
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಅಭಿಮಾನಿಗಳ ಹೆಮ್ಮೆಯ ‘ದಾದಾ’ ಸೌರವ್ ಗಂಗೂಲಿ (Sourav Ganguly) ಈಗ ಬಿಗ್ ಬಾಸ್ ಸಾಮ್ರಾಜ್ಯಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಮುಂಬರುವ ಸೆಪ್ಟೆಂಬರ್ 2026ರಿಂದ ಆರಂಭವಾಗಲಿರುವ ಜಿಯೋಸ್ಟಾರ್ (JioStar) ಸಂಸ್ಥೆಯ ‘ಬಿಗ್ ಬಾಸ್’ ಮೆಗಾ ಲಾಂಚ್‌ನಲ್ಲಿ ಗಂಗೂಲಿ ಅವರು ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ದೀರ್ಘಾವಧಿಯ ಬಿಡುವಿನ ನಂತರ ಕಂಬ್ಯಾಕ್ ಮಾಡುತ್ತಿರುವ ‘ಬಿಗ್ ಬಾಸ್ ಬಾಂಗ್ಲಾ’ (Bigg Boss Bangla) ಆವೃತ್ತಿಗೆ ಸೌರವ್ ಗಂಗೂಲಿ ನಿರೂಪಕರಾಗಿ ಆಯ್ಕೆಯಾಗಿದ್ದಾರೆ.
ಕ್ರಿಕೆಟ್ ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ನಾಯಕತ್ವ ಹಾಗೂ ಟಿವಿ ಶೋಗಳಲ್ಲಿ ತಮ್ಮ ಚಾಣಾಕ್ಷ ನಿರೂಪಣೆಯಿಂದ ಜನಪ್ರಿಯರಾಗಿರುವ ಸೌರವ್ ಗಂಗೂಲಿ, ಈಗ ಬಿಗ್ ಬಾಸ್ ಮನೆಯನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಈಗಾಗಲೇ ‘ಸ್ಟಾರ್ ಜಲ್ಸಾ’ ವಾಹಿನಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಬಿಗ್ ಬಾಸ್ ಬಾಂಗ್ಲಾ ಬರುತ್ತಿದೆ’ ಎಂದು ಸಣ್ಣ ಝಲಕ್ ಹಂಚಿಕೊಂಡಿದೆ.
ಸೆಪ್ಟೆಂಬರ್ 2026ರ ಹಬ್ಬದ ಸೀಸನ್‌ನಿಂದ ಏಕಕಾಲದಲ್ಲಿ ಆರಂಭವಾಗಲಿರುವ ಆರು ಭಾಷೆಗಳ ಬಿಗ್ ಬಾಸ್ ಪೈಕಿ ಬಾಂಗ್ಲಾ ಆವೃತ್ತಿಯೂ ಒಂದಾಗಿದೆ. ವೀಕ್ಷಕರು ಈ ಕಾರ್ಯಕ್ರಮವನ್ನು ‘ಸ್ಟಾರ್ ಜಲ್ಸಾ’ ವಾಹಿನಿಯಲ್ಲಿ ವೀಕ್ಷಿಸಬಹುದು. ಮೊಬೈಲ್ ಅಥವಾ ಡಿಜಿಟಲ್ ಪರದೆಯಲ್ಲಿ ವೀಕ್ಷಿಸಲು ಇಚ್ಛಿಸುವವರು ‘ಜಿಯೋಹಾಟ್‌ಸ್ಟಾರ್’ ಆ್ಯಪ್‌ನಲ್ಲಿ ಲೈವ್ ವೀಕ್ಷಿಸಬಹುದಾಗಿದೆ.
ಸೌರವ್ ಗಂಗೂಲಿ ಪ್ರಸ್ತುತ ‘ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್’ ಅಧ್ಯಕ್ಷರಾಗಿ ಹಾಗೂ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಬಿಸಿಸಿಐ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಬಂಗಾಳಿ ಕಿರುತೆರೆಯಲ್ಲಿ ಈಗಾಗಲೇ ಯಶಸ್ವಿ ಕ್ವಿಜ್ ಶೋ ನಡೆಸಿಕೊಟ್ಟಿರುವ ಗಂಗೂಲಿ ಅವರಿಗೆ ಬಿಗ್ ಬಾಸ್ ಸಂಪೂರ್ಣ ವಿಭಿನ್ನ ಹಾಗೂ ಸವಾಲಿನ ವೇದಿಕೆಯಾಗಲಿದೆ.
ಇದನ್ನೂ ಓದಿ: ತೆರೆಗೆ ಬರುತ್ತಿದೆ ‘ದಾದಾ’ನ ದಾದಾಗಿರಿ, ಬಿಡುಗಡೆ ದಿನಾಂಕ ಘೋಷಣೆ
ಜಿಯೋಸ್ಟಾರ್ ನೆಟ್‌ವರ್ಕ್‌ನಲ್ಲಿ ಸೆಪ್ಟೆಂಬರ್‌ನಿಂದ ಭಾರತದಾದ್ಯಂತ ಒಟ್ಟು 6 ಭಾಷೆಗಳಲ್ಲಿ ಬಿಗ್ ಬಾಸ್ ಅಬ್ಬರ ಶುರುವಾಗಲಿದ್ದು, ಆಯಾ ಭಾಷೆಯ ಸೂಪರ್‌ಸ್ಟಾರ್‌ಗಳು ಶೋ ಮುನ್ನಡೆಸಲಿದ್ದಾರೆ. ಈ ಬಾರಿಯ ಬಿಗ್ ಬಾಸ್ ಕನ್ನಡ ಆವೃತ್ತಿಯನ್ನು ಎಂದಿನಂತೆ ಕಿಚ್ಚ ಸುದೀಪ್ ಮುನ್ನಡೆಸಿದರೆ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಹಿಂದಿ ಆವೃತ್ತಿಯ ಸಾರಥ್ಯ ವಹಿಸಲಿದ್ದಾರೆ. ಇನ್ನು, ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ನಾಗಾರ್ಜುನ ಹಾಗೂ ಮಲಯಾಳಂನಲ್ಲಿ ಮೋಹನ್ ಲಾಲ್ ಅವರು ನಿರೂಪಕರಾಗಿ ವೀಕ್ಷಕರನ್ನು ರಂಜಿಸಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.