ಬಿಗ್ ಬಾಸ್ (Bigg Boss) ಮನೆಗೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರ ಆಗಮನ ಆಗಿದೆ. ಅವರು ಎಲ್ಲಾ ಸ್ಪರ್ಧಿಗಳ ಭವಿಷ್ಯ ನುಡಿದಿದ್ದಾರೆ. ಹಿಂದೇನಾಗಿತ್ತು ಮತ್ತು ಮುಂದೇನಾಗುತ್ತದೆ ಎಂಬುದರ ಬಗ್ಗೆ ನೇರ ಮಾತುಗಳಲ್ಲಿ ಹೇಳಿದ್ದಾರೆ. ಇದನ್ನು ಕೇಳಿ ಒಂದಷ್ಟು ಸ್ಪರ್ಧಿಗಳಿಗೆ ಖುಷಿ ಆಗಿದೆ. ಇನ್ನೊಂದಷ್ಟು ಸ್ಪರ್ಧಿಗಳಿಗೆ ಬೇಸರ ಆಗಿದೆ. ಇನ್ನೂ ಕೆಲವರಿಗೆ ಹುಮ್ಮಸ್ಸು ಬಂದಿದೆ. ಕೆಲವರು ಚೈತನ್ಯ ಕುಗ್ಗಿ ಹೋಗಿದೆ. ಸಂಗೀತಾ ಅವರ ಬಗ್ಗೆಯೂ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಹೊಸ ವರ್ಷದ ಸಂದರ್ಭದಲ್ಲಿ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರು ಬಿಗ್ ಬಾಸ್ಗೆ ಆಗಮಿಸಿದರು. ಎಲ್ಲಾ ಸ್ಪರ್ಧಿಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನು ಆಡಿದರು. ಆ ಬಳಿಕ ಒಬ್ಬೊಬ್ಬರನ್ನಾಗಿ ಕರೆದು ಮಾತುಕತೆ ನಡೆಸಿದರು. ಈ ವೇಳೆ ಸಂಗೀತಾ ಅವರ ಜೀವನದಲ್ಲಿ ಈ ಮೊದಲು ಏನಾಗಿತ್ತು ಎಂಬ ಬಗ್ಗೆ ಮಾತನಾಡಿದ್ದಾರೆ.
‘ಮನಸ್ಸಿನಲ್ಲಿ ತುಂಬಾ ಹಿಂಸೆ. ಈಗ ಅಂತಲ್ಲ, ಮೊದಲಿನಿಂದಲೂ ಅದು ಇದೆ. ತುಂಬಾ ನಂಬಿದ್ರಿ. ಆದರೆ ಕೈ ಹಿಡಿಯಲಿಲ್ಲ. ಆ ನಂಬಿಕೆ ದ್ರೋಹದಿಂದ ನಿಮಗೆ ಬಹಳ ಬೇಸರ ಆಗಿದೆ. ಎಲ್ಲರ ಬದುಕಲ್ಲೂ ಇದು ಇರುತ್ತದೆ. ಎಲ್ಲವನ್ನೂ ಶಮನ ಮಾಡುವ ವ್ಯಕ್ತಿಯ ಆಗಮನ ನಿಮ್ಮ ಬದುಕಲ್ಲಿ ಆಗುತ್ತದೆ. ಆಗ ನಿಮ್ಮ ಜೀವನದಲ್ಲಿ ಬೆಳಕು ಮೂಡುತ್ತದೆ’ ಎಂದು ಸಂಗೀತಾಗೆ ಹೇಳಿದ್ದಾರೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ.
‘ನಿಮ್ಮ ವೃತ್ತಿ ಜೀವನ ಮೇಲೂ ಹೋಗುತ್ತದೆ, ಕೆಳಕ್ಕೂ ಹೋಗುತ್ತದೆ. 2024ರಲ್ಲಿ ವೃತ್ತಿ ಜೀವನ, ಖಾಸಗಿ ಜೀವನ ಎರಡೂ ಚೆನ್ನಾಗಿರುತ್ತದೆ. 2025ರ ನಂತರ ಮದುವೆ ಆಗ್ತೀರಿ’ ಎಂದರು ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ. ಆದರೆ, ಮದುವೆ ಬಗ್ಗೆ ನಂಬಿಕೆ ಇಲ್ಲ ಎಂದರು ಸಂಗೀತಾ. ‘ಬಿಸಿ ಗಾಯದಿಂದ ಬೆಂಕಿಯೇ ಬೇಡ ಎನ್ನಬಾರದು. ಮದುವೆ ನಂತರ ನಿಮ್ಮ ಜೀವನ ಚೆನ್ನಾಗಿರುತ್ತದೆ. ಬೇಡ ಎಂದಿದ್ದು ಜೀವನದಲ್ಲಿ ಬರುತ್ತಾ ಇರುತ್ತದೆ. ಅಮ್ಮನವರ ಆಶೀರ್ವಾದ ಇದೆ. ಚೆನ್ನಾಗಿ ಇರ್ತೀಯ’ ಎಂದು ಅವರು ಹಾರೈಸಿದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಅದ್ದೂರಿ ಪಾರ್ಟಿ; ಅವಕಾಶ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ ನಮ್ರತಾ
‘ಈ ಆಟದಲ್ಲಿ ಗೆಲುವು ಸಿಗುತ್ತದೆಯೇ’ ಎಂದು ಸಂಗೀತಾ ಕೇಳಿದರು. ‘ಯಾರಿಗೆ ಅರ್ಹತೆ ಇರುತ್ತದೆಯೋ ಅವರು ಗೆಲ್ಲುತ್ತಾರೆ’ ಎಂದರು ಗುರೂಜಿ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಜನವರಿ 2ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:19 am, Wed, 3 January 24