ಹಲವು ಭಾಷೆಗಳಲ್ಲಿ ಹಲವು ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಬಹುತೇಕ ಎಲ್ಲಾ ಧಾರಾವಾಹಿಗಳಲ್ಲೂ ಹೀರೋ, ಹೀರೋಯಿನ್ ಇರುತ್ತಾರೆ. ಇವರು ಇದ್ದಮೇಲೆ ವಿಲನ್ ಕೂಡ ಇರಲೇಬೇಕು. ಬಹುತೇಕ ಎಲ್ಲಾ ಧಾರಾವಾಹಿಗಳಲ್ಲೂ ನೆಗೆಟಿವ್ ಶೇಡ್ನ ಪಾತ್ರಗಳು ಇರುತ್ತವೆ. ಆದರೆ, ಕೆಲವೇ ಕೆಲವು ಧಾರಾವಾಹಿಗಳಲ್ಲಿ ಈ ರೀತಿಯ ಪಾತ್ರ ಇರುವುದಿಲ್ಲ. ಹುಡುಕಿದರೆ ಅಲ್ಲೊಂದು, ಇಲ್ಲೊಂದು ಈ ತರಹದ ಧಾರಾವಾಹಿ ಸಿಗುತ್ತದೆ. ಈಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ‘ಬೃಂದಾವನ’ (Brundavana Serial) ಸೀರಿಯಲ್ನಲ್ಲಿ ವಿಲನ್ ಪಾತ್ರವೇ ಇರುವುದಿಲ್ಲವಂತೆ. ಈ ವಿಚಾರವನ್ನು ತಂಡದವರೇ ಬಿಟ್ಟುಕೊಟ್ಟಿದ್ದಾರೆ. ಇದನ್ನು ಕೇಳಿ ವೀಕ್ಷಕರ ವಲಯದಲ್ಲಿ ಚರ್ಚೆ ಶುರುವಾಗಿದೆ. ಧಾರಾವಾಹಿ ಯಾವ ರೀತಿಯಲ್ಲಿ ಮೂಡಿಬರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.
ರಾಮ್ ಜಿ ಅವರು ನಿರ್ದೇಶನ ಮಾಡುವ ಧಾರಾವಾಹಿಗಳಲ್ಲಿ ವಿಲನ್ ಪಾತ್ರಗಳು ಸ್ಟ್ರಾಂಗ್ ಆಗಿರುತ್ತವೆ. ‘ಗೀತಾ’ ಸೇರಿ ಅನೇಕ ಧಾರಾವಾಹಿಗಳಲ್ಲೂ ಇದು ಸಾಬೀತಾಗಿದೆ. ‘ಬೃಂದಾವನ’ ಧಾರಾವಾಹಿಯಲ್ಲೂ ವಿಲನ್ ಪಾತ್ರ ಹೈಲೈಟ್ ಆಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅಚ್ಚರಿಯ ವಿಚಾರವನ್ನು ತಂಡ ಬಿಚ್ಚಿಟ್ಟಿದೆ. ಈ ಧಾರಾವಾಹಿಯಲ್ಲಿ ವಿಲನ್ ಇಲ್ಲ ಎಂದು ಹೇಳುವ ಮೂಲಕ ಕುತೂಹಲ ಹುಟ್ಟುಹಾಕಿದೆ.
‘ಬೃಂದಾವನ ಧಾರಾವಾಹಿಯಲ್ಲಿ ಒಂದು ಸ್ಪೆಷಾಲಿಟಿ ಇದೆ. ಮೆಗಾ ಸೀರಿಯಲ್ ನೋಡಿರುತ್ತೀರಿ. ಮೆಗಾ ಸ್ಕೇಲ್ ನೋಡಿರುತ್ತೀರಿ. ಆದರೆ, ಮೆಗಾ ಫ್ಯಾಮಿಲಿಯ ಕಥೆ ನೋಡುತ್ತಿರುವುದು ಬಹುಶಃ ಇದೇ ಮೊದಲು. ಬೃಂದಾವನ ತಂಡ ಸಾಕಷ್ಟು ದೊಡ್ಡದಾಗಿದೆ. ಅತ್ತೆ, ನಾದ್ನಿ ಸಂಬಂಧಗಳ ಸಂಭ್ರಮವೇ ಬೃಂದಾವನ. ಕೂಡು ಕುಟುಂಬದ ಸಂತೋಷ, ಅನುಕೂಲಗಳನ್ನು ತೋರಿಸಲು ಒಂದು ಧಾರಾವಾಹಿ ಮಾಡಲಾಗುತ್ತಿದೆ. ಈ ಧಾರಾವಾಹಿಯ ಸ್ಪೆಷಾಲಿಟಿ ಏನು ಅಂದ್ರೆ ಇಲ್ಲಿ ನೆಗೆಟಿವ್ ಕ್ಯಾರೆಕ್ಟರ್ ಇಲ್ಲ’ ಎಂದು ತಂಡ ವಿವರಿಸಿದೆ.
ಹಾಗಾದರೆ, ನೆಗೆಟಿವ್ ಪಾತ್ರಗಳೇ ಇಲ್ಲದೆ ಧಾರಾವಾಹಿ ಮುಂದುವರಿಯೋಕೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಅದಕ್ಕೂ ಉತ್ತರ ಇದೆ. ಇಲ್ಲಿ ಎಲ್ಲರೂ ಸಮಯದ ಕೈಗೊಂಬೆ ಆಗಿರುತ್ತಾರೆ. ಎಲ್ಲರಿಗೂ ಅವರದ್ದೇ ಆದ ಸ್ವಾರ್ಥ ಇರುತ್ತದೆ. ಈ ಸ್ವಾರ್ಥ ತೋರಿಸಿದಾಗ ಸಹಜವಾಗಿಯೇ ಮತ್ತೊಬ್ಬರಿಗೆ ಇವರು ವಿಲನ್ ಆಗಿ ಬದಲಾಗುತ್ತಾರೆ. ಈ ರೀತಿಯಲ್ಲಿ ಧಾರಾವಾಹಿಯ ಕಥೆ ಮೂಡಿ ಬರುತ್ತಿದೆ.
ಕೂಡು ಕುಟುಂಬ ಎಂದಾಗ ಅಲ್ಲಿ ಸಾಕಷ್ಟು ಸಮಸ್ಯೆಗಳು ಇರುತ್ತವೆ. ಇದರ ಜೊತೆಗೆ ಒಂದಷ್ಟು ಫನ್ ಕೂಡ ಇರುತ್ತದೆ. ಅಲ್ಲಿ ಸಿಗುವ ಸಂತೋಷವೇ ಬೇರೆ. ಈ ಎಲ್ಲಾ ವಿಚಾರಗಳನ್ನು ‘ಬೃಂದಾವನ’ ಧಾರಾವಾಹಿಯಲ್ಲಿ ತೋರಿಸಲಾಗುತ್ತಿದೆ.
ಚಿತ್ಕಲಾ ಬೀರಾದಾರ್ ಅವರು ಈ ಧಾರಾವಾಹಿಯಲ್ಲಿ ಮನೆಯ ಯಜಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ‘ಕನ್ನಡತಿ’ ಧಾರಾವಾಹಿ ಬಳಿಕ ಅವರು ಕಿರುತೆರೆಗೆ ಮರಳಿದ್ದಾರೆ. ಅವರ ಪಾತ್ರ ಇಲ್ಲಿ ಮುಖ್ಯವಾಗಲಿದೆ. ಇನ್ನು, ‘ಬಿಗ್ ಬಾಸ್ ಕನ್ನಡ ಸೀಸನ್ 8’ಕ್ಕೆ ಕಾಲಿಟ್ಟಿದ್ದ ಗಾಯಕ ವಿಶ್ವನಾಥ್ ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ‘ಅಣ್ಣ ತಂಗಿ’ ಧಾರಾವಾಹಿಗೆ ಅನು ಪ್ರಭಾಕರ್ ಎಂಟ್ರಿ; ನವರಾತ್ರಿ ಪ್ರಯುಕ್ತ ದೇವಿಯ ಪಾತ್ರ
‘ಗೀತಾ’ ಧಾರಾವಾಹಿಯನ್ನು ರಾಮ್ ಜಿ ನಿರ್ದೇಶನ ಮಾಡುತ್ತಿದ್ದಾರೆ. ಈ ಧಾರಾವಾಹಿ ಕೊನೆ ಹಂತ ತಲುಪಿದೆ. ಈ ಧಾರಾವಾಹಿ ಇಂದು (ಅಕ್ಟೋಬರ್ 18) ಪೂರ್ಣಗೊಳ್ಳಲಿದೆ. ಈ ಧಾರಾವಾಹಿಯ ಜಾಗದಲ್ಲಿ (ರಾತ್ರಿ 8 ಗಂಟೆ) ‘ಬೃಂದಾವನ’ ಧಾರಾವಾಹಿ ಬರಲಿದೆ. ಬರೋಬ್ಬರಿ 36ಕ್ಕೂ ಅಧಿಕ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ