ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂದು ಸಂಗೀತಾ ಶೃಂಗೇರಿ ಆಸೆಪಟ್ಟಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕಾರ್ತಿಕ್ ಮಹೇಶ್ ಅವರು ಬಿಸ್ ಬಾಸ್ (Bigg Boss Kannada) ಟ್ರೋಫಿ ಪಡೆದುಕೊಂಡಿದ್ದಾರೆ. ದೊಡ್ಮನೆಯಲ್ಲಿ ಇದ್ದಾಗ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ಮಹೇಶ್ (Karthik Mahesh) ನಡುವೆ ವೈಮನಸ್ಸು ಮೂಡಿತ್ತು. ಇಬ್ಬರ ಸ್ನೇಹದಲ್ಲಿ ಬಿರುಕು ಉಂಟಾಗಿತ್ತು. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಅವರು ಮತ್ತೆ ಫ್ರೆಂಡ್ಸ್ ಆಗುತ್ತಾರೋ ಅಥವಾ ಇಲ್ಲವೋ ಎಂಬ ಕುತೂಹಲ ಇದೆ. ಆ ಕುರಿತು ಸಂಗೀತಾ ಶೃಂಗೇರಿ (Sangeetha Sringeri) ಮಾತನಾಡಿದ್ದಾರೆ. ಬಿಗ್ ಬಾಸ್ ಆಟವೇ ಬೇರೆ, ನಿಜವಾದ ಜೀವನವೇ ಬೇರೆ ಎಂದು ಅವರು ಹೇಳಿದ್ದಾರೆ.
‘ಆ ಮನೆಯಲ್ಲಿ ನಡೆದ ಮನಸ್ತಾಪ, ಜಗಳ, ಸ್ನೇಹ, ಮೋಸ ಎಲ್ಲವೂ ಆಟಕ್ಕಾಗಿ. ಎಲ್ಲರೂ ಬಂದಿದ್ದು ಗೆಲ್ಲುವುದಕ್ಕಾಗಿ. ಆಟದಲ್ಲಿ ಒರಟು ಮಾತು, ಚುಚ್ಚುಮಾತು ಸಹಜ. ವೈಯಕ್ತಿಕ ಕಾರಣದಿಂದ ಯಾರೂ ಅದನ್ನೆಲ್ಲ ಮಾಡಿಲ್ಲ. ಮುಖ್ಯದ್ವಾರದಿಂದ ಹೊರಗೆ ಕಾಲಿಡುತ್ತಿದ್ದಂತೆಯೇ ಗೇಮ್ ಮುಕ್ತಾಯ ಆಗುತ್ತದೆ. ಅಲ್ಲಿಂದ ನಮ್ಮ ರಿಯಲ್ ಲೈಫ್ ಶುರುವಾಗುತ್ತದೆ. ಇಲ್ಲಿಯೂ ಅದನ್ನೇ ಮುಂದುವರಿಸಿದರೆ ಜೀವನಕ್ಕೆ ಅರ್ಥ ಇರುವುದಿಲ್ಲ’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ.
ಇದನ್ನೂ ಓದಿ: ಸಂಗೀತಾ ಜತೆ ಸ್ನೇಹ ಮುಂದುವರಿಯುತ್ತಾ? ನಿರ್ಧಾರ ತಿಳಿಸಿದ ಬಿಗ್ ಬಾಸ್ ವಿನ್ನರ್ ಕಾರ್ತಿಕ್
‘ಇಲ್ಲಿ ಯಾವ ಗೇಮ್ ಇದೆ ಗುರು? ಕಪ್ ಗೆದ್ದವರು ಗೆದ್ದಾಗಿದೆ. ಈಗ ನಾವು ನಮ್ಮ ಜೀವನವನ್ನು ನಡೆಸಬೇಕು. ಈಗಿನಿಂದ ನಮ್ಮ ಮನುಷ್ಯತ್ವ ತೋರಿಸುತ್ತದೆ. ನಾವು ರಿಯಲ್ ಆಗಿ ಹೇಗಿದ್ದೇವೆ ಎಂಬುದನ್ನು ತೋರಿಸುತ್ತದೆ. ಅಲ್ಲಿರುವ ಮನಸ್ತಾಪವನ್ನು ನಾನು ಇಲ್ಲಿ ಯಾಕೆ ಮುಂದುವರಿಸಬೇಕು? ನಾಳೆ ಸಿಗುತ್ತಾರೆ ಎಂದರೆ ಖಂಡಿತವಾಗಿಯೂ ಹಾಯ್ ಹೇಳುತ್ತೇನೆ. ಅದೇ ಜೀವನ’ ಎಂದು ಸಂಗೀತಾ ಶೃಂಗೇರಿ ಅವರು ತಮ್ಮ ನಿರ್ಧಾರ ತಿಳಿಸಿದ್ದಾರೆ.
‘ಇದನ್ನು ನಾನು ನನ್ನ ಅಭಿಮಾನಿಗಳಿಗೂ ಹೇಳಲು ಇಷ್ಟಪಡುತ್ತೇನೆ. ಅಲ್ಲಿ ನಡೆದ ಜಗಳಗಳು ಆ ಮನೆಯಿಂದ ಹೊರಗೆ ಕಾಲಿಟ್ಟ ಬಳಿಕ ಮುಗಿದವು. ಗೇಮ್ ಮುಕ್ತಾಯ ಆಯಿತು. ಕಬಡ್ಡಿ ಆಟದಲ್ಲಿ ಔಟ್ ಆಗಿದ್ದಕ್ಕೆ ಜೀವನಪರ್ಯಂತ ಮಾತನಾಡಲ್ಲ ಅಂತ ಹೇಳಿದರೆ ಹೇಗೆ ಸರಿಯಾಗುತ್ತದೆ? ಅದು ಆಟ. ಅದರಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ವೀಕ್ಷಕರಾಗಿ ನಾವು ಬೆಂಬಲ ನೀಡಬೇಕು, ಆ ಕ್ಷಣವನ್ನು ಎಂಜಾಯ್ ಮಾಡಬೇಕು. ಗೇಮ್ ಮುಗಿದ ಬಳಿಕ ಅದನ್ನು ಆಟ ಅಂತ ಒಪ್ಪಿಕೊಂಡು, ಈಗ ಪಾರ್ಟಿ ಮಾಡೋಣ ಅಂತ ಬರಬೇಕು’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ