ಎರಡು ಭಿನ್ನ ವ್ಯಕ್ತಿತ್ವಗಳ ಪ್ರೇಮಕಥೆ ‘ಓ ಮನಸೇ’ ಧಾರಾವಾಹಿ ನ.10ರಿಂದ ಪ್ರಸಾರ
ಎರಡು ಭಿನ್ನ ಮನಸುಗಳ ಅಸಾಧ್ಯ ಪ್ರೇಮಕಥೆ ಹೊಂದಿರುವ ‘ಓ ಮನಸೇ’ ಧಾರಾವಾಹಿ ನವೆಂಬರ್ 10ರಿಂದ ಪ್ರತಿದಿನ ರಾತ್ರಿ 8.30ಕ್ಕೆ ‘ಸ್ಟಾರ್ ಸುವರ್ಣ’ ವಾಹಿನಿ ಮತ್ತು ‘ಜಿಯೋ ಹಾಟ್ ಸ್ಟಾರ್’ ಒಟಿಟಿಯಲ್ಲಿ ಪ್ರಸಾರ ಆಗಲಿದೆ. ‘ವಸುದೇವ ಕುಟುಂಬ’ ಸೀರಿಯಲ್ ನವೆಂಬರ್ 10ರಿಂದ ಪ್ರತಿದಿನ ರಾತ್ರಿ 9ಕ್ಕೆ ಪ್ರಸಾರ ಆಗಲಿದೆ.

ಕಿರುತೆರೆಯಲ್ಲಿ ಧಾರಾವಾಹಿಗಳ ನಡುವೆ ಪೈಪೋಟಿ ಇದೆ. ವೀಕ್ಷಕರಿಗೆ ಹೊಸ ಬಗೆಯ ವಿನೂತನ ಧಾರಾವಾಹಿಗಳನ್ನು ಕನ್ನಡಿಗರಿಗೆ ನೀಡುತ್ತಿರುವ ‘ಸ್ಟಾರ್ ಸುವರ್ಣ’ ವಾಹಿನಿ ಇದೀಗ ‘ಓ ಮನಸೇ’ ಎಂಬ ಹೊಸ ಧಾರಾವಾಹಿಯನ್ನು ವೀಕ್ಷಕರಿಗೆ ಪರಿಚಯಿಸುತ್ತಿದೆ. ಈ ಹೊಸ ಕಥೆಯನ್ನು ಪ್ರಸಾರ ಮಾಡಲು ವಾಹಿನಿ ಸಜ್ಜಾಗಿದೆ. ಈ ಧಾರಾವಾಹಿಯಲ್ಲಿ ದರ್ಶಕ್ ಗೌಡ ಮತ್ತು ಮಧುಮಿತಾ ಗೌಡ ಅವರು ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ನವೆಂಬರ್ 10ರಿಂದ ಈ ಸೀರಿಯಲ್ ಶುರು ಆಗಲಿದೆ.
‘ಓ ಮನಸೇ’ ಸೀರಿಯಲ್ ಕಥೆ ಬಗ್ಗೆ ಮಾಹಿತಿ ಸಿಕ್ಕಿದೆ. ಮೈಸೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಕಥಾನಾಯಕಿ ರಾಗಾಗೆ ಶಿಕ್ಷಣವೆಂದರೆ ಪ್ರಾಣ. ಪುಸ್ತಕ ಓದುವುದು ಅವಳ ಹವ್ಯಾಸ. ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ, ಅದು ಸ್ವಾತಂತ್ರ್ಯದ ಹಾದಿಯೆಂದು ನಂಬಿದವಳು ಆಕೆ. ರಾಗಾಳ ಬದುಕಿನ ಅತಿದೊಡ್ಡ ಸ್ಫೂರ್ತಿ ಎಂದರೆ ಅದು ಪ್ರೊಫೆಸರ್ ಕಲ್ಯಾಣಿ. ಆದರೆ ಮುಗಿಲು ಮುಟ್ಟುವ ಕನಸನ್ನು ಹೊಂದಿರುವ ರಾಗಾಗೆ ಸ್ವಂತ ಅಪ್ಪನೇ ತಡೆಗೋಡೆ ಆಗಿದ್ದಾರೆ.
ಇನ್ನೊಂದೆಡೆ, ಶ್ರೀಮಂತ ಕುಟುಂಬದಲ್ಲಿ ಬೆಳೆದಿರುವ ಕಥಾನಾಯಕ ರಿಷಿ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಆತ. ತನ್ನೆಲ್ಲಾ ಭಾವನೆಗಳನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇಟ್ಟುಕೊಂಡು ಬದುಕುತ್ತಿರುವ ವ್ಯಕ್ತಿ ಅವನು. ಪ್ರೀತಿ ಎಂಬ ಪದದ ಮೇಲೆ ಆತನಿಗೆ ನಂಬಿಕೆಯಿಲ್ಲ. ತಾಯಿ ಕಲ್ಯಾಣಿಯ ಪ್ರೀತಿ, ಮಮತೆಯಿಂದ ದೂರವಾಗಿರುವ ರಿಷಿಗೆ ಅವಳ ಬಗ್ಗೆ ತೀವ್ರ ಅಸಹನೆ.
ಈ ಎರಡು ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿರುವ ರಾಗಾ-ರಿಷಿಯ ಬದುಕಿನ ಪಯಣದಲ್ಲಿ ವರ್ಷಗಳಿಂದ ಹೆಪ್ಪುಗಟ್ಟಿರುವ ಕಲ್ಯಾಣಿ ಮತ್ತು ಜಯರಾಮ್ ನಡುವಿನ ಮನಸ್ತಾಪ ದೂರವಾಗುತ್ತಾ? ತಂದೆಯ ಮಾತನ್ನು ಮೀರಿ ತನ್ನ ಕನಸನ್ನು ರಾಗಾ ಹೇಗೆ ನನಸು ಮಾಡುತ್ತಾಳೆ? ವಿರುದ್ಧ ದಿಕ್ಕಿನ ವ್ಯಕ್ತಿತ್ವ ಹೊಂದಿರುವ ರಾಗಾ-ರಿಷಿ ಒಂದಾಗಲು ಸಾಧ್ಯನಾ ಎಂಬುದೇ ಈ ಧಾರಾವಾಹಿ ಕಥೆಯ ಸಾರಂಶ.
ಇದನ್ನೂ ಓದಿ: ಧಾರಾವಾಹಿ, ಸಿನಿಮಾ, ವಿವಾದ ಈಗ ಬಿಗ್ಬಾಸ್: ತಾಂಡವ್ ರಾಮ್ ಹಿನ್ನೆಲೆಯೇನು?
‘ಓ ಮನಸೇ’ ಪಾತ್ರವರ್ಗದಲ್ಲಿ ದರ್ಶಕ್ ಗೌಡ, ಮಧುಮಿತಾ ಗೌಡ ಜೊತೆ ಅಶ್ವಿನಿ ಗೌಡ, ರೇಖಾ ಕೃಷ್ಣಪ್ಪ, ಅಜಿತ್ ಹಂದೆ, ರಮೇಶ್ ಪಂಡಿತ್, ಪ್ರಮೋದ್ ರಾಜ್, ದೀಪಾ ಕಟ್ಟೆ, ಸಹನಾ, ನಿಸರ್ಗ ಅಣ್ಣಪ್ಪ ಮುಂತಾದವರು ಇದ್ದಾರೆ. ‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ಸಂಸ್ಥೆಯ ಮೂಲಕ ಗಣಪತಿ ಭಟ್ ಅವರು ಈ ಧಾರಾವಾಹಿ ನಿರ್ಮಿಸುತ್ತಿದ್ದಾರೆ. ಬಿ. ಮಧುಸೂದನ್ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




