ಅಮಿತಾಬ್ ಬಚ್ಚನ್ ಎದುರು ಬಾಲಕನ ಉದ್ಧಟತನ: ವಿಡಿಯೋ ವೈರಲ್

Amitabh Bachchan: ಅಮಿತಾಬ್ ಬಚ್ಚನ್ ದೇಶದ ಲೆಜೆಂಡರಿ ನಟ. ಸಿನಿಮಾಗಳ ಮೂಲಕ ಮಾತ್ರವಲ್ಲ ತಮ್ಮ ಘನ ವ್ಯಕ್ತಿತ್ವದಿಂದಲೂ ಕೋಟ್ಯಂತರ ಜನರಿಗೆ ಅವರು ಸ್ಪೂರ್ತಿ ತುಂಬಿದ್ದಾರೆ. ಕೋಟ್ಯಂತರ ಜನರ ಪ್ರೀತಿ, ಆದರ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ. ಆದರೆ ಇತ್ತೀಚೆಗೆ ಅವರು ನಡೆಸಿಕೊಡುವ ಕೆಬಿಸಿ ಶೋನಲ್ಲಿ ಬಚ್ಚನ್ ಎದುರು ಬಾಲಕನೊಬ್ಬ ದುರ್ವರ್ತನೆ ತೋರಿ, ಅಗೌರವದಿಂದ ನಡೆದುಕೊಂಡಿದ್ದಾನೆ. ಇಲ್ಲಿದೆ ನೋಡಿ ವಿಡಿಯೋ...

ಅಮಿತಾಬ್ ಬಚ್ಚನ್ ಎದುರು ಬಾಲಕನ ಉದ್ಧಟತನ: ವಿಡಿಯೋ ವೈರಲ್
Amitabh Bachchan

Updated on: Oct 14, 2025 | 2:05 PM

ಅಮಿತಾಬ್ ಬಚ್ಚನ್ (Amitabh Bachchan) ಭಾರತದ ಲಿಜೆಂಡರಿ ನಟ. ಭಾರತೀಯ ಚಿತ್ರರಂಗದ ಹಾಲಿ ಸೂಪರ್ ಸ್ಟಾರ್​​ಗಳೆ ಎದ್ದು ನಿಂತು, ನಡು ಬಗ್ಗಿಸಿ ಮಾತನಾಡುವಂಥಹಾ ವ್ಯಕ್ತಿತ್ವ ಅವರದ್ದು. ಆದರೆ ಇತ್ತೀಚೆಗೆ ಬಾಲಕನೊಬ್ಬ ಅಮಿತಾಬ್ ಬಚ್ಚನ್ ಎದುರು ಅಹಂಕಾರದ ವರ್ತನೆ ತೋರಿದ್ದಾನೆ. ಅವರ ಹಿರಿತನಕ್ಕೂ ಗೌರವ ಕೊಡದೆ ಏಕವನದಲ್ಲಿ ಬಚ್ಚನ್ ಅವರನ್ನು ಮಾತನಾಡಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಅಷ್ಟೆಲ್ಲಾ ಆದರೂ ಸಹ ಬಚ್ಚನ್ ಅವರು ಎಲ್ಲಿಯೂ ತಾಳ್ಮೆ ಕಳೆದುಕೊಳ್ಳದೆ ಆ ಹುಡುಗನನ್ನು ನಿಭಾಯಿಸಿರುವ ರೀತಿ ಅನುಕರಣೀಯವಾಗಿದೆ.

ಅಮಿತಾಬ್ ಬಚ್ಚನ್ ಅವರು ಹಲವು ವರ್ಷಗಳಿಂದಲೂ ಕೌನ್ ಬನೇಗಾ ಕರೋಡ್​​ಪತಿ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ಗೊತ್ತಿರುವ ವಿಷಯವೇ ಆಗಿದೆ. ದೇಶದ ಹಲವು ಭಾಗಗಳಿಂದ, ಹಲವು ಹಿನ್ನೆಲೆಯುಳ್ಳ ವ್ಯಕ್ತಿಗಳು ಶೋನಲ್ಲಿ ಭಾಗವಹಿಸುತ್ತಾರೆ. ಈ ವರೆಗೆ ಬಂದರುವ ಬಹುತೇಕ ಎಲ್ಲ ಸ್ಪರ್ಧಿಗಳು ಅಮಿತಾಬ್ ಬಚ್ಚನ್ ಅವರನ್ನು ಗೌರವದಿಂದ ಕಂಡು ಅವರೊಂದಿಗೆ ವಿನಯದಿಂದಲೇ ವರ್ತಿಸಿದ್ದಾರೆ. ಆದರೆ ಇತ್ತೀಚೆಗಿನ ಎಪಿಸೋಡ್​​ಗೆ ಬಾಲಕನೊಬ್ಬ ಬಂದಿದ್ದ ಆತನ ವರ್ತನೆ ಕಂಡು ಪ್ರೇಕ್ಷಕರೇ ಕೆಂಡಾಮಂಡಲವಾಗಿದ್ದಾರೆ.

ಗುಜರಾತ್​​ನ ಗಾಂಧಿನಗರದಿಂದ ಇಶಿತ್ ಭಟ್ ಹೆಸರಿನ ಬಾಲಕ ಇತ್ತೀಚೆಗಿನ ಎಪಿಸೋಡ್​​ನಲ್ಲಿ ಬಚ್ಚನ್ ಅವರೆದುರು ಹಾಟ್​​ಸೀಟ್​​ನಲ್ಲಿ ಕುಳಿತು ಪ್ರಶ್ನೆಗಳಿಗೆ ಉತ್ತರಿಸುವ ಅವಕಾಶ ಪಡೆದಿದ್ದ. ಬಚ್ಚನ್ ಅವರೆದುರು ಆ ಬಾಲಕನ ವರ್ತನೆ, ಮಾತುಗಳು ಅಗೌರವದಿಂದ ಕೂಡಿದ್ದವು. ಬಚ್ಚನ್ ಅವರು ಶೋನ ನಿಯಮಗಳನ್ನು ಸ್ಪರ್ಧಿಗಳಿಗೆ ವಿವರಿಸುವುದು, ಆಟ ಶುರುವಾದ ಬಳಿಕ ಆಪ್ಷನ್​​ಗಳನ್ನು ನೀಡುವುದು ನಿಯಮ. ಆದರೆ ಆ ಬಾಲಕ ‘ನೀನು ಅದನ್ನೆಲ್ಲ ನನಗೆ ಹೇಳುವುದು ಬೇಡ. ನೇರವಾಗಿ ಪಾಯಿಂಟ್​ಗೆ ಬರೋಣ’ ಎಂದ. ಆದರೆ ಅಮಿತಾಬ್, ಬಾಲಕನ ಮಾತಿಗೆ ವಿಚಲಿತರಾಗಲಿಲ್ಲ.

ಇದನ್ನೂ ಓದಿ:ಶ್ರೀಮಂತಿಕೆಯಲ್ಲಿ ಹೃತಿಕ್ ರೋಷನ್, ಅಮಿತಾಬ್ ಬಚ್ಚನ್ ಅನ್ನೂ ಹಿಂದಿಕ್ಕಿದ ನಟಿ

ಆಟ ಶುರುವಾದಾಗ ಆರಂಭದಲ್ಲಿ ಬಹಳ ಸರಳ ಪ್ರಶ್ನೆಗಳನ್ನು ಕೇಳಲಾಯ್ತು. ಆಗೆಲ್ಲ ಬಾಲಕ ಅತಿಯಾದ ಆತ್ಮವಿಶ್ವಾಸದಲ್ಲಿ ಉತ್ತರ ನೀಡಿದ, ಅಲ್ಲದೆ, ‘ಆಪ್ಷನ್ ನೀಡುವುದು ಬೇಡ, ಬೇಗ ಲಾಕ್ ಮಾಡು’ ಎಂದ, ಬಚ್ಚನ್ ಅವರು ಆಪ್ಷನ್ ವಿವರಿಸಲು ಹೋದರೆ ‘ಬೇಗ ಲಾಕ್ ಮಾಡು, ಆಪ್ಷನ್ ಬೇಡ’ ಎಂದ ಆದರೆ ಅಮಿತಾಬ್ ಬಚ್ಚನ್ ಇದರಿಂದ ವಿಚಲಿತರಾದರೆ, ಅವರೂ ಸಹ ಸಿಟ್ಟು ಮಾಡಿಕೊಳ್ಳದೆ ಸಾವಧಾನದಿಂದಲೇ ಆ ಬಾಲಕನಿಗೆ ಸ್ಪಂದಿಸಿದರು.

ಆದರೆ ಕೇವಲ ನಾಲ್ಕು ಪ್ರಶ್ನೆಗಳ ಬಳಿಕ ರಾಮಾಯಣದ ಮೊದಲ ಕಾಂಡ ಯಾವುದು? ಎಂಬ ಪ್ರಶ್ನೆ ಎದುರಾಯ್ತು. ಆಗ ಬಚ್ಚನ್ ಅವರು ಆಪ್ಷನ್ ನೀಡಲಿಲ್ಲ. ಆಗ ಬಾಲಕನೇ ಆಪ್ಷನ್ ಕೊಡಿ ಎಂದು ಕೇಳಿದ. ಬಳಿಕ ಬಚ್ಚನ್ ಅವರು ಬಾಲ ಕಾಂಡ, ಅಯೋಧ್ಯಾ ಕಾಂಡ, ಸುಂದರ ಕಾಂಡ, ಯುದ್ಧ ಕಾಂಡ ಎಂದು ಆಪ್ಷನ್ ನೀಡಿದರು. ಆದರೆ ಅವರು ಅದನ್ನು ಓದಿ ಮುಗಿಸುವ ವೇಳೆಗೆ ಬಾಲಕ ಇಶಿತ್, ‘ಅಯೋಧ್ಯಾ ಕಾಂಡ’ ಲಾಕ್ ಮಾಡು, ಬೇಕಿದ್ದರೆ ನಾಲ್ಕು ಬೀಗ ಹಾಕು ಆದರೆ ‘ಅಯೋಧ್ಯಾ ಕಾಂಡ’ ಲಾಕ್ ಮಾಡು ಎಂದ. ಆದರೆ ಅದು ತಪ್ಪು ಉತ್ತರವಾಗಿತ್ತು.

ಇದೀಗ ಆ ಬಾಲಕದ ಅಗೌರವಯುತ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕನ ಪೋಷಕರು ಸಹ ವಿಡಿಯೋನಲ್ಲಿದ್ದು, ಬಾಲಕನ ಮಾತುಗಳಿಗೆ ಅವರು ನಗುತ್ತಿರುವುದು ಕಾಣುತ್ತಿದೆ. ನೆಟ್ಟಿಗರು ಆ ಬಾಲಕನಿಗೆ ಪೋಷಕರು ಕಲಿಸಿರುವ ಸಂಸ್ಕಾರದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಜೊತೆಗೆ ಬಚ್ಚನ್ ಅವರ ತಾಳ್ಮೆಗೆ ಭೇಷ್ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:29 pm, Tue, 14 October 25