ಮಂಜು-ಗೌತಮಿ ನಂಟಿನ ಮೇಲೆ ಐಶ್ವರ್ಯಾ ಕಣ್ಣು; ಬಿತ್ತು ಬೆನ್ನಿಗೆ ಚೂರಿ
ಬೆನ್ನಿಗೆ ಚೂರಿ ಹಾಕುವ ಮೂಲಕ ನಾಮಿನೇಟ್ ಮಾಡಲಾಗಿದೆ. ಐಶ್ವರ್ಯಾ ಸಿಂಧೋಗಿ ಅವರು ಗೌತಮಿ ಮತ್ತು ಉಗ್ರಂ ಮಂಜು ಬೆನ್ನಿಗೆ ಚೂರಿ ಹಾಕಿದ್ದಾರೆ. ಐಶ್ವರ್ಯಾ ನೀಡಿದ ಕಾರಣಗಳನ್ನು ಉಗ್ರಂ ಮಂಜು ಅವರು ಒಪ್ಪಿಕೊಂಡಿಲ್ಲ. ಅವರು ಜೋರಾಗಿ ಜಗಳ ಮಾಡಿದ್ದಾರೆ. ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕ ಹೆಚ್ಚಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಲ್ಲಿ ಉಗ್ರಂ ಮಂಜು ಮತ್ತು ಗೌತಮಿ ಜಾದವ್ ನಡುವೆ ಹೆಚ್ಚು ಆಪ್ತತೆ ಬೆಳೆದಿದೆ. ಹೆಚ್ಚಿನ ಸಂದರ್ಭಗಳಲ್ಲಿ ಅವರಿಬ್ಬರು ಜೊತೆಯಾಗಿ ಕಾಲ ಕಳೆಯುತ್ತಾರೆ. ಇದರಿಂದ ಇನ್ನುಳಿದ ಸ್ಪರ್ಧಿಗಳಿಗೆ ಭಿನ್ನಾಭಿಪ್ರಾಯ ಮೂಡಿದೆ. ನಾಮಿನೇಷನ್ ಸಂದರ್ಭಗಳಲ್ಲಿ ಕೂಡ ಇದೇ ಕಾರಣವನ್ನು ನೀಡಲಾಗುತ್ತಿದೆ. ಕಳೆದ ವಾರ ರಾಜಾಡಳಿತದ ಟಾಸ್ಕ್ ನೀಡಿದ್ದಾಗ ಮಂಜು ಅವರು ಗೌತಮಿ ವಿಚಾರದಲ್ಲಿ ಪಕ್ಷಪಾತ ಮಾಡಿದ್ದಾರೆ ಎಂಬುದು ಅನೇಕರ ವಾದ. ಈ ವಾರ ಕೂಡ ಅದೇ ಕಾರಣವನ್ನು ಇಟ್ಟುಕೊಂಡು ನಾಮಿನೇಷನ್ ಮಾಡಲಾಗುತ್ತಿದೆ.
ಈ ವಾರ ಯಾರು ನಾಮಿನೇಟ್ ಆಗಬೇಕು ಎಂಬ ಪ್ರಕ್ರಿಯೆಯಲ್ಲಿ ಮೊದಲು ಐಶ್ವರ್ಯಾ ಸಿಂಧೋಗಿ ಅವರು ತಮ್ಮ ಅಭಿಪ್ರಾಯ ತಿಳಿಸಿದರು. ಬೆನ್ನಿಗೆ ಚೂರಿ ಹಾಕುವ ಮೂಲಕ ತಮ್ಮ ಅನಿಸಿಕೆ ತಿಳಿಸಬೇಕು ಎಂದು ಬಿಗ್ ಬಾಸ್ ಆದೇಶಿಸಿದರು. ಅದರಂತೆ ಐಶ್ವರ್ಯಾ ಅವರು ಮಂಜು ಮತ್ತು ಗೌತಮಿಯ ಬೆನ್ನಿಗೆ ಚೂರಿ ಹಾಕುವ ಮೂಲಕ ನಾಮಿನೇಟ್ ಮಾಡಿದರು. ಪಕ್ಷಪಾತದ ವಿಷಯವನ್ನು ಅವರು ಪ್ರಸ್ತಾಪಿಸಿದರು.
ಇಡೀ ಮನೆಯೇ ಗೌತಮಿ ಮತ್ತು ಉಗ್ರಂ ಮಂಜು ನಂಟಿನ ಬಗ್ಗೆ ಮಾತನಾಡುತ್ತಿದೆ. ಹಾಗಿದ್ದರೂ ಕೂಡ ಅವರಿಬ್ಬರು ಎಚ್ಚೆತ್ತುಕೊಳ್ಳುತ್ತಿಲ್ಲ. ಅವರಿಬ್ಬರು ಪರಸ್ಪರ ಬೆಂಬಲ ನೀಡುತ್ತಾ ಆಟ ಆಡುತ್ತಿದ್ದಾರೆ. ದಿನ ಕಳೆದಂತೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಇನ್ಮುಂದೆ ಆಟ ಬದಲಾಗಲಿದೆ. ಮುಂದಿನ ದಿನಗಳಲ್ಲಿ ಮಂಜು ಮತ್ತು ಗೌತಮಿ ಬೇರೆ ಬೇರೆ ಆದರೂ ಅಚ್ಚರಿ ಏನಿಲ್ಲ.
ಇದನ್ನೂ ಓದಿ: ದೊಡ್ಮನೆಯಲ್ಲಿರಲು ಗೌತಮಿಗೆ ಅರ್ಹತೆ ಇಲ್ಲ: ಮುಖಕ್ಕೆ ಹೊಡೆದಂತೆ ಹೇಳಿದ ಸ್ಪರ್ಧಿಗಳು
ಬಿಗ್ ಬಾಸ್ ಮನೆಯಲ್ಲಿ ಯಾರು ಕಳಪೆ ಎಂಬುದನ್ನು ತೀರ್ಮಾನಿಸುವ ಟಾಸ್ಕ್ನಲ್ಲಿಯೂ ಗೌತಮಿಯ ಹೆಸರನ್ನು ಹೇಳಲಾಗಿತ್ತು. ಆಗಲೂ ಉಗ್ರಂ ಮಂಜು ಅವರು ಬಂದು ಗೌತಮಿಯ ಪರವಾಗಿ ಬ್ಯಾಟ್ ಬೀಸಿದ್ದರು. ಹನುಮಂತ ಕೂಡ ಮಂಜು ಮತ್ತು ಗೌತಮಿಯ ಒಡನಾಟವನ್ನು ಟೀಕಿಸಿದ್ದರು. ಎಷ್ಟೇ ಆದರೂ ಕೂಡ ಗೌತಮಿ ಮತ್ತು ಉಗ್ರಂ ಮಂಜು ಅವರು ಆಟವನ್ನು ಬದಲಾಯಿಸಿಕೊಂಡಿಲ್ಲ.
ಕಳೆದ ವಾರ ಶೋಭಾ ಶೆಟ್ಟಿ ಅವರು ಎಲಿಮಿನೇಟ್ ಆದರು. ಈ ವಾರ ಧನರಾಜ್ ಕ್ಯಾಪ್ಟನ್ ಆಗಿದ್ದಾರೆ. ತಮ್ಮ ಅಸ್ಥಿತ್ವಕ್ಕಾಗಿ ಎಲ್ಲರೂ ಹೋರಾಡುತ್ತಿದ್ದಾರೆ. ದಿನ ಕಳೆದಂತೆಲ್ಲ ಆಟದ ರೋಚಕತೆ ಹೆಚ್ಚುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.