ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನ ನಿರೂಪಣೆ ಮಾಡುತ್ತಾ ಇರುವಾಗಲೇ ಅವರ ತಾಯಿ ಸರೋಜಾ ಸಂಜೀವ್ ಅವರ ಆರೋಗ್ಯದಲ್ಲಿ ಏರುಪೇರು ಆಗಿತ್ತು. ತಾಯಿಯ ಆರೋಗ್ಯ ಸಮಸ್ಯೆ ಗಂಭೀರವಾಗಿದೆ ಎಂಬುದು ಅವರಿಗೆ ಗೊತ್ತಾಗಿತ್ತು. ಹಾಗಿದ್ದರೂ ಕೂಡ ಅಂದಿನ ಶೋ ಮುಗಿಸಿಕೊಟ್ಟು ಅವರು ತಾಯಿಯನ್ನು ನೋಡಲು ತೆರಳಿದ್ದರು. ಅಷ್ಟರಲ್ಲಾಗಲೇ ಅವರ ತಾಯಿ ನಿಧನರಾಗಿದ್ದರು. ಈ ವಿಷಯದಿಂದ ಇಡೀ ಕರುನಾಡಿನ ಜನತೆಗೆ ಕಣ್ಣೀರು ಬಂತು. ಆದರೆ ಬಿಗ್ ಬಾಸ್ ಮನೆಯ ಸದಸ್ಯರಿಗೆ ಈ ಸುದ್ದಿಯೇ ಗೊತ್ತಿರಲಿಲ್ಲ. ಈಗ ಯೋಗರಾಜ್ ಭಟ್ ಅವರು ದೊಡ್ಮನೆಗೆ ಹೋಗಿ ಸುದ್ದಿ ತಿಳಿಸಿದ್ದಾರೆ.
ಕಳೆದ ಭಾನುವಾರ ಸುದೀಪ್ ಅವರು ಬಿಗ್ ಬಾಸ್ ಸಂಚಿಕೆಯ ಶೂಟಿಂಗ್ ಮಾಡಿರಲಿಲ್ಲ. ಆದರೆ ಅದಕ್ಕೆ ಕಾರಣ ಏನು ಎಂಬುದು ಬಿಗ್ ಬಾಸ್ ಮನೆಯೊಳಗೆ ಇರುವ ಯಾರಿಗೂ ತಿಳಿದಿರಲಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಊಹಿಸಿಕೊಂಡಿದ್ದರು. ಆದರೆ ಸುದೀಪ್ ಅವರ ತಾಯಿ ನಿಧನರಾಗಿದ್ದಾರೆ ಎಂಬುದನ್ನಂತೂ ಯಾರೂ ಊಹಿಸಿರಲಿಲ್ಲ. ಈಗ ಯೋಗರಾಜ್ ಭಟ್ ಅವರು ಎಲ್ಲವನ್ನೂ ಬಹಿರಂಗಪಡಿಸಿದ್ದಾರೆ.
‘ಶನಿವಾರ ಸುದೀಪ್ ಅವರ ತಾಯಿ ವಿಪರೀತ ಸೀರಿಯಸ್ ಆಗಿ ಐಸಿಯುನಲ್ಲಿ ಇದ್ದರು. ಈ ವಿಷಯ ಕೇಳಿದ ಮೇಲೂ ಕೂಡ ಅವರು ತಮ್ಮ ಬಿಗ್ ಬಾಸ್ನ ಕರ್ತವ್ಯವನ್ನು ಪೂರ್ಣಗೊಳಿಸಿದರು. ವಾರದ ಪಂಚಾಯ್ತಿಯನ್ನು ಅವರು ಅರ್ಥಕ್ಕೆ ನಿಲ್ಲಿಸಲಿಲ್ಲ. ಶನಿವಾರದ ಶೂಟಿಂಗ್ ಮುಗಿಸಿ ರಾತ್ರಿ ಮನೆಗೆ ಹೋಗಿ ಅವರು ಬಿಗ್ ಬಾಸ್ ಟೀಮ್ಗೆ ‘ನನ್ನ ತಾಯಿಯನ್ನು ಕಳೆದುಕೊಂಡೆ’ ಅಂತ ಸಂದೇಶ ಕಳಿಸಿದ್ದರು’ ಎಂದು ಶಾಕಿಂಗ್ ಸುದ್ದಿಯನ್ನು ಯೋಗರಾಜ್ ಭಟ್ ತಿಳಿಸಿದಾಗ ಬಿಗ್ ಬಾಸ್ ಮನೆಯ ಎಲ್ಲ ಸದಸ್ಯರೂ ಕಣ್ಣೀರು ಹಾಕಿದರು.
ಇದನ್ನೂ ಓದಿ: ಬಿಗ್ ಬಾಸ್ ತೊರೆಯಲು ಸುದೀಪ್ ನಿರ್ಧಾರ: ಇದೇ ಕೊನೆಯ ಸೀಸನ್; ಅಧಿಕೃತ ಘೋಷಣೆ
‘ಒಂದು ಕಡೆ ಕರ್ತವ್ಯ, ಇನ್ನೊಂದು ಕಡೆ ತಾಯಿ. ತುಂಬ ಆಸೆಪಟ್ಟಿದ್ದರು. ಒಂದು ವೇಳೆ ಕೊನೆಯ ಗಳಿಗೆಯಲ್ಲಿ ಮಗನ ಕೈ ಹಿಡಿದುಕೊಂಡು ಆ ತಾಯಿ ಏನು ಮಾತನಾಡುತ್ತಿತ್ತೋ ಗೊತ್ತಿಲ್ಲ. ಸುದೀಪ್ ಅವರು ತುಂಬ ಸೂಕ್ಷ್ಮ ವ್ಯಕ್ತಿ. ಅವರಿಗೆ ಬಹಳ ಎಮೋಷನ್ಸ್ ಇದೆ. ಅವರ ದೊಡ್ಡತನವನ್ನು ಕಲ್ಪನೆ ಕೂಡ ಮಾಡೋಕೆ ಆಗಲ್ಲ. ಅಂದು ನಿಮ್ಮ ಗಲಾಟೆಗಳನ್ನೆಲ್ಲ ಅಟೆಂಡ್ ಮಾಡದೇ ಇದ್ದಿದ್ದರೆ ಕೊನೆಯ ಒಂದು ಅಥವಾ ಎರಡು ಗಂಟೆ ಅವರು ತಾಯಿಯ ಜೊತೆ ಇರಬಹುದಿತ್ತು’ ಎಂದರು ಯೋಗರಾಜ್ ಭಟ್. ಈ ಎಲ್ಲ ವಿಷಯ ತಿಳಿದ ಬಳಿಕ ಉಗ್ರಂ ಮಂಜು, ಅನುಷಾ ರೈ, ಗೌತಮಿ ಜಾದವ್ ಸೇರಿದಂತೆ ಎಲ್ಲರೂ ಕಣ್ಣೀರು ಹಾಕಿದರು. ಸುದೀಪ್ ಅವರ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಿಗ್ ಬಾಸ್ ಮನೆಯಲ್ಲಿ ಮೌನಾಚರಣೆ ಮಾಡಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.