ಕಿರುತೆರೆ ನಟಿ ಶ್ರುತಿಗೆ ಚಾಕು ಇರಿತ ಪ್ರಕರಣ: ಪತ್ನಿ ಮೇಲೆ ಹಲವು ಆರೋಪ ಮಾಡಿದ ಪತಿ

‘ಅಮೃತಧಾರೆ’ ಸೀರಿಯಲ್ ನಟಿ ಶ್ರುತಿ ಅವರ ಮೇಲೆ ಇತ್ತೀಚೆಗೆ ಗಂಡನಿಂದಲೇ ಹತ್ಯೆ ಪ್ರಯತ್ನ ನಡೆಯಿತು. ಅದಕ್ಕೆ ಕಾರಣ ಏನು ಎಂಬುದು ಈಗ ಬಹಿರಂಗ ಆಗಿದೆ. ಪೊಲೀಸರ ವಿಚಾರಣೆ ವೇಳೆ ಶ್ರುತಿ ಪತಿ ಅಮರೇಶ್ ಶಾಕಿಂಗ್ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಕೊಲೆ ಯತ್ನದ ಬಗ್ಗೆ ಅಮರೇಶ್ ನೀಡಿದ ಹೇಳಿಕೆ ಬಗ್ಗೆ ಇಲ್ಲಿದೆ ವಿವರ..

ಕಿರುತೆರೆ ನಟಿ ಶ್ರುತಿಗೆ ಚಾಕು ಇರಿತ ಪ್ರಕರಣ: ಪತ್ನಿ ಮೇಲೆ ಹಲವು ಆರೋಪ ಮಾಡಿದ ಪತಿ
Shruthi, Amaresh
Edited By:

Updated on: Jul 13, 2025 | 1:34 PM

ಕಿರುತೆರೆ ನಟಿ (Serial Actress) ಶ್ರುತಿ ಅಲಿಯಾಸ್ ಮಂಜುಳಾ ಮೇಲೆ ಪತಿಯಿಂದಲೇ ಚಾಕು ಇರಿತ (Stabbing) ಆದ ಸುದ್ದಿ ಕೇಳಿ ಎಲ್ಲರಿಗೂ ಶಾಕ್ ಆಗಿತ್ತು. ಶ್ರುತಿ ಪತಿ ಅಮರೇಶ್ ಈಗ ಪೊಲೀಸರ ವಶದಲ್ಲಿ ಇದ್ದಾರೆ. ಪೊಲೀಸರ ವಿಚಾರಣೆ ವೇಳೆ ಅಮರೇಶ್ ಅನೇಕ ವಿಚಾರ ಬಾಯ್ಬಿಟ್ಟಿದ್ದಾರೆ. ಕೊಲೆ ಮಾಡಲು ಬಂದ ಗಂಡನಿಂದ ಶ್ರುತಿ (Serial Actress Shruthi) ಬಚಾವಾಗಿದ್ದು ಹೇಗೆ ಎಂಬುದು ಈಗ ಗೊತ್ತಾಗಿದೆ. ಹನುಮಂತನಗರ ಠಾಣೆ ಪೊಲೀಸರು ವಿಚಾರಣೆ ಮಾಡಿದಾಗ ಪತ್ನಿ ಮೇಲೆಯೇ ಅಮರೇಶ್ ಹಲವು ಆರೋಪ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ನಾವು 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದು. ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶ್ರೀನಗರದಲ್ಲಿ ಪ್ಲಾಟ್ ಒಂದನ್ನ 27 ಲಕ್ಷ ರೂಪಾಯಿ ಕೊಟ್ಟು ಲೀಸ್​ಗೆ ಹಾಕಿಕೊಂಡು ವಾಸ ಮಾಡ್ತಿದ್ವಿ. ಇಬ್ಬರು ಹೆಣ್ಣು ಮಕ್ಕಳಿಗೆ ತಾಯಿ ಪ್ರೀತಿಯನ್ನು ಶ್ರುತಿ ಕೊಟ್ಟಿಲ್ಲ. ಮನೆ ಜವಾಬ್ದಾರಿಯನ್ನೆಲ್ಲ ನಾನೇ ನೋಡಿಕೊಳ್ತಿದ್ದೆ. ಶೂಟಿಂಗ್ ನೆಪದಲ್ಲಿ ಸರಿಯಾಗಿ ಮನೆಗೆ ಬಾರದೇ ಪಾರ್ಟಿ ಪಬ್ ಅಂತ ಸುತ್ತಾಡ್ತಿದ್ಲು’ ಎಂದು ಅಮರೇಶ್ ಹೇಳಿಕೆ ನೀಡಿದ್ದಾರೆ.

‘ಯಾರಿಗೂ ಹೇಳದೇ 15 ದಿನ ಪ್ರಯಾಗ್ ರಾಜ್​ಗೆ ಟ್ರಿಪ್ ಹೋಗಿದ್ದಳು. ಇದೇ ವಿಚಾರಕ್ಕೆ ಈ ಹಿಂದೆಯೂ ಗಲಾಟೆ ಆಗಿತ್ತು. ಗಂಡ-ಮಕ್ಕಳಿದ್ದರೂ ಕೂಡ ಅಣ್ಣನ ಜೊತೆ ಇರ್ತೀನಿ ಅಂತ ಮನೆ ಬಿಟ್ಟು ಹೋಗಿದ್ದಳು. ಎಷ್ಟೋ ರಾತ್ರಿಗಳು ಶ್ರುತಿ ಮನೆಗೆ ಬರುತ್ತಿರಲಿಲ್ಲ. ಫೋನ್ ಮಾಡಿದ್ರೆ ಎನ್ ಮಾಡ್ಕೋತಿಯೋ ಮಾಡ್ಕೋ ಎನ್ನುತ್ತಿದ್ದಳು. ಭೋಗ್ಯಕ್ಕಿದ್ದ ಮನೆಯನ್ನ ಖಾಲಿ ಮಾಡಿ ಹಣ ತೆಗೆದುಕೊಂಡು ಮನೆ ಬಿಡೋಣ ಅನ್ನೋದು ಅವಳ ಪ್ಲಾನ್ ಆಗಿತ್ತು’ ಎಂದು ಅಮರೇಶ್ ಆರೋಪಿಸಿದ್ದಾರೆ.

‘ಕಳೆದ ವಾರ ರಾಜಿ ಸಂಧಾನ ಆದಮೇಲೂ ಮತ್ತೆ ಮನೆಗೆ ಸರಿಯಾಗಿ ಬರುತ್ತಿರಲಿಲ್ಲ. ಹೀಗಾಗಿಯೇ ಆಕೆಯನ್ನ ಕೊಲೆ ಮಾಡಿ ಇದಕ್ಕೆಲ್ಲ ಇತಿಶ್ರೀ ಹಾಡೋಣ ಅಂತಿದ್ದೆ. ಆದ್ರೆ ಕೊಲೆ ಮಾಡುವಾಗ ಕಾಲಿಗೆ ಬಿದ್ದು ಕ್ಷಮೆ ಕೇಳಿದಳು. ನೀನು ಹೇಳಿದ ರೀತಿ ನಾನು ಕೇಳುತ್ತೇನೆ ಎಂದು ಕಾಲಿಗೆ ಬಿದ್ದಳು. ಹೆಂಡತಿ ಇನ್ಮೇಲಾದ್ರೂ ಬದಲಾಗ್ತಾಳೆ ಅಂತ ಕೊಲೆ ಮಾಡೋದನ್ನ ಬಿಟ್ಟು ಸುಮ್ಮನಾದೆ’ ಎಂದು ಪೊಲೀಸರ ಮುಂದೆ ಅಮರೇಶ್ ಹೇಳಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಸೀರಿಯಲ್ ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ

ಹನುಮಂತನಗರ ಪೊಲೀಸರು ಅಮರೇಶ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ‘ಅಮೃತಧಾರೆ’ ಧಾರಾವಾಹಿಯಲ್ಲಿ ನಟಿಸಿ ಶ್ರುತಿ ಗುರುತಿಸಿಕೊಂಡಿದ್ದಾರೆ. ಚಾಕು ಇರಿತದ ಬಳಿಕ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.