BBK 12: ಬಂದ ದಾರಿಯಲ್ಲೇ ವಾಪಸ್ ಹೋದ ರಕ್ಷಿತಾ ಶೆಟ್ಟಿ: ಬಿಗ್ ಬಾಸ್ ದೊಡ್ಡ ಶಾಕ್

Rakshitha Shetty Eliminated: ಒಂದು ದಿನ ಕೂಡ ಪೂರ್ತಿಯಾಗಿ ಬಿಗ್ ಬಾಸ್ ಮನೆಯಲ್ಲಿ ಇರುವ ಅವಕಾಶ ರಕ್ಷಿತಾ ಶೆಟ್ಟಿಗೆ ಸಿಗಲಿಲ್ಲ. ಬಂದ ದಿನವೇ ಎಲಿಮಿನೇಟ್ ಆದರೂ ಕೂಡ ರಕ್ಷಿತಾ ಶೆಟ್ಟಿ ಅವರು ತುಂಬಾ ಪಾಸಿಟಿವ್ ಆಗಿ ಮಾತನಾಡಿದರು. ತಮ್ಮ ಪಾಲಿಗೆ ಬಂದಿದ್ದನ್ನು ಒಪ್ಪಿಕೊಂಡು ಅವರು ಬಿಗ್ ಬಾಸ್ ಮುಖ್ಯದ್ವಾರದಿಂದ ಹೊರಗೆ ನಡೆದರು.

BBK 12: ಬಂದ ದಾರಿಯಲ್ಲೇ ವಾಪಸ್ ಹೋದ ರಕ್ಷಿತಾ ಶೆಟ್ಟಿ: ಬಿಗ್ ಬಾಸ್ ದೊಡ್ಡ ಶಾಕ್
Rakshitha Shetty

Updated on: Sep 29, 2025 | 10:25 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋ ಅದ್ದೂರಿಯಾಗಿ ಆರಂಭ ಆಗಿದೆ. ಆದರೆ ಆರಂಭದಲ್ಲೇ ಬಿಗ್ ಬಾಸ್ ಎಲಿಮಿನೇಷನ್ ಮೂಲಕ ಶಾಕ್ ನೀಡಿದ್ದಾರೆ. ಮೊದಲ ದಿನ, ಅಂದರೆ, ಸೆಪ್ಟೆಂಬರ್ 28ರಂದು ಒಟ್ಟು 19 ಜನರು ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟಿದ್ದರು. ಆದರೆ ಆ ದಿನವೇ ಒಬ್ಬರನ್ನು ಎಲಿಮಿನೇಟ್ ಮಾಡಲಾಗಿದೆ. ತುಳುನಾಡಿನಿಂದ ಬಂದ ಯೂಟ್ಯೂಬರ್ ರಕ್ಷಿತಾ ಶೆಟ್ಟಿ (Rakshitha Shetty) ಅವರಿಗೆ ಗೇಟ್​ ಪಾಸ್ ನೀಡಲಾಗಿದೆ. ಇದರಿಂದ ಎಲ್ಲರಿಗೂ ಶಾಕ್ ಆಗಿದೆ. ಮೊದಲ ದಿನವೇ ಬಿಗ್ ಬಾಸ್ ಎಲಿಮಿನೇಷನ್ ನಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

6 ಸ್ಪರ್ಧಿಗಳು ಒಂಟಿಗಳಾಗಿ, 5 ಸ್ಪರ್ಧಿಗಳು ಜಂಟಿಗಳಾಗಿ ಹಾಗೂ 3 ಸ್ಪರ್ಧಿಗಳು ಅತಂತ್ರರಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದರು. ರಕ್ಷಿತಾ ಶೆಟ್ಟಿ, ಮಾಳು ನಿಪನಾಳ, ಸ್ಪಂದನಾ ಅವರು ಅತಂತ್ರ ಸ್ಥಿತಿಯಲ್ಲಿ ಇದ್ದರು. ಆ ಮೂವರಲ್ಲಿ ಇಬ್ಬರನ್ನು ಉಳಿಸಬೇಕು, ಒಬ್ಬರನ್ನು ಹೊರಗೆ ಕಳಿಸಬೇಕು ಎಂಬ ಪರಿಸ್ಥಿತಿ ನಿರ್ಮಾಣ ಆಯಿತು. ಈ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು 6 ಒಂಟಿಗಳಿಗೆ ನೀಡಲಾಯಿತು.

ಆರು ಒಂಟಿಗಳ ಎದುರು ನಿಂತು ರಕ್ಷಿತಾ ಶೆಟ್ಟಿ, ಮಾಳು ನಿಪನಾಳ ಹಾಗೂ ಸ್ಪಂದನಾ ಅವರು ತಮ್ಮ ಸಾಮರ್ಥ್ಯದ ಬಗ್ಗೆ ಮನವೊಲಿಸಲು ಪ್ರಯತ್ನಿಸಿದರು. ‘ನಾನು ಮಿಡ್ಲ್ ಕ್ಲಾಸ್ ಹುಡುಗ. 2-3 ದಿನ ಆದರೂ ಈ ಮನೆಯಲ್ಲಿ ಇರಬೇಕು ಎಂಬ ಆಸೆ ಇದೆ. ಉಳಿಸೋದು ಬಿಡೋದು ನಿಮ್ಮ ಕೈಯಲ್ಲಿದೆ’ ಎಂದು ಮಾಳು ನಿಪನಾಳ ಹೇಳಿದರು.

‘ಸ್ಟಾಂಗ್ ಮನಸ್ಥಿತಿಯ ಹುಡುಗಿ ನಾನು. ಈ ಜರ್ನಿ ನನಗೆ ಬಹಳ ಮುಖ್ಯ. ನನನ್ನು ಸೆಲೆಕ್ಟ್ ಮಾಡಿ, ಉಳಿಸಿಕೊಳ್ಳಿ’ ಎಂದು ಸ್ಪಂದನಾ ಅವರು ಮನವಿ ಮಾಡಿದರು. ‘ಇವತ್ತು ನಿಮ್ಮನ್ನು ಹೇಗೆ ಮನವೊಲಿಸಲು ಅಂತ ಗೊತ್ತಾಗುತ್ತಿಲ್ಲ. ಈಗ ನನಗೆ ಅವಕಾಶ ಸಿಕ್ಕಿದೆ. ತುಳುನಾಡಲ್ಲಿ ನಾನು ಸ್ವಲ್ಪ ಜನರಿಗೆ ಗೊತ್ತು. ಬಿಗ್ ಬಾಸ್ ಅವಕಾಶ ಸಿಕ್ಕರೆ ಹೆಚ್ಚಿನ ಜನರಿಗೆ ಕನೆಕ್ಟ್ ಆಗಬಹುದು. ಬೆಳೆದಿದ್ದು ತುಳು ವಾತಾವರಣದಲ್ಲಿ ಹಾಗೂ ಮುಂಬೈನಲ್ಲಿ. ಇಲ್ಲಿ ಇದ್ದರೆ ಕನ್ನಡ ಕಲಿಯುತ್ತೇನೆ’ ಎಂದು ರಕ್ಷಿತಾ ಶೆಟ್ಟಿ ಅವರು ಹೇಳಿದರು.

ಅದನ್ನೂ ಓದಿ: ಆರಂಭದಲ್ಲೇ ಬಿಗ್ ಬಾಸ್ ಮನೆ ಮಂದಿಯ ಕೆಂಗಣ್ಣಿಗೆ ಗುರಿಯಾದ ಮಲ್ಲಮ್ಮ

‘ಮಾಳು ಮತ್ತು ಸ್ಪಂದನಾ ಇರಬೇಕು. ರಕ್ಷಿತಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ತಪ್ಪು ತಪ್ಪು ಕನ್ನಡ ಮಾತನಾಡಿ ಫೇಮಸ್ ಆಗಿದ್ದಾಳೆ. ಅವಳಿಗೆ ಬೇರೆ ಕೆಲಸ ಇದೆ’ ಎಂದು ಅಭಿಪ್ರಾಯ ಒಂಟಿಗಳಿಂದ ಕೇಳಿಬಂತು. ಅಂತಿಮವಾಗಿ ಅಶ್ವಿನಿ ಗೌಡ ಅವರು ಎಲ್ಲರ ಪರವಾಗಿ ನಿರ್ಧಾರ ಘೋಷಿಸಿದರು. ಮಾಳು ನಿಪನಾಳ ಮತ್ತು ಸ್ಪಂದನಾ ಅವರನ್ನು ಉಳಿಸಿಕೊಂಡು ರಕ್ಷಿತಾ ಶೆಟ್ಟಿಗೆ ಗೇಪ್​ ಪಾಸ್ ನೀಡಲಾಯಿತು. ಹೆಚ್ಚೇನೂ ಎಮೋಷನಲ್ ಆಗದೇ ರಕ್ಷಿತಾ ಶೆಟ್ಟಿ ಅವರು ಮುಖ್ಯದ್ವಾರದಿಂದ ಹೊರನಡೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.