತು. ಮಂಜು, ತಾಯಿ ಮತ್ತು ಸಹೋದರನ ಜೊತೆ ತಾವಿರುವ ಫೋಟೋ ಹಂಚಿಕೊಂಡಿದ್ದ ದಿವ್ಯಾ ಅವರು, ‘ಈ ಮೂವರು ನನ್ನ ಬದುಕಿನ ನಿಜವಾದ ಶಿಕ್ಷಕರು. ಹಲವು ರೀತಿಯಲ್ಲಿ ನೀವು ನನಗೆ ಸ್ಫೂರ್ತಿಯಾಗಿದ್ದೀರಿ. ನೀವು ನನ್ನ ಹೃದಯಕ್ಕೆ ತುಂಬ ಹತ್ತಿರವಾದವರು’ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ:
ಮದುವೆ ಬಗ್ಗೆ ಇರುವ ಕನಸಿನ ಬಗ್ಗೆ ಹೇಳಿಕೊಂಡ ಮಂಜು ಪಾವಗಡ
‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್