ಎಲ್ಲ ವರ್ಗದ ಜನರಿಗೂ ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋನಲ್ಲಿ ಅವಕಾಶ ಸಿಗುತ್ತದೆ. ರಾಜಕಾರಣಿಗಳೂ ಇದಕ್ಕೆ ಹೊರತಾಗಿಲ್ಲ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವುದೇ ಇದಕ್ಕೆ ಸಾಕ್ಷಿ. ಸೋಶಿಯಲ್ ಮೀಡಿಯಾದಲ್ಲಿ ಪ್ರದೀಪ್ ಈಶ್ವರ್ ಅವರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಅವರು ವೇದಿಕೆಯಲ್ಲಿ ಮಾಡಿದ ಮಾತುಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತವೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada Season 10) ರಿಯಾಲಿಟಿ ಶೋನಲ್ಲೂ ಅದು ಮುಂದುವರಿದಿದೆ. ಎಂಟ್ರಿಯಾದ ಮೊದಲ ದಿನವೇ ಪ್ರದೀಪ್ ಈಶ್ವರ್ ಅವರು ಮೋಟಿವೇಷನಲ್ ಸ್ಪೀಚ್ ನೀಡಿದ್ದಾರೆ. ಅದರ ಪ್ರೋಮೋ ವೈರಲ್ ಆಗಿದೆ.
ಹೊಸ ತಲೆಮಾರಿನ ಯುವಜನತೆಯನ್ನು ಮೋಟಿವೇಟ್ ಮಾಡಲು ಪ್ರದೀಪ್ ಈಶ್ವರ್ ಪ್ರಯತ್ನಿಸುತ್ತಾರೆ. ಯುವಕ-ಯುವತಿಯರಿಗೆ ಜೀವನದ ಪಾಠ ಹೇಳಿಕೊಡಲು ಅವರು ಭಾಷಣಗಳನ್ನು ಮಾಡುತ್ತಾರೆ. ಶಾಸಕರಾದ ಬಳಿಕ ಅವರಿಗೆ ಭಾರಿ ಜನಪ್ರಿಯತೆ ಸಿಕ್ಕಿತು. ಟ್ರೋಲ್ ಪೇಜ್ಗಳಲ್ಲಿ ಪ್ರದೀಪ್ ಈಶ್ವರ್ ಅವರ ವಿಡಿಯೋಗಳು ಹರಿದಾಡಲು ಆರಂಭಿಸಿದವು. ಬಹುತೇಕರು ಅವರ ಮಾತುಗಳನ್ನು ಒಪ್ಪುತ್ತಾರೆ. ಅನೇಕ ವೇದಿಕೆಗಳಲ್ಲಿ ಪ್ರದೀಪ್ ಈಶ್ವರ್ ಹೇಳಿದ ಪಂಚಿಂಗ್ ಡೈಲಾಗ್ಗಳಿಗೆ ಚಪ್ಪಾಳೆ ಸಿಕ್ಕಿದೆ.
ಇದನ್ನೂ ಓದಿ: Pradeep Eshwar : ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ಗೆ ಹೋಗಿದ್ದು ಸರಿಯೇ?
ಪ್ರದೀಪ್ ಈಶ್ವರ್ ಅವರು ಒಂದು ದಿನ ತಡವಾಗಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ‘ನಾನು ನಿನ್ನೆಯೇ ಬರಬೇಕಾಗಿತ್ತು. ಸ್ಪರ್ಧಿಯಾಗಿ ಇಲ್ಲಿಗೆ ಬಂದಿದ್ದಕ್ಕೆ ನನಗೆ ಬಹಳ ಖುಷಿ ಆಯಿತು. ನಾವೆಲ್ಲ ಬೆಂಗಳೂರಿಗೆ ಸೋಲೋಕೆ ಬಂದವರು. ಗೆಲ್ಲುವುದು ನಮಗೆ ಕಾಂಪ್ಲಿಮೆಂಟರಿ’ ಎಂದು ಹೇಳುತ್ತಲೇ ಅವರು ಮೋಟಿವೇಷನ್ ಶುರು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಪ್ರೊಮೋಗೆ ಜನರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ ಈ ಶೋ ಉಚಿತವಾಗಿ 24 ಗಂಟೆಯೂ ಪ್ರಸಾರ ಆಗುತ್ತಿದೆ.
‘ಇಲ್ಲಿ ಏನಾಗುತ್ತಿದೆ ಅಂದರೆ, ಮೋಟಿವೇಟ್ ಮಾಡುವ ಪ್ರತಿಯೊಬ್ಬನೂ ಸಾಚಾ ಎಂದುಕೊಳ್ಳುತ್ತಿದ್ದಾನೆ. ಈ ಜನರೇಷನ್ ಅನ್ನು ನಾವು ಸರಿಯಾಗಿ ಮೋಟಿವೇಟ್ ಮಾಡುತ್ತಿಲ್ಲ. ತಪ್ಪಾಗಿ ಮೋಟಿವೇಟ್ ಮಾಡುತ್ತಿದ್ದೇವೆ. ಏಣಿ ಹತ್ತುವುದೇ ಕಷ್ಟ ಅಂತ ದೊಡ್ಡವರು ಹೇಳಿಕೊಡ್ತಾರೆ. ಹೇಗೋ ಏಣಿ ಹತ್ತುತ್ತೀಯ. ಆದರೆ ತುದಿಯಲ್ಲಿ ನಿಂತುಕೊಳ್ಳುವುದು ಇನ್ನೂ ಕಷ್ಟ ಅಂತ ಕೆಲವರು ಹೇಳುತ್ತಾರೆ. ನಮ್ಮ ಜನರೇಷನ್ಗೆ ಏಣಿಯೇ ಸಿಕ್ತಾ ಇಲ್ಲ ಬಾಸ್’ ಎಂದು ಪ್ರದೀಪ್ ಈಶ್ವರ್ ಹೇಳಿರುವುದು ಬಿಗ್ ಬಾಸ್ ಪೋಮೋದಲ್ಲಿ ಹೈಲೈಟ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.