‘ಆಸೆ’ ಧಾರಾವಾಹಿಯಲ್ಲಿ ಭಾವನೆಗಳ ಪಯಣ; ಸೂರ್ಯ ಪಾತ್ರಧಾರಿ ನಿನಾದ್ ಏನಂತಾರೆ?

ಸ್ಟಾರ್ ಸುವರ್ಣದ ಜನಪ್ರಿಯ ‘ಆಸೆ’ ಧಾರಾವಾಹಿಯಲ್ಲಿ ಸೂರ್ಯನಾಗಿ ಮಿಂಚುತ್ತಿರುವ ನಿನಾದ್ ಹರಿತ್ಸ, 800 ಸಂಚಿಕೆಗಳ ಯಶಸ್ವಿ ಪಯಣವನ್ನು ಹಂಚಿಕೊಂಡಿದ್ದಾರೆ. ಮಧ್ಯಮ ವರ್ಗದ ಕಥಾ ಹಂದರ, ಭಾವನಾತ್ಮಕ ಸನ್ನಿವೇಶಗಳು ಧಾರಾವಾಹಿಗೆ ಶಕ್ತಿ. ಸೂರ್ಯ ಪಾತ್ರಕ್ಕೆ ಜೀವ ತುಂಬಿದ ಶ್ರೀಕಾಂತ್ ಬರವಣಿಗೆಯನ್ನು ಅವರು ಶ್ಲಾಘಿಸಿದ್ದಾರೆ. ನಿನಾದ್ ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುವ ಆಸಕ್ತಿ ಹೊಂದಿದ್ದಾರೆ.

‘ಆಸೆ’ ಧಾರಾವಾಹಿಯಲ್ಲಿ ಭಾವನೆಗಳ ಪಯಣ; ಸೂರ್ಯ ಪಾತ್ರಧಾರಿ ನಿನಾದ್ ಏನಂತಾರೆ?
ನಿನಾದ್ ಹರಿತ್ಸ

Updated on: Mar 11, 2026 | 12:16 PM

ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ‘ಆಸೆ’ ಧಾರಾವಾಹಿಗೆ (Serial) ದೊಡ್ಡ ವೀಕ್ಷಕರ ಬಳಗ ಇದೆ. ವೀಕ್ಷಕರಿಗೆ ಹೆಚ್ಚು ಇಷ್ಟ ಆಗಿದ್ದು, ಈ ಸೀರಿಯಲ್​ನ ನಿನಾದ್ ಹರಿತ್ಸ ಮಾಡುತ್ತಿರುವ ಸೂರ್ಯ ಪಾತ್ರ. ಅವರ ಸ್ಮೈಲ್, ಸ್ಟೈಲ್, ಡೈಲಾಗ್ ಎಲ್ಲರಿಗೂ ಇಷ್ಟ ಆಗಿದೆ. ಒಂದು ಸೀರಿಯಲ್ 800 ಪ್ರಸಾರ ಕಾಣುತ್ತದೆ ಎಂದರೆ ಅದು ಸಣ್ಣ ವಿಷಯ ಅಲ್ಲವೇ ಅಲ್ಲ. ನಿನಾದ್ ಅವರು ಈ ಜರ್ನಿಯನ್ನು ನೆನೆದಿದ್ದಾರೆ.

‘ಆಸೆ’ ಧಾರಾವಾಹಿಯಲ್ಲಿ ಹಲವು ಭಾವನೆಗಳನ್ನು ಬೆರೆಸಲಾಗಿದೆ. ಇಲ್ಲಿ ಮಧ್ಯಮ ವರ್ಗದವರ ಒದ್ದಾಟ ಇದೆ, ಅಪ್ಪ-ಮಗನ ಬಾಂಧವ್ಯ, ಅರೇಂಜ್ ಮ್ಯಾರೇಜ್ ಬಳಿಕ ಎದುರಾಗಬಹುದಾದ ತೊಂದರೆ, ಅಮ್ಮ-ಮಗನ ಮುನಿಸು, ಹೀಗೆ ಹಲವು ವಿಷಯಗಳನ್ನು ಹೇಳುವ ಪ್ರಯತ್ನ ಆಗುತ್ತಿದೆ. ಸೂರ್ಯ ಅವರು ತಮ್ಮ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಧಾರಾವಾಹಿ ಬಗ್ಗೆ ಮಾತನಾಡಿದ್ದಾರೆ.

‘ಆಸೆ ರಿಮೇಕ್ ಧಾರಾವಾಹಿ. ಇದು ಮರಾಠಿ, ಗುಜರಾತಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಪ್ರಸಾರ ಆಗುತ್ತಿದೆ. ಆದರೆ, ಕನ್ನಡದಲ್ಲಿ ನನ್ನ ಪಾತ್ರವನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ಇದಕ್ಕೆ ನಮ್ಮ ನಿರ್ದೇಶಕರು ಕಾರಣ. ಮೃಗಶಿರ ಶ್ರೀಕಾಂತ್ ಅವರ ಬರವಣಿಗೆ ಧಾರಾವಾಹಿಗೆ ಮತ್ತೊಂದು ಬಲ. ಅವರಿಲ್ಲ ಎಂದರೆ, ಸೂರ್ಯ ಇಲ್ಲ. ಇವರಿಂದ ಸೂರ್ಯ ಪಾತ್ರ ಉದಯಿಸಿದೆ’ ಎಂದಿದ್ದಾರೆ ಅವರು.

‘ಮಂಡ್ಯ ರಮೇಶ್ ಜೊತೆ ನಟಿಸೋ ಅವಕಾಶ ನನಗೆ ಸಿಕ್ಕಿದೆ. ಅವರು ನಮ್ಮ ಜೊತೆ ಗೆಳೆಯರಂತೆ ವರ್ತಿಸುತ್ತಾರೆ. ಜೋಕ್ ಮಾಡಿಕೊಂಡು ಇರ್ತಾರೆ. ಅವರ ಜೊತೆ ಒಳ್ಳೆಯ ಬಾಂಡ್ ಇದೆ. ಅವರು ಅಂತ ಅಲ್ಲ, ಧಾರಾವಾಹಿಯ ಎಲ್ಲಾ ಕಲಾವಿದರ ಜೊತೆ ಒಳ್ಳೆಯ ಬಾಂಡ್ ಇದೆ. ನಾವು ಖುಷಿಯಿಂದ ಕೆಲಸ ಮಾಡುತ್ತಿದ್ದೇವೆ’ ಎಂದು ಸೂರ್ಯ ಹೇಳಿದ್ದಾರೆ.

‘ನನ್ನದು ಮಧ್ಯಮ ವರ್ಗ. ನನ್ನ ಜೀವನದಲ್ಲಿ ಏನೋ ನಡೆದಿರುತ್ತದೆ. ನಂತರ ಅದೇ ದೃಶ್ಯವನ್ನು ಧಾರಾವಾಹಿಯಲ್ಲೂ ನೀಡುತ್ತಾರೆ. ನನಗೆ ನಿಜಕ್ಕೂ ಅಚ್ಚರಿ ಎನಿಸಿ ಬಿಡುತ್ತದೆ. ಧಾರಾವಾಹಿ ಜನರಿಗೆ ಹತ್ತಿರವಾಗಲು ಇದೇ ಕಾರಣ. ಸ್ಟೋರಿ ರೈಟರ್​​ಗೆ ಎಲ್ಲ ಕೊಡುಗೆ ಕೊಡುತ್ತೇನೆ’ ಎನ್ನುತ್ತಾರೆ ಅವರು.

ಕಲಾವಿದ ಪಾತ್ರವನ್ನು ಮನಸ್ಸಿಗೆ ತೆಗೆದುಕೊಳ್ಳದೆ, ಕೇವಲ ನಟನೆಗೆ ಸೀಮಿತ ಮಾಡಿಕೊಳ್ಳಬೇಕು ಎಂಬುದು ನಿನಾದ್ ಅವರ ಟಿಪ್ಸ್. ಅದನ್ನು ಮನಸ್ಸಿಗೆ ತೆಗೆದುಕೊಂಡರೆ ಅದು ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ, ಇದರಿಂದ ವೈಯಕ್ತಿಕ ಜೀವನಕ್ಕೆ ತೊಂದರೆ ಆಗುತ್ತದೆ ಎಂದು ಅವರು ಬಲವಾಗಿ ನಂಬಿದ್ದಾರೆ.

ಧಾರಾವಾಹಿ ಹಾಗೂ ಸಿನಿಮಾ ಶೂಟ್​​​ನಲ್ಲಿ ಸಾಕಷ್ಟು ವ್ಯತ್ಯಾಸ ಇರುತ್ತದೆ. ಸಿನಿಮಾಗಳಲ್ಲಿ ಒಂದು ನಿಗದಿತ ಸಮಯದಲ್ಲಿ ಶೂಟ್ ಮಾಡಲಾಗುತ್ತದೆ. ಆದರೆ, ಧಾರಾವಾಹಿಯಲ್ಲಿ ಹಾಗಾಗೋದಿಲ್ಲ. ನಿನಾದ್​​ಗೂ ಅದೇ ರೀತಿಯ ತೊಂದರೆ ಎದುರಾಗುತ್ತಿದೆ. ವೈಯಕ್ತಿಕವಾಗಿ ಏನಾದರೂ ಪ್ಲ್ಯಾನ್ ಮಾಡಿಕೊಂಡಾಗಲೇ ಶೂಟಿಂಗ್ ಇರುತ್ತದೆ. ಆದರೂ ಕೆಲಸವನ್ನು ಇಷ್ಟಪಟ್ಟು ಮಾಡುತ್ತಿರುವುದರಿಂದ, ಅವರು ಕಷ್ಟಪಟ್ಟಾದರೂ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನವನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ: ‘ಕರ್ಣ ಧಾರಾವಾಹಿಯಿಂದ ಹೊರ ನಡೆದ ನಾಗಾಭರಣ; ಅಭಿಜಿತ್ ಆಗಮನ

ಇತ್ತೀಚೆಗೆ ಬಂದ ‘ಮಾರಿಗಲ್ಲು ವೆಬ್’ ವೆಬ್ ಸರಣಿಯಲ್ಲಿ ನಿನಾದ್ ನಟಿಸಿದ್ದಾರೆ. ಒಂದು ಬದಲಾವಣೆ ಇರಲಿ ಎಂಬ ಕಾರಣಕ್ಕೆ ಅವರು ಇದರ ಭಾಗ ಆಗಿದ್ದರು. ಈಗ ಅವರು ಸಿನಿಮಾ ಮಾಡುವ ಆಸಕ್ತಿ ತೋರಿಸುತ್ತಿದ್ದಾರೆ. ವೃತ್ತಿ ಜೀವನಕ್ಕೆ ಬೆಂಬವಾಗಿ ನಿಂತ ಪತ್ನಿ ರಮ್ಯಾಗೂ ಅವರು ಧನ್ಯವಾದ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us