
ಗಂಧದ ಗುಡಿ ಎಂಬುದು ಸಿಕ್ಕಾಪಟ್ಟೆ ಜನಪ್ರಿಯ ಶೀರ್ಷಿಕೆ. ಈಗ ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ‘ಶ್ರೀ ಗಂಧದ ಗುಡಿ, ಪ್ರೀತಿಯ ಕುಡಿ’ ಎಂಬ ಹೊಸ ಸೀರಿಯಲ್ ಪ್ರಸಾರಕ್ಕೆ ಅಣಿಯಾಗಿದೆ. ಇಂಥ ಶೀರ್ಷಿಕೆ ಇಡಲು ಕಾರಣ ಕೂಡ ಇದೆ. ಕರುನಾಡ ತಾಯಿ ಎಲ್ಲರನ್ನೂ ತನ್ನ ಮಕ್ಕಳಂತೆ ನೋಡುತ್ತಾಳೆ. ಅವಳು ನೆಲೆಸಿದ ನಾಡು ಶ್ರೀ ಗಂಧದ ಗುಡಿ. ಇದೇ ಕಾನ್ಸೆಪ್ಟ್ ಇರುವ ಧಾರಾವಾಹಿಗೆ ‘ಶ್ರೀ ಗಂಧದ ಗುಡಿ’ (Shree Gandhadagudi) ಎಂದು ಟೈಟಲ್ ಇಡಲಾಗಿದೆ. ಅಕ್ಟೋಬರ್ 6ರಿಂದ ಪ್ರತಿ ರಾತ್ರಿ 8 ಗಂಟೆಗೆ ಈ ಧಾರಾವಾಹಿ ಪ್ರಸಾರ ಆಗಲಿದೆ. ಶಿಶಿರ್ ಶಾಸ್ತ್ರಿ (Shishir Shastry), ಸಂಜನಾ ಬುರ್ಲಿ ಮುಂತಾದವರು ನಟಿಸಿದ್ದಾರೆ.
‘ಶ್ರೀ ಗಂಧದ ಗುಡಿ’ ಧಾರಾವಾಹಿಯ ಕಥೆ ಏನು ಎಂಬ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಮಾಹಿತಿ ಹಂಚಿಕೊಂಡಿದೆ. ‘ಶ್ರೀಗಂಧದ ಗುಡಿ’ ಎಂಬುದು ಹೆಣ್ಣು ದಿಕ್ಕಿಲ್ಲದ, ಗಂಡಸರೇ ಒಟ್ಟಾಗಿ ಬದುಕುತ್ತಿರುವ ಮನೆ. ಆ ಮನೆಗೆ ಬರುವ ಸೊಸೆ, ಮನೆ ಸ್ಥಿತಿ ಮತ್ತು ಮನಸ್ಥಿತಿಯನ್ನು ಬದಲಾಯಿಸ್ತಾಳಾ ಎಂಬ ಕತೆಯನ್ನು ಈ ಕೌಟುಂಬಿಕ ಧಾರಾವಾಹಿ ಹೇಳಲಿದೆ.
4 ಗಂಡುಮಕ್ಕಳ ತಂದೆ ನಟರಾಜ. ಆತ ಡಾ. ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ. ಆ ಕಾರಣದಿಂದಲೇ ತನ್ನ ಮಕ್ಕಳಿಗೆ ಮುತ್ತುರಾಜ, ಕಂಠೀರವ, ಸತ್ಯ ಹರಿಶ್ಚಂದ್ರ, ಮಯೂರ ಎಂದು ಹೆಸರಿಟ್ಟಿದ್ದಾನೆ. ಈ 4 ಗಂಡು ಮಕ್ಕಳು ಒಬ್ಬೊಬ್ಬರು ಒಂದೊಂದು ದಿಕ್ಕು. ಒಬ್ಬೊಬ್ಬರದ್ದು ಒಂದೊಂದು ಹಾದಿ. ತಂದೆ ನಟರಾಜ ಕುಡುಕ. ಗೊತ್ತು ಗುರಿಯಿಲ್ಲದ ಬೇಜವಾಬ್ದಾರಿಯ ಮನುಷ್ಯ.
ನಟರಾಜ ಸಂಪಾದಿಸಿರುವುದು ಕೆಟ್ಟ ಹೆಸರು ಮಾತ್ರ. ಅವನಿಂದ ಮನೆಯ ಮಕ್ಕಳಿಗೂ ಕೆಟ್ಟ ಹೆಸರು. ಇಂಥ ಮನೆಗೆ ಯಾವ ಹೆಣ್ಣು ಕೂಡ ಬರಲು ಸಾಧ್ಯವಿಲ್ಲ. ಬಂದರೆ ಬದುಕೋದು ಅಸಾಧ್ಯ ಎಂದು ಊರಿನ ಜನರು ಮಾತಾಡಿಕೊಳ್ಳುತ್ತಾರೆ. ಈ ಮನೆಗೆ ಹುಡುಗಿಯೊಬ್ಬಳು ಬರುತ್ತಾಳೆ! ಬಂದ ಮೇಲೆ ಅದೇ ಮನೆಯಲ್ಲಿ ಯಾಕೆ ಉಳಿಯುತ್ತಾಳೆ? ಉಳಿದ ಮೇಲೆ ಆ ಮನೆಯನ್ನು ಹೇಗೆ ಸರಿ ಮಾಡುತ್ತಾಳೆ ಎಂಬುದು ಕೌತುಕ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಜೊತೆಯಾಗಿ ಸುತ್ತಾಡಿದ ಬಿಗ್ ಬಾಸ್ ಶಿಶಿರ್, ಐಶ್ವರ್ಯಾ
‘ಕಥಾ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಪರೀಕ್ಷಿತ್ ಎಂ.ಎಸ್, ಪ್ರದೀಪ್ ಆಜ್ರಿ ಅವರು ಈ ಧಾರಾವಾಹಿ ನಿರ್ಮಾಣ ಮಾಡಿದ್ದಾರೆ. ಈ ಧಾರಾವಾಹಿಗೆ ಪ್ರಕಾಶ್ ಮುಚ್ಚಳಗುಡ್ಡ ಅವರ ನಿರ್ದೇಶನ ಇರಲಿದೆ. ಶಿಶಿರ್ ಶಾಸ್ತ್ರಿ, ಸಂಜನಾ ಬುರ್ಲಿ, ಭವಿಷ್, ಕರಿಸುಬ್ಬು, ಅಶ್ವಥ್ ನೀನಾಸಂ, ಗಗನ್ ದೀಪ್, ಜಯಂತ್ ಮುಂತಾದವರು ‘ಶ್ರೀ ಗಂಧದ ಗುಡಿ’ ಧಾರಾವಾಹಿಯ ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.