
ಕನ್ನಡ ಬಿಗ್ಬಾಸ್ ಶೋ (Kannada Bigg Boss) ನಡೆಯುತ್ತಿರುವ ವೇಳೆಯಲ್ಲಿಯೇ ಅತ್ತ ತೆಲುಗಿನಲ್ಲೂ ಬಿಗ್ಬಾಸ್ ಶೋ ಚಾಲ್ತಿಯಲ್ಲಿದೆ. ಬಿಗ್ಬಾಸ್ ತೆಲುಗು ಶೋನಲ್ಲಿ ಇಬ್ಬರು ಕನ್ನಡತಿಯರು ಸ್ಪರ್ಧಿಗಳಾಗಿ ಆಟವಾಡುತ್ತಿದ್ದಾರೆ. ಸಂಜನಾ ಗಲ್ರಾನಿ ಮತ್ತು ತನುಜಾ ಗೌಡ. ಇಬ್ಬರೂ ಸಹ ಉತ್ತಮವಾಗಿ ಆಡುತ್ತಿದ್ದು, ಚೆನ್ನಾಗಿ ಎಂಟರ್ಟೈನ್ ಮಾಡುತ್ತಿದ್ದಾರೆ. ತನುಜಾ ಹಾಗೂ ಸಂಜನಾ ಇಬ್ಬರೂ ಫಿನಾಲೆಗೆ ಹೋಗುವ ಸಾಧ್ಯತೆಗಳು ದಟ್ಟವಾಗಿವೆ. ಆದರೆ ಇದೀಗ ಸಂಜನಾ ಏಕಾ-ಏಕಿ, ‘ನನ್ನನ್ನು ಮನೆಗೆ ಕಳಿಸಿಬಿಡಿ, ನನ್ನ ಕೈಯಿಂದ ಆಗುತ್ತಿಲ್ಲ’ ಎಂದು ನಿರೂಪಕ ನಾಗಾರ್ಜುನ ಬಳಿಯೇ ಕೇಳಿಕೊಂಡಿದ್ದಾರೆ.
ಆಗಿದ್ದಿಷ್ಟು ಈ ವಾರ ಫ್ಯಾಮಿಲಿ ವೀಕ್ ಆಗಿತ್ತು. ಸ್ಪರ್ಧಿಗಳ ಮನೆಯವರು ಈ ಬಾರಿ ಮನೆಗೆ ಪ್ರವೇಶಿಸುವವರಿದ್ದಾರೆ. ಎಲ್ಲರೂ ಸಹ ಅದಕ್ಕಾಗಿ ಕಾಯುತ್ತಿದ್ದಾರೆ. ಸಂಜನಾ ಇಬ್ಬರು ಪುಟ್ಟ ಮಕ್ಕಳ ತಾಯಿ, ಸಹಜವಾಗಿಯೇ ತಮ್ಮ ಮಕ್ಕಳನ್ನು ನೋಡುವ ಕಾತರದಲ್ಲಿದ್ದರು, ಆದರೆ ಸಹ ಸ್ಪರ್ಧಿಗಳಿಂದಾಗಿ ಆ ಅವಕಾಶ ಅವರಿಗೆ ತಪ್ಪಿ ಹೋಗಿದೆ. ಇದರಿಂದ ಬೇಸರಗೊಂಡಿರುವ ಸಂಜನಾ ತಮ್ಮನ್ನು ಶೋ ಇಂದ ಹೊರಗೆ ಕಳಿಸುವಂತೆ ಬೇಡಿಕೊಂಡಿದ್ದಾರೆ.
ಶನಿವಾರದ ಎಪಿಸೋಡ್ನಲ್ಲಿ ನಾಗಾರ್ಜುನ ಅವರು ಸಹ ಸ್ಪರ್ಧಿಗಳನ್ನು, ಯಾರು ನಿಮ್ಮ ಆಟವನ್ನು ಕೆಳಗೆ ಎಳೆಯುತ್ತಿದ್ದಾರೆ ಎಂಬ ಪ್ರಶ್ನೆ ಕೇಳಿದಾಗ ಒಬ್ಬೊಬ್ಬರು ಒಂದೊಂದು ಹೆಸರುಗಳನ್ನು ಹೇಳಿದರು. ಆದರೆ ಸಂಜನಾ ಗಲ್ರಾನಿ ಅವರಿಗೆ ಹೆಚ್ಚು ಮತ ಬಂತು. ನಾಲ್ಕು ಸ್ಪರ್ಧಿಗಳು ಸಂಜನಾ ತಮ್ಮ ಆಟಕ್ಕೆ ಅಡ್ಡಿ ಆಗುತ್ತಿದ್ದಾರೆ ಎಂದರು. ಇದರಿಂದಾಗಿ ಅವರಿಗೆ ‘ನೋ ಫ್ಯಾಮಿಲಿ ವೀಕ್’ ಎಂಬ ಶಿಕ್ಷೆ ವಿಧಿಸಲಾಯ್ತು. ಅದನ್ನು ಸ್ಪರ್ಧಿಗಳೇ ಅವರಿಗೆ ನೀಡಿದರು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್: ಕಣ್ಣೀರು ಹಾಕಿದ ಅಶ್ವಿನಿ
ಅದನ್ನು ನೋಡುತ್ತಿದ್ದಂತೆ ಸಂಜನಾಗೆ ಕಣ್ಣೀರು ಬಂತು. ನಾಗಾರ್ಜುನ ಅವರನ್ನು ಕುರಿತು, ‘ಸರ್, ನನ್ನನ್ನು ಮನೆಗೆ ಕಳಿಸಿಬಿಡಿ ಸರ್, ನನ್ನ ಕೈಯಿಂದ ಆಗುತ್ತಿಲ್ಲ, ನಾನು ಸತ್ತೇ ಹೋಗುತ್ತೇನೆ. ಈಗಲೇ ನನ್ನ ಮನೆಯವರನ್ನು ನೆನದು ಪ್ರತಿದಿನವೂ ಕಣ್ಣೀರು ಹಾಕುತ್ತಿದ್ದೇನೆ ಆದರೆ ಇನ್ನು ನನ್ನಿಂದ ಆಗುವುದಿಲ್ಲ. ಇದು ಅನ್ಯಾಯ, ಮೋಸ. ನನ್ನನ್ನು ಮನೆಗೆ ಕಳಿಸಿಬಿಡಿ, ನಾನು ಖುಷಿಯಿಂದ ಮನೆಗೆ ಹೋಗುತ್ತೇನೆ’ ಎಂದು ನಾಗಾರ್ಜುನ ಬಳಿ ಗೋಗರೆದರು.
ಆದರೆ ನಾಗಾರ್ಜುನ ಅದು ಸಾಧ್ಯವಿಲ್ಲ ಎಂದರು. ಮುಂದುವರೆದು ಸಂಜನಾ, ‘ನಾನು ಪೊಗರಿನಿಂದ ಈ ಮಾತನ್ನು ಹೇಳುತ್ತಿಲ್ಲ, ನನಗೆ ಈ ಶೋ ಬಹಳ ಇಷ್ಟ, ಪ್ರತಿ ವಾರ ನಿಮ್ಮನ್ನು ನೋಡುವುದು, ನಿಮ್ಮೊಟ್ಟಿಗೆ ಮಾತನಾಡುವುದು ಸಹ ನನಗೆ ಬಹಳ ಇಷ್ಟ ಆದರೆ ನನಗೆ ಆಗುತ್ತಿಲ್ಲ ಸರ್’ ಎಂದರು. ಸಹ ಸ್ಪರ್ಧಿಗಳಾದ ಕಲ್ಯಾಣ್ ಮತ್ತು ಭರಣಿ ಅವರು ತಮ್ಮ ಫ್ಯಾಮಿಲಿ ಬದಲಿಗೆ ಸಂಜನಾ ಫ್ಯಾಮಿಲಿಯನ್ನು ಕರೆಸಿ ಎಂದು ಕೇಳಿಕೊಂಡರು. ಆದರೆ ಅದಕ್ಕೂ ಸಹ ನಾಗಾರ್ಜುನ ಒಪ್ಪಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ