ನಮ್ರತಾ ಗೌಡ (Namratha Gowda) ಅವರು ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿ ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಈ ವೇದಿಕೆಯಿಂದ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಎಲ್ಲರ ಜೊತೆ ಅವರು ಬೆರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಬಗ್ಗೆ ಅಭಿಮಾನಿಗಳಿಗೆ ಖುಷಿ ಇದೆ. ಈಗ ಬಿಗ್ ಬಾಸ್ ಮನೆಯಲ್ಲಿ ಅವರ ತಾಯಿಯ ಆಗಮನ ಆಗಿದೆ. ತಾಯಿ ಜೊತೆ ನಿಂತು ಅವರು ತಮ್ಮ ಕಷ್ಟದ ದಿನಗಳನ್ನು ಹೇಳಿಕೊಂಡಿದ್ದಾರೆ. ಡಿಸೆಂಬರ್ 26ರಂದು ಈ ಎಪಿಸೋಡ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಂಡಿದೆ.
ಬಿಗ್ ಬಾಸ್ ಮನೆಯಲ್ಲಿ ಹೊಸ ಚಟುವಟಿಕೆ ಶುರುವಾಗಿದೆ. ಪೌಸ್ ಎಂದಾಗ ಸ್ಟ್ಯಾಚ್ಯೂ ತರ ನಿಲ್ಲಬೇಕು. ಪ್ಲೇ ಎಂದಾಗ ಅವರು ಸಾಮಾನ್ಯವಾಗಿ ಇರಬಹುದು. ನಮ್ರತಾಗೆ ಬಿಗ್ ಬಾಸ್ ಕಡೆಯಿಂದ ಪೌಸ್ ಎನ್ನುವ ಆದೇಶ ಬಂದಿದೆ. ಆಗ ಅವರ ತಾಯಿಯ ಆಗಮನ ಆಗಿದೆ. ತಾಯಿಯನ್ನು ಕಂಡು ಕಣ್ಣೀರು ಹಾಕಿದ್ದಾರೆ. ಬಿಗ್ ಬಾಸ್ ಪ್ಲೇ ಎಂದಾಗ ತಾಯಿಯನ್ನು ಹಗ್ ಮಾಡಿ ಖುಷಿ ಪಟ್ಟಿದ್ದಾರೆ. ಮನೆಯಿಂದ ತಂದ ಊಟವನ್ನು ತಿಂದು ಖುಷಿ ಪಟ್ಟಿದ್ದಾರೆ. ಅಮ್ಮನ ಜೊತೆ ನಿಂತು ತಮ್ಮ ಜೀವನದಲ್ಲಾದ ಕಷ್ಟಗಳನ್ನು ಅವರು ಹೇಳಿಕೊಂಡಿದ್ದಾರೆ.
‘ನಾನು ಹೊಟ್ಟೆಯಲ್ಲಿದ್ದಾಗ ತುಂಬ ದಪ್ಪ ಇದ್ದೆ. ಹೀಗಾಗಿ ವೈದ್ಯರು ಹೆಂಡತಿ ಬೇಕೋ ಅಥವಾ ಮಗು ಬೇಕೋ ಎಂದು ನನ್ನ ತಂದೆ ಬಳಿ ಕೇಳಿದ್ದರಂತೆ. ಹೆಂಡತಿ ಬೇಕು ಎಂದು ತಂದೆ ಹೇಳಿದರು. ಬಳಿಕ ಹೇಗೋ ಜನಿಸಿದೆ. ನನಗೆ ಐದು ತಿಂಗಳು ಇದ್ದಾಗ ಅಜ್ಜಿಗೆ ಅಪಘಾತ ಆಗಿ ತಲೆಗೆ ಪೆಟ್ಟುಬಿತ್ತು. ಹೆಣ್ಣು ಮಗುವಿನ ಕಾಲ್ಗುಣದಿಂದ ಈ ರೀತಿ ಆಯ್ತು ಎಂದು ಅಜ್ಜಿ ಕಡೆಯವರು ಹೇಳಲು ಆರಂಭಿಸಿದರು. ಆ ಬಳಿಕ ಇವರು ನನ್ನನ್ನು ಕಷ್ಟಪಟ್ಟು ಬೆಳೆಸಿದರು. ಬಾಲ ನಟಿಯಾಗಿ ಕೆಲಸ ಶುರು ಮಾಡಿದೆ. ಅಲ್ಲಿಂದ ದುಡಿಯೋಕೆ ಆರಂಭಿಸಿದೆ’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು ನಮ್ರತಾ.
ಇದನ್ನೂ ಓದಿ: ‘ಪ್ರತಾಪ್ ಬೆನ್ನಿಗೆ ನಮ್ರತಾ ಚೂರಿ ಹಾಕಿದ್ರು’; ಬಿಗ್ ಬಾಸ್ ಪ್ರೋಮೋ ನೋಡಿ ಫ್ಯಾನ್ಸ್ ಶಾಕ್
ಎಲ್ಲವೂ ಸರಿ ಇದೆ ಎಂದಾಗ ಅಮ್ಮನ ಫ್ಯಾಮಿಲಿಯಿಂದ ಕೆಲವು ಮಾತುಗಳು ಕೇಳಿ ಬಂದವು. ಇವಳು ನಟಿ. ಇರೋ ರೀತಿ ಸರಿ ಇರಲ್ಲ. ನಟಿಯರು ಬೇರೆ ರೀತಿಯಲ್ಲೇ ದುಡಿಯುತ್ತಾರೆ ಎನ್ನಲು ಪ್ರಾರಂಭಿಸಿದರು. ಅಲ್ಲಿಂದ ನನ್ನ ಅಮ್ಮನಿಗೆ ಮತ್ತೊಂದು ಸಮಸ್ಯೆ ಉಂಟಾಯಿತು. ನಾವು ಮೂರೇ ಜನ ಬೆಳೆದೆವು. ನಾನು ಇಷ್ಟು ಸ್ಟ್ರಾಂಗ್ ಆಗಿರಲು ನನ್ನ ಅಮ್ಮನೇ ಕಾರಣ’ ಎಂದಿದ್ದಾರೆ ನಮ್ರತಾ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ