ಕಾಮಿಡಿ ಕಿಲಾಡಿಗಳು ಶೋನಿಂದ ರಕ್ಷಿತಾ ಹೊರಗೆ: ಕಾರಣ ಇಲ್ಲಿದೆ
Rakshitha Prem: ‘ಕಾಮಿಡಿ ಕಿಲಾಡಿಗಳು’ ಶೋಗೆ ರಕ್ಷಿತಾ ಬದಲು ತಾರಾ ಎಂಟ್ರಿ ಕೊಟ್ಟಿದ್ದಾರೆ. ಆದರೆ ರಕ್ಷಿತಾ ಪ್ರೇಮ್ ಅವರು ಶೋ ಬಿಟ್ಟಿದ್ದೇಕೆ ಎಂಬ ಚರ್ಚೆ ಸಹ ನಡೆದಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸ್ವತಃ ರಕ್ಷಿತಾ ಪ್ರೇಮ್, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೆ ಜೀ ಕನ್ನಡ (Zee Kannada) ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಶೋನ ಹೊಸ ಪ್ರೋಮೋ ಬಿಡುಗಡೆ ಆಯ್ತು. ಪ್ರೋಮೋನಲ್ಲಿ ಯೋಗರಾಜ್ ಭಟ್, ಜಗ್ಗೇಶ್ ಅವರ ಜೊತೆಗೆ ನಟಿ ತಾರಾ ಸಹ ಕಾಣಿಸಿಕೊಂಡರು. ಕಳೆದ ಕೆಲವಾರು ವರ್ಷಗಳಿಂದಲೂ ಕಾಮಿಡಿ ಕಿಲಾಡಿಗಳು ಶೋಗೆ ನಟಿ ರಕ್ಷಿತಾ ಪ್ರೇಮ್ ಜಡ್ಜ್ ಆಗಿದ್ದರು. ಆದರೆ ಈಗ ಹಠಾತ್ತನೆ ಅವರ ಸ್ಥಾನಕ್ಕೆ ತಾರಾ ಬಂದಿರುವುದು ಅಭಿಮಾನಿಗಳಿಗೆ ಆಶ್ಚರ್ಯ ತಂದಿತ್ತು. ರಕ್ಷಿತಾ ಅವರು ‘ಕಾಮಿಡಿ ಕಿಲಾಡಿಗಳು’ ಶೋ ಬಿಟ್ಟಿದ್ದೇಕೆ ಎಂಬ ಚರ್ಚೆ ಸಹ ನಡೆದಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸ್ವತಃ ರಕ್ಷಿತಾ ಪ್ರೇಮ್, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿರುವ ರಕ್ಷಿತಾ ಪ್ರೇಮ್, ‘ಸುದ್ದಿ ಹಬ್ಬಿಸುತ್ತಿರುವವರ ಹಾಗೂ ನನ್ನ ಟ್ಯಾಗ್ ಮಾಡಿ ನೀವೇಕೆ ಒಂದು ನಿರ್ದಿಷ್ಟ ಚಾನೆಲ್ನ, ಒಂದು ನಿರ್ದಿಷ್ಟ ಶೋನಲ್ಲಿ ಇಲ್ಲ ಎಂದು ಕೇಳುತ್ತಿರುವವರ ಗಮನಕ್ಕಾಗಿ ಈ ಸುದ್ದಿ ಹಂಚಿಕೊಳ್ಳುತ್ತಿದ್ದೇನೆ. ಕಳೆದ ಒಂಬತ್ತು ವರ್ಷಗಳಿಂದಲೂ ಒಂದು ನಿರ್ದಿಷ್ಟ ಚಾನೆಲ್ನ, ನಿರ್ದಿಷ್ಟ ಶೋಗಳ ಭಾಗವಾಗಿದ್ದೆ, ಅದಕ್ಕಾಗಿ ಕೆಲಸ ಮಾಡಿದ್ದೆ. ಆದರೆ ನಾನು ಈಗ ಅದರ ಭಾಗವಲ್ಲ’ ಎಂದಿದ್ದಾರೆ.
ಇದನ್ನೂ ಓದಿ:ಅಶ್ವಿನಿ-ಜಾನ್ವಿ ಬಳಿಕ ರಕ್ಷಿತಾ ಶೆಟ್ಟಿ ಮೇಲೆ ರಾಶಿಕಾ ಕಣ್ಣು; ಜಗಳವೋ ಜಗಳ
‘ಜೀವನ ಬದಲಾಗಬೇಕು, ನಾನು ಸಹ ಹೊಸ ಸವಾಲುಗಳನ್ನು ಎದುರುಗೊಳ್ಳಬೇಕು, ಹೊಸದೇನನ್ನಾದರೂ ಪ್ರಯತ್ನಿಸಬೇಕು. ಹಾಗಾಗಿ ಇನ್ನು ಮುಂದೆ ನಾನು ಆ ಡ್ಯಾನ್ಸ್ ಶೋನ ಭಾಗವೂ ಸಹ ಆಗಿರುವುದಿಲ್ಲ. ಆ ಚಾನೆಲ್ನ ಭಾಗವೂ ಆಗಿರುವುದಿಲ್ಲ. ಇಷ್ಟು ವರ್ಷ ಜನರು ತೋರಿಸಿರುವ ಪ್ರೀತಿಗೆ ನಾನು ಋಣಿ. ಆದರೆ ಈಗ ಮುಂದುವರೆಯುವುದೇ ಸರಿಯಾದ ಆಯ್ಕೆ, ನಾನು ಮತ್ತೆ ನಿಮ್ಮ ಮುಂದೆ ಬಂದಾಗ ಅದೇ ಪ್ರೀತಿಯನ್ನು ನನ್ನ ಮೇಲೆ ತೋರಿಸುತ್ತೀರಿ ಎಂಬ ವಿಶ್ವಾಸ ಇದೆ’ ಎಂದು ರಕ್ಷಿತಾ ಹೇಳಿದ್ದಾರೆ.
ರಕ್ಷಿತಾ 2017 ರಿಂದಲೂ ಕಾಮಿಡಿ ಕಿಲಾಡಿಗಳು ಶೋನ ಜಡ್ಜ್ ಆಗಿದ್ದರು. ಅದೇ ವರ್ಷದಿಂದಲೇ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನ ಜಡ್ಜ್ ಸಹ ಆಗಿದ್ದರು. ‘ಕಾಮಿಡಿ ಕಿಲಾಡಿಗಳು’ ಶೋನ ಒಟ್ಟು ಐದು ಸೀಸನ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ನ ಆರು ಸೀಸನ್ಗೆ ರಕ್ಷಿತಾ ಜಡ್ಜ್ ಆಗಿದ್ದರು. ಎಂಟು ವರ್ಷಗಳ ಬಳಿಕ ಈಗ ಎರಡೂ ಶೋಗಳಿಂದ ರಕ್ಷಿತಾ ಹೊರ ಬಂದಿದ್ದಾರೆ. ಆದರೆ ತಮ್ಮ ಪೋಸ್ಟ್ನಲ್ಲಿ ರಕ್ಷಿತಾ ಅವರು ಎರಡೂ ಶೋ ಹಾಗೂ ಚಾನೆಲ್ನ ಹೆಸರು ಸಹ ಉಲ್ಲೇಖಿಸದೇ ಇರುವುದು ರಕ್ಷಿತಾ ಅವರು ಅಸಮಾಧಾನದಿಂದಲೇ ಶೋನಿಂದ ಹೊರಗೆ ಬಂದಿದ್ದಾರೆ ಎಂಬ ಸುಳಿವು ನೀಡುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Sat, 25 October 25




