Thandav Ram Profile: ಧಾರಾವಾಹಿ, ಸಿನಿಮಾ, ವಿವಾದ ಈಗ ಬಿಗ್ಬಾಸ್: ತಾಂಡವ್ ರಾಮ್ ಹಿನ್ನೆಲೆಯೇನು?
Bigg Boss Kannada Season 13: ಬಿಗ್ಬಾಸ್ ಕನ್ನಡ ಸೀಸನ್ 13 ಆರಂಭವಾಗಿದೆ. ಸುದೀಪ್ ಅವರು ಇಂದು (ಸೆಪ್ಟೆಂಬರ್ 06) ಶೋ ಪ್ರಾರಂಭ ಮಾಡಿದ್ದು, ಸ್ಪರ್ಧಿಗಳನ್ನು ಒಬ್ಬೊಬ್ಬರನ್ನಾಗಿ ಬಿಗ್ಬಾಸ್ ಮನೆಗೆ ಆಹ್ವಾನಿಸುತ್ತಿದ್ದಾರೆ. ಹಲವು ಟಿವಿ, ಸಿನಿಮಾ ಸೆಲೆಬ್ರಿಟಿಗಳು ಬಿಗ್ಬಾಸ್ ಮನೆಗೆ ಬಂದಿದ್ದು, ಶೂಟೌಟ್ ಕಾರಣಕ್ಕೆ ಸುದ್ದಿಯಾಗಿದ್ದ ನಟ ತಾಂಡವ್ ರಾಮ್ ಸಹ ಎಂಟ್ರಿ ಕೊಟ್ಟಿದ್ದಾರೆ. ಇವರ ಹಿನ್ನೆಲೆ ಏನು? ಇಲ್ಲಿ ತಿಳಿಯಿರಿ...

ಮುಖ್ಯಾಂಶಗಳು
- ಜೋಡಿ ಹಕ್ಕಿ ಧಾರಾವಾಹಿ ಖ್ಯಾತಿಯ ತಾಂಡವ್ ರಾಮ್
- ತಾಂಡವ್ ರಾಮ್ ಅವರು ಇದೀಗ ಬಿಗ್ಬಾಸ್ಗೆ ಬಂದಿದ್ದಾರೆ.
- ಶೂಟೌಟ್ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದ್ದರು ತಾಂಡವ್
ಬಿಗ್ಬಾಸ್ ಕನ್ನಡ ಸೀಸನ್ 13 ಆರಂಭವಾಗಿದೆ ಸ್ಪರ್ಧಿಗಳು ಒಬ್ಬೊಬ್ಬರಾಗಿ ಮನೆ ಒಳಗೆ ಬರುತ್ತಿದ್ದಾರೆ. ಇದೀಗ ಕಿರುತೆರೆ ಕಲಾವಿದ ತಾಂಡವ್ ರಾಮ್ ಅವರು ಬಿಗ್ಬಾಸ್ ಮನೆಗೆ ಎಂಟ್ರಿ ಆಗಿದ್ದಾರೆ. ತಾಂಡವ್ ರಾಮ್ ಅವರು ಬಿಗ್ಬಾಸ್ ಮನೆ ಪ್ರವೇಶಿಸುತ್ತಾರೆ ಎಂದು ಕೆಲವರು ಮೊದಲೇ ಊಹಿಸಿದ್ದರು. ಸಾಮಾನ್ಯವಾಗಿ ಯಾರು ವಿವಾದ ಮಾಡಿಕೊಳ್ಳುತ್ತಾರೋ ಅವರು ತಮ್ಮ ಇಮೇಜು ಕ್ಲೀನ್ ಮಾಡಿಕೊಳ್ಳಲು ಬಿಗ್ಬಾಸ್ ಮನೆಗೆ ಬರುತ್ತಾರೆ ಎಂಬ ಚರ್ಚೆ ಮೊದಲಿನಿಂದಲೂ ಇದೆ. ಕಳೆದ ಸೀಸನ್ನಲ್ಲಿ ಧ್ರುವಂತ್ ಬಂದಾಗಲೂ ಇದೇ ಚರ್ಚೆ ಎದ್ದಿತ್ತು. ಈಗ ಅದೇ ‘ಕೋಟಾ’ನಲ್ಲಿ ತಾಂಡವ್ ರಾಮ್ ಅವರು ಎಂಟ್ರಿ ಕೊಟ್ಟಿದ್ದಾರೆ.
ತಾಂಡವ್ ರಾಮ್ ಹಲವು ವರ್ಷಗಳಿಂದಲೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಟರಾಗಿದ್ದಾರೆ. ಮೂಲತಃ ಹಾಸನದವರಾದ ತಾಂಡವ್ ರಾಮ್, ಶಿಕ್ಷಣ ಮುಗಿಸಿದ್ದೆಲ್ಲ ಹಾಸನದಲ್ಲೇ. ಸಿನಿಮಾ ನಟನಾಗಬೇಕು ಎಂಬ ಆಸೆ ತಾಂಡವ್ಗೆ ಮೊದಲಿನಿಂದಲೂ ಇತ್ತಂತೆ. ಹಾಗೆಯೇ ಮೈಸೂರಿನ ರಂಗಾಯಣದಲ್ಲಿ ಅವರು ತರಬೇತಿ ಸಹ ಪಡೆದುಕೊಂಡರು. ಅಲ್ಲೇ ಕೆಲ ಗೆಳೆಯರ ಜೊತೆ ಸೇರಿ ನಾಟಕಗಳಲ್ಲಿಯೂ ನಟಿಸಿದ್ದರು.
ಅವರ ಗೆಳೆಯರೊಬ್ಬರ ಸಹಾಯದಿಂದ ಕಿರುತೆರೆಗೆ ಎಂಟ್ರಿ ಕೊಟ್ಟ ತಾಂಡವ್ ಮೊದಲು ನಟಿಸಿದ್ದು ಕಸ್ತೂರಿಯಲ್ಲಿ ಪ್ರಸಾರವಾಗುತ್ತಿದ್ದ ‘ಶಿರಡಿ ಸಾಯಿಬಾಬ’ ಧಾರಾವಾಹಿಯಲ್ಲಿ. ಆ ಬಳಿಕ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಧಾರಾವಾಹಿಯಲ್ಲಿ ಸಣ್ಣ ಪಾತ್ರ ಮಾಡುತ್ತಾರೆ. ಬಳಿಕ ‘ಕೃಷ್ಣ-ರುಕ್ಮಿಣಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಾರೆ ತಾಂಡವ್. ಆದರೆ ಆ ಧಾರಾವಾಹಿ ಬೇಗನೆ ನಿಂತು ಹೋಗುತ್ತದೆ. ಆದರೆ ಆ ಧಾರಾವಾಹಿಯಿಂದ ತಾಂಡವ್ಗೆ ಗುರುತು ಧಕ್ಕುತ್ತದೆ. ಅದಾದ ಬಳಿಕ ‘ಬಲು ಅಪರೂಪ ನಮ್ ಜೋಡಿ’ ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಾರೆ. ಅದೂ ಸಹ ಬೇಗನೆ ನಿಂತು ಹೋಗುತ್ತದೆ.
ಇದನ್ನೂ ಓದಿ:Bigg Boss Kannada: ಸಂಗೀತಾ ಭಟ್ ಎಂಟ್ರಿ, ಬಿಗ್ಬಾಸ್ಗೆ ಆಲ್ ದಿ ಬೆಸ್ಟ್ ಹೇಳಿದ ಸುದೀಪ್
‘ಬಲು ಅಪರೂಪ ನಮ್ ಜೋಡಿ’ ಧಾರಾವಾಹಿ ಬಳಿಕ ಒಂದು ಸಿನಿಮಾ ಮಾಡುತ್ತಾರೆ. ಅದರಿಂದ ಪ್ರಯೋಜನವಾಗುವುದಿಲ್ಲ. ಅದಾದ ಬಳಿಕ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಾರೆ. ಆದರೆ ಅದು ಯಾಕೋ ಸರಿ ಬರದೆ ವಾಪಸ್ ಬರುತ್ತಾರೆ. ಆಗ ತಾಂಡವ್ಗೆ ಸಿಕ್ಕಿದ್ದೆ ‘ಜೋಡಿ ಹಕ್ಕಿ’. ಆ ಧಾರಾವಾಹಿ ದೊಡ್ಡ ಹಿಟ್ ಆಗುವ ಜೊತೆಗೆ ತಾಂಡವ್ ಅವರಿಗೆ ದೊಡ್ಡ ಜನಪ್ರಿಯತೆಯನ್ನು ಸಹ ತಂದು ಕೊಡುತ್ತದೆ. ಬಳಿಕ ಧಾರಾವಾಹಿ ನಿರ್ಮಾಣಕ್ಕೂ ಇಳಿಯುತ್ತಾರೆ. ಧಾರಾವಾಹಿಯೊಂದರಲ್ಲಿ ಶಿವನ ಪಾತ್ರವನ್ನೂ ಮಾಡುತ್ತಾರೆ ತಾಂಡವ್.
ಕೋವಿಡ್ ಬಳಿಕ ಸಿನಿಮಾ ನಿರ್ಮಿಸಿ ನಟನೆ ಮಾಡುವ ಪ್ರಯತ್ನಕ್ಕೆ ಕೈ ಹಾಕುವ ತಾಂಡವ್ ವಿವಾದ ಮಾಡಿಕೊಳ್ಳುತ್ತಾರೆ. ಭರತ್ ಎಂಬ ನಿರ್ದೇಶಕನ ಜೊತೆ ಸೇರಿ ‘ದೇವನಾಂಪ್ರಿಯ’ ಸಿನಿಮಾ ನಿರ್ಮಾಣಕ್ಕೆ ಕೈ ಹಾಕುತ್ತಾರೆ. ಆದರೆ ನಿರ್ದೇಶಕನೊಂದಿಗೆ ಭಿನ್ನಾಭಿಪ್ರಾಯ ಮೂಡಿದ ಕಾರಣ 2024ರ ನವೆಂಬರ್ ತಿಂಗಳಲ್ಲಿ ನಿರ್ದೇಶಕ ಭರತ್ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ್ದರು ತಾಂಡವ್. ಕೇಸಿನಲ್ಲಿ ಬಂಧನಕ್ಕೂ ಒಳಗಾಗಿದ್ದರು ತಾಂಡವ್.
ಇದೀಗ ಬಿಗ್ಬಾಸ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ ತಾಂಡವ್. ಹೊರಗಡೆ ವಿವಾದಗಳು ಮಾಡಿಕೊಂಡ ಕೆಲವರು ಬಿಗ್ಬಾಸ್ ಬಂದು ತಮ್ಮ ಇಮೇಜನ್ನು ಸರಿಪಡಿಸಿಕೊಂಡು ಹೋದ ಉದಾಹರಣೆಗಳು ಇವೆ. ಡ್ರೋನ್ ಪ್ರತಾಪ್, ಧ್ರುವಂತ್ ಇನ್ನೂ ಕೆಲವರು ಈ ಪಟ್ಟಿಯಲ್ಲಿದ್ದಾರೆ. ಇದೀಗ ತಾಂಡವ್ ಸಹ ಇದೇ ಕಾರಣಕ್ಕೆ ಬಿಗ್ಬಾಸ್ ಮನೆಗೆ ಬಂದಿರುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




