ವಂಚನೆ ಆರೋಪ: ಸ್ಪಷ್ಟನೆ ನೀಡಿದ ನಟ ರವಿಕಿರಣ್
Ravikiran: ಟೆಲಿವಿಷನ್ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯದರ್ಶಿಯಾಗಿದ್ದ ನಟ ರವಿಕಿರಣ್ ಅವ್ಯವಹಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ತಮ್ಮ ಮೇಲಿನ ಆರೋಪಗಳಿಗೆ ರವಿಕಿರಣ್ ಸ್ಪಷ್ಟನೆ ನೀಡಿದ್ದಾರೆ.
ಟೆಲಿವಿಷನ್ (television) ಕಲ್ಚರಲ್ ಆಂಡ್ ಸ್ಪೋರ್ಟ್ಸ್ ಕ್ಲಬ್ನ ಕಾರ್ಯದರ್ಶಿ ಆಗಿದ್ದ ನಟ ರವಿಕಿರಣ್ (Ravikiran) ಅವರು ಅವ್ಯವಹಾರ ಎಸಗಿದ್ದಾರೆ. ಕ್ಲಬ್ಗೆ ಸೇರಿದ ಹಣದ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕ್ಲಬ್ನ ಸದಸ್ಯರು ಸುಬ್ರಹ್ಮಣ್ಮಪುರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ತಮ್ಮ ವಿರುದ್ಧ ಆರೋಪ ಕೇಳಿ ಬಂದ ಬೆನ್ನಲ್ಲೆ ನಟ ರವಿಕಿರಣ್ ಸುದ್ದಿಗೋಷ್ಠಿ ನಡೆಸಿ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿರುವ ರವಿಕಿರಣ್, ‘ಕಳೆದ ಡಿಸೆಂಬರ್ ಗೆ ನನ್ನ ಅವಧಿ ಮುಕ್ತಾಯವಾಗಿದೆ. ಮತ್ತೆ ಎಲೆಕ್ಷನ್ ನಡೆದಿಲ್ಲ, ಹೊಸ ಸದಸ್ಯರು ಸೇರಿಕೊಂಡು ಹೊಸ ಕಮಿಟಿ ಮಾಡಿಕೊಂಡಿದ್ದಾರೆ. ಕಾನೂನು ಬಾಹಿರವಾಗಿ ನನ್ನನ್ನು ಕ್ಲಬ್ನಿಂದ ವಜಾ ಮಾಡಿದ್ದಾರೆ, ಆ ನಂತರ ಅವರೇ ಕ್ಲಬ್ನ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದಿದ್ದಾರೆ ರವಿಕಿರಣ್.
‘2003 ರಲ್ಲಿ ಕ್ಲಬ್ ಶುರುಮಾಡಿದ್ದು ನಾನು. ಕ್ಲಬ್ನ ಸಿಬ್ಬಂದಿ ವೇತನ, ಇತರೆ ಖರ್ಚು ಸೇರಿ 60 ಲಕ್ಷ ಸಾಲ ಮಾಡಿದ್ದೀನಿ. ಆ ಹಣ ವಾಪಸ್ ಕೊಡಲಿ, ಈ ಕ್ಷಣ ಕ್ಲಬ್ಗೆ ರಾಜಿನಾಮೆ ನೀಡಿ ಹೊರ ಹೋಗುತ್ತೀನಿ. ಕರೋನ ಇದ್ದ ಕಾರಣ ಕಳೆದ ನಾಲ್ಕು ವರ್ಷ ದಿಂದ ತೆರಿಗೆ ಮಾವತಿ ಮಾಡಿಲ್ಲ. ಅಲ್ಲದೆ ತೆರಿಗೆ ಪಾವತಿ ಮಾಡುವುದು ಕ್ಲಬ್ನ ಖಜಾಂಚಿಯ ಜವಾಬ್ದಾರಿ, ಅವರು ಕಟ್ಟಬೇಕು’ ಎಂದಿದ್ದಾರೆ.
ಇದನ್ನೂ ಓದಿ:ಕಿರುತೆರೆ ನಟ ರವಿಕಿರಣ್ ವಿರುದ್ಧ ಕ್ಲಬ್ನಲ್ಲಿ ಅವ್ಯವಹಾರ ಆರೋಪ; ಸದಸ್ಯರಿಂದ ದೂರು
‘ಸೊಸೈಟಿ ಕಾಯ್ದೆ ಪ್ರಕಾರ ಸಂಸ್ಥೆಯ ಕಾಲಾವಧಿ ಮುಗಿದಾಗ ಮುಂದಿನ ಎಲೆಕ್ಷನ್ ವರೆಗೂ ಹಳಬರೇ ಇರುತ್ತಾರೆ. ಕಳೆದ ಡಿಸೆಂಬರ್ಗೆ ನಮ್ಮ ಟರ್ಮ್ ಮುಗಿದಿತ್ತು ಇದುವರೆಗೂ ಯಾವುದೆ ಎಲೆಕ್ಷನ್ ನಡೆದಿಲ್ಲ. ಜನವರಿಯಲ್ಲಿ ಎಲೆಕ್ಷನ್ ಮಾಡಬೇಕು ಅಂದುಕೊಂಡಿದ್ದೆ, ಆದರೆ ಇವರೇ ಮಾತಾಡಿಕೊಂಡು ನನಗೆ ಸಸ್ಪೆನ್ಷನ್ ಕಳಿಸಿ ಬೇರೆ ಕಾರ್ಯದರ್ಶಿಯನ್ನು ಆರಿಸಿಕೊಂಡಿದ್ದಾರೆ. ಅವರೆಲ್ಲರೂ ಯಾವುದೇ ಪತ್ರಗಳಿಗೂ ಸಹಿ ಹಾಕಿಲ್ಲ, ಏನೋ ಸಮಸ್ಯೆ ಮಾಡಿಕೊಂಡು ತಪ್ಪು ನನ್ನ ಮೇಲೆ ಹಾಕುತ್ತಿದ್ದಾರೆ’ ಎಂದಿದ್ದಾರೆ.
‘ನಾನು ಸಹಿ ಮಾಡದೇ ಅವರು ಯಾವುದೇ ವ್ಯವಹಾರ ಮಾಡುವಂತಿಲ್ಲ, ಹಾಗಾಗಿ ಕ್ಯಾಶ್ ಅಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಲಿಕ್ಕರ್ ಅನ್ನು ನಮ್ಮ ಲೈಸೆನ್ಸ್ ಅಲ್ಲಿ ಬೇರೆಯವರ ಹಣದಿಂದ ತರಿಸುತ್ತಿದ್ದಾರೆ. ನಾವು ಈ ಹಿಂದೆ 4.5 ಕಟ್ಟಬೇಕಾಗಿರುವುದರಿಂದ ನಾನು ಬೇರೆಯವರ ಕಡೆಯಿಂದ ಅರವತ್ತು ಲಕ್ಷ ಕೊಡಿಸಿದ್ದೆ. ಕೆಲಸ ಮಾಡುವವರಿಗೆ ನಾನು ಹಣ ಕೊಡುತ್ತಾ ಬಂದಿದ್ದೇನೆ. ಅವರು ಕ್ಯಾಶ್ ಅಲ್ಲಿ ಕಾರ್ಮಿಕರಿಗೆ ಹಣ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಮ್ಮ ಕಾರ್ಮಿಕರೆಲ್ಲ ಲೇಬರ್ ಆ್ಯಕ್ಟ್ ಮತ್ತೆ ಪಿಎಫ್ ಅಲ್ಲಿ ಇರುವವರು, ಅದು ಹೇಗೆ ಇವರು ಕ್ಯಾಶ್ ಅಲ್ಲಿ ಕೊಡುತ್ತಾರೆ’ ಎಂದು ರವಿಕಿರಣ್ ಪ್ರಶ್ನೆ ಮಾಡಿದ್ದಾರೆ.
20 ವರ್ಷದ ಹಿಂದೆ ನಾನೇ ಬಸವನಗುಡಿಯಲ್ಲಿ ಕ್ಲಬ್ ಶುರು ಮಾಡಿಸಿದ್ದೆ. ಡಿ 2, 2003 ರಲ್ಲಿ ಅಂಬರೀಷ್ ಮತ್ತು ವಿಷ್ಣುವರ್ಧನ್ ಕ್ಲಬ್ ಇನ್ಯಾಗುರೇಷನ್ ಮಾಡಿದ್ದರು. ಈ ಜಾಗವನ್ನು ಸರ್ಕಾರ ಕೊಟ್ಟಿದ್ದು ಅನ್ನುತ್ತಿದ್ದಾರೆ ಆದರೆ ಅಲ್ಲ, ಒಂದು ಕೋಟಿ ಹತ್ತು ಲಕ್ಷ ಕೊಟ್ಟು 30 ವರ್ಷಕ್ಕೆ ಲೀಸ್ ತೆಗೆದುಕೊಂಡ ಜಾಗ ಇದು, 2011 ರಲ್ಲಿ ಜಾಗದ ನೊಂದಾವಣಿ ಆಗಿದೆ ನನ್ನ ಎಲ್ಲ ಹಣವನ್ನು ಮತ್ತು ಸಾಲದ ಹಣವನ್ನು ಇವರು ತೀರಿಸಿದರೆ ಈಗಲೇ ರಾಜೀನಾಮೆ ಮಾಡ್ತೀನಿ. 6 ಲಕ್ಷ ಹಣ ತೆಗೆದುಕೊಂಡಿದ್ದೀನಿ ಎನ್ನುತ್ತಿದ್ದಾರೆ. ನಾನು ಇಟ್ಟ ಹಣವನ್ನು ನಾನು ತೆಗೆದುಕೊಳ್ಳುವುದು ತಪ್ಪಾ? ಸಂಸ್ಥೆಯ ಸಂಬಳದ ವಿಚಾರ ಗೊತ್ತಿಲ್ಲದ ಪ್ರೆಸಿಡೆಂಟ್ ಮಾಧ್ಯಮದ ಮುಂದೆ ಮಾತನಾಡುತ್ತಾನೆ. ಕಳ್ಳತನ ಅನ್ನೋ ಪದ ಬಳಸಿದರೆ ನಾನು ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸ್ತೀನಿ’ ಎಂದು ಎಚ್ಚರಿಕೆ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ