
ಯೂಟ್ಯೂಬರ್ ರಕ್ಷಿತಾ ಶೆಟ್ಟಿ (Rakshitha Shetty) ಅವರು ಬಿಗ್ ಬಾಸ್ ಮನೆಯಲ್ಲಿ ಡಿಫರೆಂಟ್ ಆಗಿ ಗುರುತಿಸಿಕೊಂಡಿದ್ದಾರೆ. ಆರಂಭದಿಂದಲೂ ರಕ್ಷಿತಾ ಶೆಟ್ಟಿಯನ್ನು ಅಶ್ವಿನಿ ಗೌಡ ಅವರು ಟಾರ್ಗೆಟ್ ಮಾಡಿದ್ದರು. ಆದರೆ ಈಗ ಅಶ್ವಿನಿ ಗೌಡ ಎದುರಿನಲ್ಲೇ ರಕ್ಷಿತಾ ಶೆಟ್ಟಿ ಅವರು ಕಿಚ್ಚನ ಚಪ್ಪಾಳೆ ಪಡೆದಿದ್ದಾರೆ. ಅದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಅಚ್ಚರಿ ಏನೆಂದರೆ, ತಮ್ಮ ವಿರುದ್ಧ ಮೊದಲಿನಿಂದಲೂ ಕುತಂತ್ರ ಮಾಡಿದ ಅಶ್ವಿನಿ ಗೌಡ (Ashwini Gowda) ಮೇಲೂ ರಕ್ಷಿತಾ ಶೆಟ್ಟಿ ಅವರು ಮಾನವೀಯತೆ ತೋರಿಸಿದ್ದಾರೆ. ಅದೇ ಕಾರಣಕ್ಕಾಗಿ ಅವರಿಗೆ ಕಿಚ್ಚ ಸುದೀಪ್ ಅವರಿಂದ ಚಪ್ಪಾಳೆ ಸಿಕ್ಕಿದೆ.
ವಾರ ಪೂರ್ತಿ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಜಗಳಗಳು ನಡೆದಿದ್ದವು. ಅಶ್ವಿನಿ ಗೌಡ ಅವರು ಸಿಕ್ಕಾಪಟ್ಟೆ ಗರಂ ಆಗಿದ್ದರು. ತಮಗೆ ಕೆಲವರು ಏಕವಚನದಲ್ಲಿ ಮಾತನಾಡಿಸುತ್ತಾರೆ ಎಂಬ ಕಾರಣಕ್ಕೆ ಅವರು ಉಪವಾಸ ಮಾಡಿದ್ದರು. ಆ ಎಲ್ಲ ವಿಚಾರಗಳನ್ನು ಇಟ್ಟುಕೊಂಡು ಕಿಚ್ಚ ಸುದೀಪ್ ಅವರು ವೀಕೆಂಡ್ ಸಂಚಿಕೆಯಲ್ಲಿ ಮಾತನಾಡಿದರು. ಈ ನಡುವೆ ರಕ್ಷಿತಾ ಶೆಟ್ಟಿಗೆ ಮೆಚ್ಚುಗೆ ಸೂಚಿಸಿದರು.
‘ಹೋದವಾರ ನಾನು ಕೆಲವರಿಗೆ ಬೈಯ್ದಿದ್ದೆ. ಅದಕ್ಕಿಂತಲೂ ಹೆಚ್ಚಾಗಿ ಅವರು ಹೋಗುತ್ತಿರುವ ಹಾದಿಯಲ್ಲಿ ಅವರೇ ಅವರಿಗೆ ಮುಳುವಾಗುತ್ತಿದ್ದಾರೆ ಎಂಬುದು ನಮಗೆ ಗೊತ್ತಾದಾಗ ನಾವು ಕ್ಲಾಸ್ ತೆಗೆದುಕೊಳ್ಳುವುದು ಯಾಕೆ ಎಂದರೆ, ತುಂಬ ಚೆನ್ನಾಗಿ ಆಡುತ್ತಿದ್ದೀರಿ.. ಹಾಳಾಗಬೇಡಿ ಅನ್ನೋದಕ್ಕೆ. ತಕ್ಷಣ ಆಟ ಬದಲಾಯಿಸಿಕೊಂಡು, ತಮ್ಮ ಹಿಂದಿನ ವ್ಯಕ್ತಿತ್ವಕ್ಕೆ ಹೋಗಿ, ತುಂಬಾ ಚೆನ್ನಾಗಿ ಆಟ ಆಡಿ, ತಿದ್ದಿಕೊಂಡು, ಮಾನವೀಯತೆ ತೋರಿಸಿ, ಬೈಯಿಸಿಕೊಂಡವರಿಂದಲೇ ಉತ್ತಮ ಅನಿಸಿಕೊಂಡ ರಕ್ಷಿತಾ ಅವರೇ ಈ ವಾರದ ಕಿಚ್ಚನ ಚಪ್ಪಾಳೆ ನಿಮಗೆ’ ಎಂದು ಸುದೀಪ್ ಹೇಳಿದರು.
‘ನಿಮಗೂ ಅಶ್ವಿನಿ ಅವರಿಗೂ ಎಷ್ಟೇ ಕಿತ್ತಾಟ ಆಗಿದ್ದರೂ ಕೂಡ ಅವರು ಉಪವಾಸ ಮಾಡಿದಾಗ ನೀವು ತೋರಿಸಿದ ಕಾಳಜಿ ಒಳ್ಳೆಯದು. ಅಶ್ವಿನಿ ಗೌಡ ಸಲುವಾಗಿ ನೀವು ಇಷ್ಟೆಲ್ಲ ಮಾಡಿದರೂ ಕೂಡ ಅದನ್ನು ಅಶ್ವಿನಿ ಎದುರು ಹೋಗಿ ನೀವು ಹೇಳಿಕೊಳ್ಳಲಿಲ್ಲ’ ಎಂದು ರಕ್ಷಿತಾ ಶೆಟ್ಟಿ ಅವರನ್ನು ಸುದೀಪ್ ಹೊಗಳಿದರು. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಈವರೆಗೂ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ರಘು, ಧನುಷ್ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.
ಇದನ್ನೂ ಓದಿ: ಅವರ ಮಾನ ಕಾಪಾಡಲು ನೀವ್ಯಾರು: ಅಶ್ವಿನಿಗೆ ಸುದೀಪ್ ನೇರ ಪ್ರಶ್ನೆ
ಈ ವಾರ ಅಶ್ವಿನಿ ಗೌಡ ಅವರಿಗೆ ತುಂಬಾ ಕರಾಳವಾಗಿತ್ತು. ಪದೇಪದೇ ಜಗಳ ಆಯಿತು. ಅಲ್ಲದೇ ಎರಡನೇ ಬಾರಿ ಕಳಪೆ ಪಡೆದು ಅವರು ಜೈಲು ಸೇರಿದರು. ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡರು. ಮುಂದಿನ ದಿನಗಳಲ್ಲಿ ಅಶ್ವಿನಿ ಗೌಡ ಅವರು ತಮ್ಮ ಆಟದಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕಿದೆ. ಇಲ್ಲದಿದ್ದರೆ ಅವರ ಇಮೇಜ್ ಇನ್ನಷ್ಟು ಹಾಳಾಗುವ ಸಾಧ್ಯತೆ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:55 am, Sun, 23 November 25