ಆರಂಭದಲ್ಲಿ ಗೌತಮಿ ಜಾದವ್ ಮತ್ತು ಮೋಕ್ಷಿತಾ ಪೈ ಅವರು ತುಂಬಾ ಕ್ಲೋಸ್ ಆಗಿದ್ದರು. ಆದರೆ ನಂತರದ ದಿನಗಳಲ್ಲಿ ಅವರಿಬ್ಬರ ನಡುವೆ ವೈಮನಸ್ಸು ಮೂಡಿತು. ಜಗಳ ಆದ ಬಳಿಕ ಮೋಕ್ಷಿತಾ ಅವರು ಹಠ ಸಾಧಿಸುತ್ತಿದ್ದಾರೆ. ಅದಕ್ಕಾಗಿ ಅವರು ತಮಗೆ ಸಿಕ್ಕಿರುವ ಕೆಲವು ದೊಡ್ಡ ಅವಕಾಶಗಳನ್ನು ಕೂಡ ಕೈ ಚೆಲ್ಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವ ಅವಕಾಶವನ್ನು ಕೂಡ ಮೋಕ್ಷಿತಾ ಅವರು ಕಳೆದುಕೊಂಡಿದ್ದಾರೆ. ಗೌತಮಿಯ ಸಹಾಯ ಪಡೆಯುವುದಕ್ಕಿಂತ ತಾವು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುವುದೇ ವಾಸಿ ಎಂದು ಮೋಕ್ಷಿತಾ ಅವರು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ವಾರ ಎರಡು ಟೀಮ್ಗಳಲ್ಲಿ ಪೈಪೋಟಿ ಏರ್ಪಟ್ಟಿತ್ತು. ಧನರಾಜ್ ನಾಯಕತ್ವದ ಟೀಮ್ ಹೆಚ್ಚು ಅಂಕಗಳನ್ನು ಗಳಿಸಿತು. ಹಾಗಾಗಿ ಅವರ ತಂಡದ ಹನುಮಂತ, ಮೋಕ್ಷಿತಾ, ರಜತ್, ಚೈತ್ರಾ ಕುಂದಾಪುರ ಅವರಿಗೆ ಕ್ಯಾಪ್ಟೆನ್ಸಿ ಟಾಸ್ಕ್ ಆಡುವ ಅವಕಾಶ ಸಿಕ್ಕಿತು. ಆದರೆ ಅದರಲ್ಲಿ ಒಂದು ಟ್ವಿಸ್ಟ್ ಕೂಡ ಇತ್ತು. ಆ ಆಟಕ್ಕಾಗಿ ಎದುರಾಳಿ ತಂಡದ ಒಂದೊಂದು ಸ್ಪರ್ಧಿಯ ಸಹಾಯ ಪಡೆಯಬೇಕು ಎಂದು ಬಿಗ್ ಬಾಸ್ ಆದೇಶಿಸಿದರು. ಆದರೆ ಗೌತಮಿಯಿಂದ ಸಹಾಯ ಪಡೆಯಲು ಮೋಕ್ಷಿತಾಗೆ ಕಿಂಚಿತ್ತೂ ಇಷ್ಟ ಇರಲಿಲ್ಲ.
ಗೌತಮಿಯ ಸಹಾಯ ಪಡೆಯಲು ಮೋಕ್ಷಿತಾ ಅವರು ಒಪ್ಪಲಿಲ್ಲ. ಅವರ ಜೊತೆ ಆಟ ಆಡುವ ಬೇರೆ ಯಾವುದೇ ಸದಸ್ಯರು ಕೂಡ ಇರಲಿಲ್ಲ. ಹಾಗಾಗಿ ಈ ಆಟವನ್ನು ಬಿಟ್ಟುಕೊಡಲು ಮೋಕ್ಷಿತಾ ಮುಂದಾದರು. ಅವರ ಈ ನಿರ್ಧಾರದಿಂದ ಬಿಗ್ ಬಾಸ್ ಕೋಪಗೊಂಡರು. ಯಾಕೆಂದರೆ, ಪ್ರೇಕ್ಷಕರ ವೋಟ್ಗೆ ಮೋಕ್ಷಿತಾ ಬೆಲೆ ನೀಡುತ್ತಿಲ್ಲ. ಹಾಗಾಗಿ ಈ ನಿರ್ಧಾರಕ್ಕೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶ ಕೂಡ ಬಂತು. ಹಾಗಿದ್ದರೂ ಕೂಡ ಮೋಕ್ಷಿತಾ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಲಿಲ್ಲ.
ಇದನ್ನೂ ಓದಿ: ‘ನನ್ನ ವರ್ತನೆಗೆ ಕ್ಷಮೆ ಕೇಳುತ್ತೇನೆ’; ಅಚ್ಚರಿ ಮೂಡಿಸಿದ ಮೋಕ್ಷಿತಾ ನಡೆ
ಮೋಕ್ಷಿತಾ ಅವರು ಕ್ಯಾಪ್ಟೆನ್ಸಿ ಆಟದ ಅವಕಾಶವನ್ನು ಕೈಚೆಲ್ಲಿದ ಬಳಿಕ ಬಿಗ್ ಬಾಸ್ ಒಂದು ಟ್ವಿಸ್ಟ್ ನೀಡಿದರು. ಎದುರಾಳಿ ತಂಡದ ಒಬ್ಬರಿಗೆ ಕ್ಯಾಪ್ಟೆನ್ಸಿ ಟಾಸ್ಕ್ ಆಡುವ ಅವಕಾಶ ನೀಡಲಾಗುತ್ತದೆ ಎಂದು ಘೋಷಿಸಲಾಯಿತು. ಆಗ ಆ ಅವಕಾಶವು ಗೌತಮಿ ಜಾದವ್ ಅವರಿಗೆ ಸಿಕ್ಕಿತು. ಅಂದರೆ, ಮೋಕ್ಷಿತಾ ಬಿಟ್ಟುಕೊಟ್ಟ ಚಾನ್ಸ್ ತಾನಾಗಿಯೇ ಗೌತಮಿಗೆ ಒಲಿಯಿತು. ಈ ಎಲ್ಲ ಘಟನೆಗಳ ಬಗ್ಗೆ ಕಿಚ್ಚ ಸುದೀಪ್ ಅವರು ವೀಕೆಂಡ್ ಸಂಚಿಕೆಯಲ್ಲಿ ಏನು ಮಾತನಾಡುತ್ತಾರೆ ಎಂಬುದನ್ನು ಕಾದು ನೋಡಬೇಕು. ಮೋಕ್ಷಿತಾ ಈ ವಾರ ನಾಮಿನೇಟ್ ಆಗಿದ್ದಾರೆ. ಹಾಗಾಗಿ ಅವರು ಎಲಿಮಿನೇಟ್ ಆದರೂ ಅಚ್ಚರಿ ಏನಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.