ಧಾರಾವಾಹಿಗಳಲ್ಲಿ ವಿಲನ್ ಪಾತ್ರ ತುಂಬಾ ಮುಖ್ಯವಾಗುತ್ತದೆ. ಆ ಪಾತ್ರ ಖಡಕ್ ಆಗಿದ್ದರೆ ಧಾರಾವಾಹಿಯ ತೂಕ ಹೆಚ್ಚುತ್ತದೆ. ಈಗ ನಟಿ ಪೂಜಾ ಲೋಕೇಶ್ ಅವರು ‘ಸೀತಾ ರಾಮ’ (Seetha Raama Serial) ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ರೀತು ಸಿಂಗ್, ಮುಖ್ಯಮಂತ್ರಿ ಚಂದ್ರು ಮೊದಲಾದವರು ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ನಿರ್ವಹಿಸುತ್ತಿರುವ ಭಾರ್ಗವಿ ಹೆಸರಿನ ವಿಲನ್ ಪಾತ್ರ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಪೂಜಾ ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.
‘ಸೀತಾ ರಾಮ’ ಧಾರಾವಾಹಿಯಲ್ಲಿ ಪೂಜಾ ಲೋಕೇಶ್ ಅವರು ಎರಡು ಶೇಡ್ನ ಪಾತ್ರ ಮಾಡುತ್ತಿದ್ದಾರೆ. ಒಮ್ಮೆ ಕೆಟ್ಟವರಾಗಿ ಕಾಣಿಸುವ ಅವರು ಮತ್ತೊಮ್ಮೆ ಒಳ್ಳೆಯವರಂತೆ ನಟಿಸುತ್ತಾರೆ. ಇದಕ್ಕೆ ಅವರು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. ‘ಎಲ್ಲಾ ಪಾತ್ರಗಳಂತೆ ಇದು ಮೂಡಿ ಬರುವುದು ಬೇಡ ಎನ್ನುವ ಕಾರಣಕ್ಕೆ ನಾನು ಈ ಪಾತ್ರಕ್ಕಾಗಿ ಸಾಕಷ್ಟು ಹೋಂ ವರ್ಕ್ ಮಾಡಿಕೊಂಡಿದ್ದೇನೆ. ಎಲ್ಲೂ ಏರುಪೇರು ಆಗದಂತೆ ನೋಡಿಕೊಳ್ಳಬೇಕಿತ್ತು. ಕನ್ನಡದಲ್ಲಿ ಕಂಬ್ಯಾಕ್ ಧಾರಾವಾಹಿ. ನೆಗೆಟಿವ್ ಪಾತ್ರದಲ್ಲಿ ಜನರು ಹೇಗೆ ನನ್ನನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಇತ್ತು. ನೆಗೆಟಿವ್ ಪಾತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಭರ್ಜರಿ ಟಿಆರ್ಪಿ ಪಡೆದ ‘ಸೀತಾ ರಾಮ’ ಧಾರಾವಾಹಿ; ಯಾವ ಸೀರಿಯಲ್ಗೆ ಯಾವ ಸ್ಥಾನ?
ಪೂಜಾ ತಂದೆ ಲೋಕೇಶ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು. ಅವರ ತಾಯಿ ಗಿರಿಜಾ ಲೋಕೇಶ್ ಕೂಡ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಅನೇಕರು ಪೂಜಾ ನಟನೆಯನ್ನು ನೋಡಿ ತಂದೆ-ತಾಯಿಗೆ ಹೋಲಿಕೆ ಮಾಡುತ್ತಿದ್ದಾರೆ. ‘ಜನರು ಬರಮಾಡಿಕೊಂಡ ರೀತಿ ಖುಷಿ ನೀಡುತ್ತಿದೆ. ನನ್ನನ್ನು ಅನೇಕರು ನನ್ನ ತಂದೆ, ತಾಯಿಗೆ ಹೋಲಿಕೆ ಮಾಡುತ್ತಿದ್ದಾರೆ. ಇದಕ್ಕಿಂತ ಖುಷಿ ಇನ್ನೇನು ಬೇಕು? ನಾನು ಮಾಡುತ್ತಿರುವ ಭಾರ್ಗವಿ ಕ್ಯಾರೆಕ್ಟ್ನ ಹೇಟ್ ಮಾಡುವವರೂ ಇದ್ದಾರೆ. ನೆಗೆಟಿವ್ ಪಾತ್ರವನ್ನು ಜನರು ದ್ವೇಷಿಸಿದರೆ ನಾವು ಗೆದ್ದಂತೆ’ ಅನ್ನೋದು ಪೂಜಾ ಅಭಿಪ್ರಾಯ.
‘ಸೀತಾ ರಾಮ’ ಧಾರಾವಾಹಿ ಅದ್ದೂರಿಯಾಗಿ ಮೂಡಿಬರುತ್ತಿದೆ. ಈ ಧಾರಾವಾಹಿಯಲ್ಲಿ ನಟಿಸುತ್ತಿರುವುದಕ್ಕೆ ಅವರಿಗೆ ಖುಷಿ ಇದೆ. ‘ಜೀ ಕನ್ನಡ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಟೀಂ ವರ್ಕ್ ಇದು. ಎಲ್ಲಾ ಪಾತ್ರಕ್ಕೂ ಸರಿಯಾದವರ ಆಯ್ಕೆ ಆಗಿದೆ. ಗಗನ್, ವೈಷ್ಣವಿ, ಚಂದ್ರು ಎಲ್ಲರೂ ಒಳ್ಳೆಯ ರೀತಿಯಲ್ಲಿ ನಟಿಸುತ್ತಿದ್ದಾರೆ. ಇದು ನನ್ನ ಅದೃಷ್ಟ’ ಎಂದಿದ್ದಾರೆ ಪೂಜಾ.
‘ಪರಭಾಷೆಯಲ್ಲಿ ನಾನು ಅನೇಕ ಸಿನಿಮಾಗಳನ್ನು ಮಾಡಿದ್ದೆ. ಅಲ್ಲಿ ಮಾಡಿರೋದು ವಿಲನ್ ಪಾತ್ರಗಳೇ. ನೆಗೆಟಿವ್ ಪಾತ್ರಗಳಿಗೆ ಯಾವುದೇ ಸೀಮಾ ರೇಖೆ ಇಲ್ಲ. ಹೇಗೆ ಬೇಕಿದ್ದರೂ ಅದನ್ನು ಮಾಡಬಹುದು. ಕನ್ನಡದಲ್ಲಿ ನಾನು ಈ ರೀತಿ ಪಾತ್ರ ಮಾಡುತ್ತಿರುವುದು ಇದೇ ಮೊದಲು’ ಎಂದಿದ್ದಾರೆ ಅವರು.
ನೆಗೆಟಿವ್ ಪಾತ್ರವೋ ಅಥವಾ ಪಾಸಿಟಿವ್ ಪಾತ್ರವೋ ಅನ್ನೋದು ಪೂಜಾಗೆ ಮುಖ್ಯವಲ್ಲ. ಇದು ಅವರ ತಂದೆ-ತಾಯಿ ಹೇಳಿಕೊಟ್ಟ ಪಾಠ. ‘ನನಗೆ ಸಿಕ್ಕ ಪಾತ್ರ ಮತ್ತು ಆ ಪಾತ್ರವನ್ನು ಕಲಾವಿದರಿಗೆ ನಿರ್ವಹಿಸಲಾಗುತ್ತದೆ ಎಂಬುದು ಮುಖ್ಯವಾಗುತ್ತದೆ. ನನಗೆ ನನ್ನ ತಂದೆ-ತಾಯಿ ಚಿಕ್ಕ ವಯಸ್ಸಿನಿಂದ ಹೇಳಿಕೊಟ್ಟಿದ್ದು ಇದನ್ನೇ. ನಾನು ಪಾತ್ರಕ್ಕೆ ಅಟ್ಯಾಚ್ ಆಗಲ್ಲ. ಅದನ್ನು ಕೇವಲ ಪಾತ್ರದ ರೀತಿ ನೋಡುತ್ತೇನೆ. ಇದು ನನ್ನ ತಂದೆಯಿಂದ ನಾನು ಕಲಿತ ವಿಚಾರ’ ಎಂದಿದ್ದಾರೆ ಪೂಜಾ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ