ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಕಿರುತೆರೆಯ ಪ್ರೇಕ್ಷಕರನ್ನೂ ಕೂಡ ರಂಜಿಸಿದ್ದರು. ನಟನೆ, ಗಾಯನ, ಸಿನಿಮಾ ನಿರ್ಮಾಣ ಮಾತ್ರವಲ್ಲದೇ ಅವರು ನಿರೂಪಕನಾಗಿಯೂ ಫೇಮಸ್ ಆಗಿದ್ದರು. ‘ಕನ್ನಡದ ಕೋಟ್ಯಧಿಪತಿ’ (Kannadada Kotyadhipathi) ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ಅವರು ಕರುನಾಡಿನ ಮನೆಮನೆಯನ್ನು ತಲುಪುತ್ತಿದ್ದರು. ಆ ಶೋ ನಿರೂಪಣೆ ಮಾಡಿದ್ದಕ್ಕಾಗಿ ಪುನೀತ್ ರಾಜ್ಕುಮಾರ್ ಅವರಿಗೆ ಕೈತುಂಬ ಸಂಭಾವನೆ ಸಿಕ್ಕಿತ್ತು. ಆ ವಿಚಾರದ ಬಗ್ಗೆ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಅವರು ಮಾಹಿತಿ ನೀಡಿದ್ದಾರೆ. ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಿಂದ ಪುನೀತ್ ಅವರಿಗೆ ಬರೋಬ್ಬರಿ 8 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿತ್ತು ಎಂದು ಭಗವಾನ್ ತಿಳಿಸಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಪುನೀತ್ ಅವರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಮೈಸೂರಿನಲ್ಲಿ ಇರುವ ಶಕ್ತಿಧಾಮ (Shakthidhama) ಬಗ್ಗೆ ಅವರಿಗೆ ವಿಶೇಷ ಕಾಳಜಿ ಇತ್ತು. ತಮ್ಮ ಕೈಗೆ ಸಂಭಾವನೆ ರೂಪದಲ್ಲಿ ಬಂದ ಆ 8 ಕೋಟಿ ರೂಪಾಯಿಯನ್ನು ಮಕ್ಕಳ ಶಿಕ್ಷಣಕ್ಕಾಗಿ ಅಪ್ಪು ಮೀಸಲಿಟ್ಟರು. ಆ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ..
ಡಾ. ರಾಜ್ಕುಮಾರ್ ಕುಟುಂಬದ ಜೊತೆ ನಿರ್ದೇಶಕ ದೊರೆ-ಭಗವಾನ್ ಅವರಿಗೆ ಮೊದಲಿನಿಂದಲೂ ಒಡನಾಟ ಇದೆ. ಪುನೀತ್ ರಾಜ್ಕುಮಾರ್ ಅವರನ್ನು ಹತ್ತಿರದಿಂದ ಕಂಡಂತಹ ವ್ಯಕ್ತಿಗಳಲ್ಲಿ ಅವರು ಕೂಡ ಪ್ರಮುಖರು. ಟಿವಿ9ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಭಗವಾನ್ ಅವರು ಕೆಲವು ಮುಖ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಕ್ತಿಧಾಮದ ಮಕ್ಕಳ ಶಿಕ್ಷಣಕ್ಕಾಗಿ ಪುನೀತ್ ರಾಜ್ಕುಮಾರ್ ಅವರು ತಮ್ಮ 8 ಕೋಟಿ ರೂಪಾಯಿ ಸಂಭಾವನೆಯನ್ನು ಮೀಸಲಿಟ್ಟರು ಎಂಬ ವಿಚಾರವನ್ನು ಭಗವಾನ್ ತೆರೆದಿಟ್ಟಿದ್ದಾರೆ.
‘ಪುನೀತ್ಗೆ ಕನ್ನಡದ ಕೋಟ್ಯಧಿಪತಿ ಶೋನಿಂದ 8 ಕೋಟಿ ರೂಪಾಯಿ ಸಂಭಾವನೆ ಬಂತು. ಅದನ್ನು ಶಕ್ತಿಧಾಮಕ್ಕೆ ಟ್ರಾನ್ಸ್ಫರ್ ಮಾಡಿದ್ದಾರೆ. ಶಕ್ತಿಧಾಮದಲ್ಲಿ ನೂರಾರು ಮಕ್ಕಳು ಇದ್ದಾರೆ. ಎಲ್ಲರೂ ಬೇರೆ ಬೇರೆ ಶಾಲೆಗೆ ಹೋಗುತ್ತಾರೆ. ಮಕ್ಕಳಿಗಾಗಿ ಶಕ್ತಿಧಾಮದಲ್ಲಿಯೇ ಒಂದು ಶಾಲೆಯನ್ನು ಕಟ್ಟಿಸಬಹುದಲ್ಲ ಎಂಬ ಆಲೋಚನೆ ಅವರಿಗೆ ಮೂಡಿತು. ಕೂಡಲೇ ಮ್ಯಾನೇಜಿಂಗ್ ಟ್ರಸ್ಟಿ ಬಳಿ ಮಾತನಾಡಿದರು. ಶಾಲೆಗೆ ಎಷ್ಟು ಹಣ ಬೇಕಾಗುತ್ತದೆ ಎಂಬ ವಿಚಾರ ತಿಳಿದುಕೊಂಡು ಶಾಲೆ ಸ್ಥಾಪನೆಯ ಕೆಲಸ ಶುರುಮಾಡಿ ಅಂತ ಹೇಳಿದರು’ ಎಂದಿದ್ದಾರೆ ನಿರ್ದೇಶಕ ಭಗವಾನ್.
ಶಾಲೆ ಶುರು ಮಾಡುವುದಕ್ಕೆ ಪುನೀತ್ ರಾಜ್ಕುಮಾರ್ ಒಂದು ಕಂಡೀಷನ್ ಕೂಡ ಹಾಕಿದ್ದರು. ‘ಇದು ಬರೀ ಹೆಣ್ಣುಮಕ್ಕಳ ಶಾಲೆ ಆಗಿರಬೇಕು. ನಮ್ಮ ಶಕ್ತಿಧಾಮದ ಮಕ್ಕಳು ಇಲ್ಲೇ ಓದಬೇಕು. ಹೊರಗಡೆಯಿಂದ ಬರುವ ಬಡ ಹೆಣ್ಣುಮಕ್ಕಳಿಗೂ ಪ್ರವೇಶ ನೀಡಬೇಕು. ಯಾರಿಂದಲೂ ಫೀಸ್ ಮತ್ತು ಡೊನೇಷನ್ ಪಡೆಯಬಾರದು. ಎಲ್ಲ ಮಕ್ಕಳಿಗೆ ಸಮವಸ್ತ್ರವನ್ನು ನಾನೇ ಒದಗಿಸುತ್ತೇನೆ. ಈ ಷರತ್ತುಗಳಿಗೆ ಒಪ್ಪುವುದಾದರೆ ನೀವು ಶಾಲೆ ಸ್ಥಾಪನೆಯ ಕೆಲಸ ಶುರುಮಾಡಿ’ ಎಂದು ಅಪ್ಪು ಹೇಳಿದ್ದರು ಎಂಬ ವಿಚಾರವನ್ನು ಭಗವಾನ್ ವಿವರಿಸಿದ್ದಾರೆ.
ಶಾಲೆ ನಿರ್ಮಿಸಬೇಕು ಎಂದು ಪುನೀತ್ ಕಂಡ ಕನಸನ್ನು ಇಂದು ಅವರ ಕುಟುಂಬದವರು ನನಸು ಮಾಡುತ್ತಿದ್ದಾರೆ. ಅನುಮತಿಗಾಗಿ ಸರ್ಕಾರದ ಬಳಿ ಮನವಿಯನ್ನೂ ಸಲ್ಲಿಸಿದ್ದಾರೆ. ಸರ್ಕಾರದ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆ ಶಾಲೆಗೆ ಪುನೀತ್ ರಾಜ್ಕುಮಾರ್ ಅವರ ಹೆಸರನ್ನೇ ಇಡಲಾಗುವುದು ಎಂಬ ಮಾಹಿತಿಯನ್ನು ಕೂಡ ಭಗವಾನ್ ತಿಳಿಸಿದ್ದಾರೆ. ‘ಅಪ್ಪು ನಮ್ಮ ಜೊತೆ ಇಲ್ಲ. ಆದರೆ ಅವರು ಮಾಡಿದ ಕೆಲಸ ಶಾಶ್ವತವಾಗಿ ಇರುತ್ತದೆ. ಅವರು ನಮ್ಮ ನಾಡಿನಲ್ಲಿ ಮತ್ತೆ ಹುಟ್ಟಿಬರಲಿ’ ಎಂದು ಭಗವಾನ್ ಹೇಳಿದ್ದಾರೆ.
ಇದನ್ನೂ ಓದಿ:
ಕೊಪ್ಪಳದಲ್ಲಿ ಪುನೀತ್ ರಾಜ್ಕುಮಾರ್ ಪುತ್ಥಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ ಅಭಿಮಾನಿಗಳು
ಸೈನಿಕನ ಗೆಟಪ್ನಲ್ಲಿ ಆಹಾ ಎಷ್ಟು ಚಂದ ಪುನೀತ್; ಇಲ್ಲಿವೆ ‘ಜೇಮ್ಸ್’ ಸಿನಿಮಾದ ಫೋಟೋಗಳು