‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡದಾಗಿ ಫೈಟ್ ನಡೆದಿದೆ ಎಂದು ಹೇಳಲಾಗುತ್ತಿದೆ. ಇದು ಕೇವಲ ಮಾತಿನ ಫೈಟ್ ಅಲ್ಲ, ಕೈಕೈ ಮಿಲಾಯಿಸಿ ನಡೆದ ಕುಸ್ತಿ. ಈ ಕಾರಣದಿಂದಲೇ ರಂಜಿತ್ ಹಾಗೂ ಜಗದೀಶ್ ಅವರು ದೊಡ್ಮನೆಯಿಂದ ಔಟ್ ಆಗಿದ್ದಾರೆ ಎಂದು ವರದಿ ಹರಿದಾಡಿದೆ. ಈ ಫೈಟ್ನಿಂದ ದೊಡ್ಮನೆ ಪ್ರಕ್ಷುಬ್ದವಾಗಿದೆ ಎಂದು ಹೇಳಲಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.
‘ಬಿಗ್ ಬಾಸ್’ನಲ್ಲಿ ವಾತಾವರಣ ಹದಗೆಟ್ಟಿದೆ. ಅಕ್ಟೋಬರ್ 17ರ ಎಪಿಸೋಡ್ನಲ್ಲಿ ಎಲ್ಲರೂ ಜಗದೀಶ್ ವಿರುದ್ಧ ಒಂದಾಗಿದ್ದರು. ಇದರಿಂದ ಸಿಡುಕುತ್ತಿದ್ದ ಜಗದೀಶ್ ಬಿಗ್ ಬಾಸ್ ವಿರುದ್ಧವೇ ಅವಾಚ್ಯ ಶಬ್ದ ಬಳಕೆ ಮಾಡುತ್ತಿದ್ದರು. ಇನ್ನು, ರಂಜಿತ್ ಅವರು ‘ಹೀಗೆ ಮುಂದುವರಿದರೆ ಜಗದೀಶ್ ಅವರ ಎದಮೇಲೆ ಕಾಲಿಟ್ಟು ಹೋಗೋತ್ತೇನೆ’ ಎಂದು ಎಚ್ಚರಿಕೆ ನೀಡಿದ್ದರು. ಈಗ ಹಾಗೆಯೇ ಆಯಿತೇ ಎನ್ನುವ ಪ್ರಶ್ನೆ ಮೂಡಿದೆ.
ಕೆಲವು ವರದಿಗಳ ಪ್ರಕಾರ ದೊಡ್ಮನೆಯಲ್ಲಿ ಜಗದೀಶ್ ಹಾಗೂ ರಂಜಿತ್ ಮಧ್ಯೆ ಫೈಟ್ ನಡೆದಿದೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ನಿಯಮಗಳ ಪ್ರಕಾರ ಮನೆಯಲ್ಲಿ ಫೈಟ್ ಆದರೆ ಅದರ ಭಾಗಿದಾರರನ್ನು ನೇರವಾಗಿ ಹೊರಹಾಕಲಾಗುತ್ತದೆ. ಈ ಮೊದಲು ಹುಚ್ಚ ವೆಂಕಟ್ ಅವರು ಈ ರೀತಿ ಫೈಟ್ ಮಾಡಿಕೊಂಡು ಹೊರ ಹೋಗಿದ್ದರು. ಈಗ ಜಗದೀಶ್ ಹಾಗೂ ರಂಜಿತ್ ಬಡಿದಾಡಿಕೊಂಡು ಹೊರ ಹೋದರು ಎನ್ನಲಾಗಿದೆ. ಕೆಲವು ಕಡೆಗಳಲ್ಲಿ ಜಗದೀಶ್ ಮಾತ್ರ ಹೊರ ಹೋಗಿದ್ದಾರೆ ಎಂದು ವರದಿ ಆಗಿದೆ.
‘ಬಿಗ್ ಬಾಸ್’ ಹೊಸ ಪ್ರೋಮೋದಲ್ಲಿ ಸ್ವತಃ ಬಿಗ್ ಬಾಸ್ ಅವರೇ ಕೋಪ ಮಾಡಿಕೊಂಡಿದ್ದರು. ಸ್ಪರ್ಧಿಗಳ ಮಿತಿ ಮೀರಿದ ವರ್ತನೆಯಿಂದ ಕುಪಿತಗೊಂಡು ಸಿಟ್ಟಲ್ಲಿ ಕೂಗಾಡಿದ್ದರು. ಈಗ ಇದು ಮತ್ತೊಂದು ಹಂತ ತಲುಪಿದೆ. ಈ ಬಗ್ಗೆ ಬಿಗ್ ಬಾಸ್ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇದನ್ನೂ ಓದಿ: ದೊಡ್ಮನೆಯಿಂದ ಹೊರ ಬಂದ ಜಗದೀಶ್? ಬಿಗ್ ಬಾಸ್ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದಕ್ಕೆ ಶಿಕ್ಷೆ?
‘ಬಿಗ್ ಬಾಸ್ ಕನ್ನಡ ಸೀಸನ್’ನಲ್ಲಿ 16 ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ನಡೆದಿದೆ. ಜಗದೀಶ್ ಹಾಗೂ ರಂಜಿತ್ ಹೊರ ಹೋಗಿದ್ದು ನಿಜವೇ ಆದಲ್ಲಿ ಈ ಸಂಖ್ಯೆ 14ಕ್ಕೆ ಇಳಿಕೆ ಆದಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:21 pm, Wed, 16 October 24