ಸಂಗೀತಾ ಶೃಂಗೇರಿ (Sangeetha Sringeri) ಅವರು ಈ ಬಾರಿಯ ಬಿಗ್ ಬಾಸ್ನಲ್ಲಿ ಕಪ್ ಗೆಲ್ಲುತ್ತೇನೆ ಎನ್ನುವ ಭರವಸೆಯಲ್ಲಿದ್ದರು. ಶ್ರುತಿ ಬಳಿಕ ಎರಡನೇ ಲೇಡಿ ವಿನ್ನರ್ ತಾವೇ ಆಗಬೇಕು ಎನ್ನುವ ಕನಸು ಕಂಡಿದ್ದರು. ಆದರೆ, ಹಾಗಾಗಲೇ ಇಲ್ಲ. ಬಿಗ್ ಬಾಸ್ ವಿನ್ ಆಗಬೇಕು ಎನ್ನುವ ಅವರ ಕನಸು ಕನಸಾಗಿಯೇ ಉಳಿದಿದೆ. ಎರಡನೇ ರನ್ನರ್ಅಪ್ ಸ್ಥಾನಕ್ಕೆ ಅವರು ಖುಷಿಪಟ್ಟುಕೊಂಡಿದ್ದಾರೆ. ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಸಂಗೀತಾ ಮೊದಲ ಬಾರಿಗೆ ರಿಯಾಕ್ಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ಕಾರ್ತಿಕ್ ಮಹೇಶ್, ವಿನಯ್ ಗೌಡ, ತುಕಾಲಿ ಸಂತೋಷ್ ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಮಾಧ್ಯಮದವರ ಕೈಗೆ ಸಿಕ್ಕರು. ಅವರು ಈಗಾಗಲೇ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದರೆ, ಸಂಗೀತಾ ಶೃಂಗೇರಿ ಅವರು ಯಾರ ಕೈಗೂ ಸಿಗುತ್ತಿಲ್ಲ. ಅವರು ಸದ್ಯ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಅಲ್ಲಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
‘ನನ್ನ ಪ್ರೀತಿಯ ಅಭಿಮಾನಿಗಳಿಗೆ, ಪ್ರೋತ್ಸಾಹಕರಿಗೆ, ಕನ್ನಡ ಜನತೆಗೆ ನಿಮ್ಮ ಸಂಗೀತಾ ಮಾಡುವ ನಮಸ್ಕಾರಗಳು. ಎಲ್ಲಾ ಹೇಗಿದ್ದೀರಿ? ನಮ್ಮ ಬಿಗ್ ಬಾಸ್ ಹೇಗಿತ್ತು? ನನ್ನ ಬಿಗ್ ಬಾಸ್ ಜರ್ನಿ ಅಂತೂ ನಿಮಗೆ ಗೊತ್ತೇ ಇದೆ. ನೀವು ಇಲ್ಲಿ ನನಗೆ ಕೊಟ್ಟ ಪ್ರೀತಿ, ಸಹಕಾರ ಈಗ ತಿಳಿಯುತ್ತಿದೆ. ನಿಮಗೆ ಹೇಗೆ ನನ್ನ ಧನ್ಯವಾದ ಅರ್ಪಿಸಲಿ ಎಂಬುದು ತಿಳಿಯದಾಗಿದೆ’ ಎಂದು ಪತ್ರ ಆರಂಭಿಸಿದ್ದಾರೆ ಸಂಗೀತಾ.
‘ನನ್ನ ಬೆನ್ನೆಲುಬಾಗಿ ನಿಂತು ನೀವು ತೋರಿದ ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ ನಾನು ಎಂದಿಗೂ ಆಭಾರಿ. ಬಿಗ್ ಬಾಸ್ ಟ್ರೋಫಿ ನನಗೆ ಸಿಗದಿರಬಹುದು, ನಿಮ್ಮ ಪ್ರೀತಿ ನನಗೆ ನಿಜವಾದ ಗೆಲುವನ್ನೇ ತಂದುಕೊಟ್ಟಿದೆ. ನಿಮ್ಮಿಂದ ನಾನೇ ವಿನ್ನರ್ ಎನಿಸುತ್ತಿದೆ. ಇದಕ್ಕೆ ಇರಬೇಕು ನಮ್ಮ ಅಣ್ಣಾವ್ರು ಅಭಿಮಾನಿಗಳನ್ನು ದೇವರಂತೆ ಕಂಡಿದ್ದು’ ಎಂದು ಪೋಸ್ಟ್ ಪೂರ್ಣಗೊಳಿಸಿದ್ದಾರೆ ಸಂಗೀತಾ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಕಪ್ ಎತ್ತಬೇಕು ಎನ್ನುವ ಸಂಗೀತಾ ಶೃಂಗೇರಿ ಕನಸು ಭಗ್ನ; ಎರಡನೇ ರನ್ನರ್ಅಪ್ ಆದ ನಟಿ
ಸಂಗೀತಾ ಶೃಂಗೇರಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ ಕೂಡ ಹೆಚ್ಚಿದೆ. ಇದರಿಂದ ಅವರು ಸಾಕಷ್ಟು ಖುಷಿಯಾಗಿದ್ದಾರೆ. ಆದರೆ, ಕಪ್ ಗೆಲ್ಲಬೇಕು ಎನ್ನುವ ಅವರು ಕನಸು ಈಡೇರಲಿಲ್ಲ. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ. ಅವರು ಬದ್ಧ ವೈರಿ ಎಂದೇ ಪರಿಗಣಿಸಿದ್ದ ಕಾರ್ತಿಕ್ ಮಹೇಶ್ ಬಿಗ್ ಬಾಸ್ ವಿನ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ